ಲಾರಿ ಮುಷ್ಕರ: ಇಂದಿನಿಂದ ಮತ್ತಷ್ಟು ತೀವ್ರ ಹೋರಾಟ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವ ಸಾಧ್ಯತೆ

Karnataka Lorry Strike: ಲಾರಿ ಮಾಲೀಕರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಧಾನ ವಿಫಲ ಆಗಿದ್ದು, ಇಂದಿನಿಂದ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಲಾರಿ ಮಾಲೀಕರು ಮುಂದಾಗಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಈಗಾಗಲೇ ವ್ಯತ್ಯಯ ಶುರುವಾಗಿದ್ದು, ಗ್ರಾಹಕರಿಗೂ ಬೆಲೆ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ.

ಲಾರಿ ಮುಷ್ಕರ: ಇಂದಿನಿಂದ ಮತ್ತಷ್ಟು ತೀವ್ರ ಹೋರಾಟ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವ ಸಾಧ್ಯತೆ
ಮೈಸೂರಿನಲ್ಲಿ ನಿಲ್ದಾಣದಲ್ಲೇ ನಿಂತಿರುವ ಲಾರಿಗಳು

Updated on: Apr 17, 2025 | 6:54 AM

ಬೆಂಗಳೂರು, ಏಪ್ರಿಲ್ 17: ಸೋಮವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿರುವ ಲಾರಿ ಮುಷ್ಕರ (Karnataka Lorry Strike) ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ಸಂಧಾನ ವಿಫಲವಾಗಿದ್ದು, ಇಂದಿನಿಂದ ಹೋರಾಟ ತೀವ್ರಗೊಳಿಸಲು ಲಾರಿ ಮಾಲೀಕರು (Lorry Owners) ಮುಂದಾಗಿದ್ದಾರೆ. ಲಾರಿಗಳು ನಿಂತಲ್ಲೇ ನಿಂತಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಆಗುತ್ತಿದೆ. ಹೀಗಾಗಿ, ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಅಭಾವದ ಬಿಸಿ ತಟ್ಟಲು ಶುರುವಾಗಿದೆ. ಮಾರುಕಟ್ಟೆಗಳಲ್ಲಿ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಅನೇಕ ವಸ್ತುಗಳು ದುಬಾರಿಯಾಗಿವೆ.

ಲಾರಿ ಬಂದ್ ಆಗಿದ್ದನ್ನೇ ಮುಂದಿಟ್ಟುಕೊಂಡು ಕಾಳಸಂತೆ ದಂಧೆಕೋರರು ಇವತ್ತಿನಿಂದ ಕೃತಕ ಅಭಾವ ಸೃಷ್ಟಿಸುವ ಸಾಧ್ಯತೆಯೂ ಇದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಭೀತಿ ಕಾಡುತ್ತಿದೆ ಎಂದು ಬೆಂಗಳೂರಿನ ಕೆಲವು ಮಂದಿ ಅಂಗಡಿ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಗೂಡ್ಸ್‌ ರೈಲಿನಿಂದ ಅನ್‌ಲೋಡ್‌ ಆಗುತ್ತಿಲ್ಲ ಗೊಬ್ಬರ, ಸಿಮೆಂಟ್‌

ಗೂಡ್ಸ್‌ ರೈಲು ಮೂಲಕ ಮೈಸೂರಿಗೆ ರಸಗೊಬ್ಬರ, ಸಿಮೆಂಟ್‌ ಬಂದಿದೆ. ಆದರೆ 400 ಕ್ಕೂ ಹೆಚ್ಚು ಲಾರಿಗಳು ನಿಂತಲ್ಲೇ ನಿಂತಿರುವುದರಿಂದ ಐಟಂಗಳು ಅನ್‌ಲೋಡ್ ಆಗುತ್ತಿಲ್ಲ.

ಇದನ್ನೂ ಓದಿ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಮೋದಿ ನಿಮ್ಮ ಸರ್ಕಾರ ಬೀಳಿಸುತ್ತಾರೆ, ಹುಷಾರಾಗಿರಿ: ಮಲ್ಲಿಕಾರ್ಜುನ್​ ಖರ್ಗೆ
ಕರ್ನಾಟಕ ಲಾರಿ ಮುಷ್ಕರ ಶುರು; ಲಾರಿ, ಟ್ರಕ್ ಸಂಚಾರ ಸ್ಥಗಿತ
ಲಾರಿ ಮುಷ್ಕರ ನಿಶ್ಚಿತ: ಸರ್ಕಾರ ಕರೆದರೆ ಮಾತುಕತೆಗೆ ಸಿದ್ಧವೆಂದ ಷಣ್ಮುಗಪ್ಪ

ಚಿಕ್ಕಮಗಳೂರಿನಲ್ಲಿ 2 ಸಾವಿರ ಲಾರಿಗಳು ಸಂಚಾರ ಬಂದ್‌ ಮಾಡಿವೆ. ನಿತ್ಯ ಕಾಫಿ, ಮೆಣಸು, ಟಿಂಬರ್‌ , ಶುಂಠಿ ಎಂದು ಪಾಕಿಸ್ತಾನದ ಗಡಿವರೆಗೂ ಲಾರಿಗಳು ವಸ್ತುಗಳನ್ನು ಸಾಗಾಟ ಮಾಡುತ್ತಿದ್ದವು. ಆದರೆ ಈಗ ಮುಷ್ಕರದಿಂದಾಗಿ ವಹಿವಾಟು ಬಂದ್ ಆಗಿದೆ ಎಂದು ಚಿಕ್ಕಮಗಳೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶಿವಾನಂದ್ ತಿಳಿಸಿದ್ದಾರೆ.

ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವರು, ರಾಜ್ಯ ಹೆದ್ದಾರಿಯ ಟೋಲ್‌ ಮಾತ್ರ ತೆಗೆಯಿರಿ ಎನ್ನುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಟೋಲ್‌ ಬಗ್ಗೆ ಮಾಲೀಕರು ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರ ಡೀಸೆಲ್‌ ದರ ಹೆಚ್ಚಿಸಿದಾಗ ಯಾಕೆ ಪ್ರತಿಭಟಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರಮುಖವಾಗಿ ಡೀಸೆಲ್‌ ಬೆಲೆ ಇಳಿಕೆ ಮಾಡಬೇಕು ಎಂದು ಲಾರಿ ಮಾಲೀಕರು ಆಗ್ರಹಿಸುತ್ತಿದ್ದು, ಸರ್ಕಾರ ಒಪ್ಪುತ್ತಿಲ್ಲ. ಆದರೆ, ಹೀಗೆಯೇ ಮುಂದುವರಿದರೆ ರಾಜ್ಯದ ಜನತೆಗೆ ಸಂಕಷ್ಟ ತಪ್ಪಿದ್ದಲ್ಲ.

ಮುಷ್ಕರದಿಂದ ಯಾವುದಕ್ಕೆಲ್ಲ ವಿನಾಯಿತಿ?

ಅನಿರ್ದಿಷ್ಟಾವಧಿ ಮುಷ್ಕರದಿಂದ ತರಕಾರಿಗಳು, ಆಹಾರ ಪದಾರ್ಥಗಳು, ಹಾಲು ಮತ್ತು ಔಷಧಿಗಳಂತಹ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಆದಾಗ್ಯೂ, ಇತರ ರಾಜ್ಯಗಳಿಂದ ಲಾರಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಸರಬರಾಜಿಗೆ ಅಡ್ಡಿಯಾಗಿ ಮತ್ತು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಯಾವೆಲ್ಲ ವಸ್ತುಗಳ ಬೆಲೆ ಏರಿಕೆ?

ಲಾರಿ ಮುಷ್ಕರ ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಆಲೂಗಡ್ಡೆ, ಬೆಳ್ಳುಳ್ಳಿ, ಅಕ್ಕಿ, ಗೋಧಿ ಮತ್ತು ದ್ವಿದಳ ಧಾನ್ಯಗಳಂತಹ ಪ್ರಮುಖ ವಸ್ತುಗಳ ಪೂರೈಕೆಯ ಮೇಲೆ ಪರಿಣಾಮ ಬೀರಲಿದೆ. ಇದರಿಂದಾಗಿ ಅವುಗಳ ಬೆಲೆ ಏರಿಕೆಯಾಗಬಹುದು ಎಂದು ಬೆಂಗಳೂರು ವಾಣಿಜ್ಯ ವಾಹನ ಸಂಘದ ಕಾರ್ಯದರ್ಶಿ ರಾಜೇಶ್ ಎಚ್ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳದಿಂದ ಬುಧವಾರ ಕರ್ನಾಟಕಕ್ಕೆ ಕೇವಲ ಶೇ. 10 ರಷ್ಟು ವಾಹನಗಳು ಮಾತ್ರ ಪ್ರವೇಶಿಸಿವೆ ಎಂಬ ಅಂಕಿಅಂಶವನ್ನು ಅವರು ನೀಡಿದ್ದಾರೆ.

ಇದನ್ನೂ ಓದಿ: ಲಾರಿ ಮುಷ್ಕರ: ಮೈಸೂರಿನ ಗೂಡ್ಸ್ ​ಶೆಡ್​ನಲ್ಲಿ 400ಕ್ಕೂ ಹೆಚ್ಚು ಲಾರಿಗಳು ನಿಶ್ಚಲ ಸ್ಥಿತಿಯಲ್ಲಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ