ಲೋಕಾಯುಕ್ತ ದಾಳಿ, ಗ್ರಾಮ ಪಂಚಾಯ್ತಿ ಸದಸ್ಯರ ಬಳಿ ಕೋಟ್ಯಾಂತ ರೂ.ಮೌಲ್ಯದ ಸಂಪತ್ತು ಪತ್ತೆ
ರಾಜ್ಯದ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ಒಟ್ಟು ಆರು ಅಧಿಕಾರಿಗಳ ಮೇಲೆ ಇಂದು (ಮಂಗಳವಾರ) ದಾಳಿ ಮಾಡಿದ್ದು, ದಾಳಿ ವೇಳೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಿಡಿಓಗಳ ಬಳಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ. ಹಾಗಾದ್ರೆ, ಯಾರ ಬಳಿ ಎಷ್ಟು ಆಸ್ತಿ ಇದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಜನವರಿ 09): ರಾಜ್ಯದ ಆರು ಅಧಿಕಾರಿಗಳ ಮೇಲೆ ಇಂದು (ಮಂಗಳವಾರ) ಲೋಕಾಯುಕ್ತ ದಾಳಿ (Karnataka lokayukta raid) ಮಾಡಿದೆ. ಬೆಂಗಳೂರು, ಬಳ್ಳಾರಿ, ಚಿತ್ರದುರ್ಗ, ರಾಮನಗರ, ಬೆಂಗಳೂರಿನಲ್ಲಿ ಈ ದಾಳಿಗಳು ನಡೆದಿದ್ದು, ಕೋಟ್ಯಂತರ ರೂ. ನಗದು, ರಾಶಿ ರಾಶಿ ಚಿನ್ನಾಭರಣ ಮತ್ತು ದುಬಾರಿ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಅದರಲ್ಲೂ ಮುಖ್ಯವಾಗಿ ಓರ್ವ ಗ್ರಾಮ ಪಂಚಾಯಿತಿ ಸದಸ್ಯನ ಬಳಿ ಬರೋಬ್ಬರಿ 25.58 ಕೋಟಿ ಮೌಲ್ಯದ ಸ್ಥಿರ, ಚರಾಸ್ತಿ ಇರುವುದು ಪತ್ತೆಯಾಗಿದೆ. ಬೆಂಗಳೂರು ದಕ್ಷಿಣ ತಾಲೂಕು ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ H.S.ಸುರೇಶ್ 25.58 ಕೋಟಿ ಮೌಲ್ಯದ ಸ್ಥಿರ, ಚರಾಸ್ತಿ ಹೊಂದಿದ್ದಾರೆ ಎನ್ನುವುದು ಲೋಕಾಯುಕ್ತ ದಾಳಿಯಿಂದ ಬಯಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕು ಚನ್ನೇನಹಳ್ಳಿ ಗ್ರಾ.ಪಂ ಸದಸ್ಯ H.S.ಸುರೇಶ್ ಬಳಿ 16 ನಿವೇಶನಗಳು, ಒಂದು ವಾಸದ ಮನೆ, 7.6 ಎಕರೆ ಕೃಷಿ ಜಮೀನು, 2,11,26,250 ಮೌಲ್ಯದ ಚಿನ್ನ, 2,07,25,000 ಮೌಲ್ಯದ ವಾಹನ ಹೀಗೆ ಒಟ್ಟು ಸೇರಿ 25,58,19.010(25.58 ಕೋಟಿ ರೂ.) ಮೌಲ್ಯ ಸಂಪತ್ತು ಇರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ಚಿನ್ನಾಭರಣ, ಕಂತೆ ಕಂತೆ ನೋಟು ಪತ್ತೆ
ಪಿಡಿಓ ಡಿಎಂ ಪದ್ಮನಾಭ ಬಳಿ 5.98 ಕೋಟಿ ರೂ. ಆಸ್ತಿ
ದೇವನಹಳ್ಳಿಯ ಕುಂದಾಣ ಗ್ರಾಮ ಪಂಚಾಯ್ತಿ ಪಿಡಿಓ ಡಿಎಂ ಪದ್ಮನಾಭ ಒಟ್ಟು 5.98 ಕೋಟಿ ರೂ. ಆಸ್ತಿ ಮೌಲ್ಯ ಹೊಂದಿದ್ದಾರೆ. 1 ಕೈಗಾರಿಕ ನಿವೇಶನ, 2 ವಾಸದ ಮನೆ, 8.18 ಎಕರೆ ಕೃಷಿ ಜಮೀನು, 1 ಫಾರ್ಮ್ ಹೌಸ್ ,2.62 ಲಕ್ಷ ರೂ, ನಗದು, 17.24 ಲಕ್ಷ ಬೆಲೆ ಬಾಳುವ ಚಿನ್ನಾಭರಣ, 28.75 ಲಕ್ಷ ಬೆಲೆ ಬಾಳುವ ವಾಹನ, 15 ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು ಸೇರಿ ಒಟ್ಟು ಆಸ್ತಿ ಮೌಲ್ಯ 5.98 ಕೋಟಿ ರೂ. ಸಂಪತ್ತು ಇರುವುದು ಕಂಡುಬಂದಿದೆ.
ಪಿಡಬ್ಲ್ಯುಡಿ ಅಧೀಕ್ಷಕ ಅಭಿಯಂತರರ ಆಸ್ತಿ ಎಷ್ಟು?
ಬೆಂಗಳೂರು ಪಿಡಬ್ಲ್ಯುಡಿ ಅಧೀಕ್ಷಕ ಅಭಿಯಂತರ ಸತೀಶ್ ಬಾಬು ಮನೆಗಳ ಮೇಲೂ ಲೋಕಾಯುಕ್ತ ದಾಳಿಯಾಗಿದ್ದು, ಒಟ್ಟು 4.52 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಒಂದು ನಿವೇಶನ, 2 ವಾಸದ ಮನೆಗಳು, 15 ಎಕರೆ ಕೃಷಿ ಭೂಮಿ, 64.62 ಲಕ್ಷ ಮೌಲ್ಯದ ಚಿನ್ನ, 9 ಲಕ್ಷ ರೂ. ನಗದು, 8.7 ಲಕ್ಷ ಮೌಲ್ಯದ ವಾಹನ ಪತ್ತೆಯಾಗಿದೆ.
ಆನೇಕಲ್ ನಗರ ಯೋಜನೆ ಜಂಟಿ ನಿರ್ದೇಶಕನ ಮೇಲೂ ದಾಳಿ
ಆನೇಕಲ್ ನಗರ ಯೋಜನೆ ಜಂಟಿ ನಿರ್ದೇಶಕ ಮಂಜೇಶ್.ಬಿ ಮೇಲೆ ಲೋಕಾಯುಕ್ತ ದಾಳಿಯಾಗಿದ್ದು, ಈ ವೇಳೆ ವೇಳೆ 3.18 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. 11 ನಿವೇಶನ, 1 ವಾಸದ ಮನೆ, 35.97 ಲಕ್ಷ ಬೆಲೆ ಬಾಳುವ ಚಿನ್ನಾಭರಣ, 7.71 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, 5 ಲಕ್ಷ ರೂ. ನಗದು ಪತ್ತೆಯಾಗಿದೆ.
ಬೆಸ್ಕಾಂ ಸಿಜೆಎಂ ನಾಗರಾಜ್ ಬಳಿ 6.37 ಕೋಟಿ ಮೌಲ್ಯದ ಆಸ್ತಿ ಪತ್ತೆ
ಎಂ.ಎಲ್.ನಾಗರಾಜ್ ಬಳಿ 13 ನಿವೇಶನ, 2 ವಾಸದ ಮನೆಗಳು, ಕೃಷಿ ಜಮೀನು ಸೇರಿದಂತೆ 5.38 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಹಾಗೇ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 6.77 ಲಕ್ಷ ರೂ. 11.19 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು, 13.50 ಲಕ್ಷ ಮೌಲ್ಯದ ವಾಹನ ಸೇರಿ 6.37 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.