ಅಭಿವೃದ್ಧಿ ಯೋಜನೆಗಳಿಗೆ ಹಣ ಸಿಗ್ತಿಲ್ಲ: ಹೈಕಮಾಂಡ್ ಮುಂದೆ ಗ್ಯಾರಂಟಿ ಯೋಜನೆ ಪರಿಷ್ಕರಣೆಗೆ ಸಚಿವರ ಡಿಮ್ಯಾಂಡ್

| Updated By: Ganapathi Sharma

Updated on: Aug 14, 2024 | 3:08 PM

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಭರ್ಜರಿ ಬಹುಮತ ಪಡೆಯಲು ಐದು ಉಚಿತ ಗ್ಯಾರಂಟಿಗಳೂ ನೆರವಾಗಿದ್ದವು. ಆದರೆ ಈಗ ಅದೇ ಗ್ಯಾರಂಟಿ ಯೋಜನೆಗಳು ಹೊರೆ ಆಗುತ್ತಿವೆ ಎಂದು ಅದೇ ಕಾಂಗ್ರೆಸ್ ಪಕ್ಷದ ನಾಯಕರು, ಸಚಿವರು ಹೇಳ್ತಿದ್ದಾರೆ. ಅಷ್ಟೇ ಅಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಮಾರ್ಪಾಡು ಮಾಡಬೇಕೆಂದು ಹೈಕಮಾಂಡ್ ಮುಂದೆ ಮೊರೆಯಿಟ್ಟಿದ್ದಾರೆ.

ಅಭಿವೃದ್ಧಿ ಯೋಜನೆಗಳಿಗೆ ಹಣ ಸಿಗ್ತಿಲ್ಲ: ಹೈಕಮಾಂಡ್ ಮುಂದೆ ಗ್ಯಾರಂಟಿ ಯೋಜನೆ ಪರಿಷ್ಕರಣೆಗೆ ಸಚಿವರ ಡಿಮ್ಯಾಂಡ್
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು
Follow us on

ಬೆಂಗಳೂರು, ಆಗಸ್ಟ್ 14: ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಗ್ಯಾರಂಟಿ, 200 ಯೂನಿಟ್ ವರೆಗೂ ವಿದ್ಯುತ್ ಉಚಿತ ಕೊಡುವ ಗೃಹಜ್ಯೋತಿ ಗ್ಯಾರಂಟಿ, ಮನೆ ಯಜಮಾನಿಯರಿಗೆ ತಿಂಗಳಿಗೆ 2,000 ರೂಪಾಯಿ ಕೊಡುವ ಗೃಹಲಕ್ಷ್ಮೀ ಗ್ಯಾರಂಟಿ, ಅನ್ನಭಾಗ್ಯ, ಯುವನಿಧಿ ಗ್ಯಾರಂಟಿ, ಹೀಗೆ ಭರ್ತಿ ಐದು ಗ್ಯಾರಂಟಿಗಳ ಅಸ್ತ್ರದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತ ಪಡೆದು ಅಧಿಕಾರದ ಗದ್ದುಗೆಗೆ ಏರಿತ್ತು. ಅಧಿಕಾರಕ್ಕೆ ಏರಿದ ಕೆಲವೇ ತಿಂಗಳಲ್ಲಿ ಎಲ್ಲಾ ಗ್ಯಾರಂಟಿಗಳನ್ನ ಜಾರಿಗೊಳಿಸಿತ್ತು. ಇದೀಗ ಗ್ಯಾರಂಟಿ ವಿಚಾರದಲ್ಲಿ ಸಚಿವರಲ್ಲೇ ಅಪಸ್ವರ ಕೇಳಿ ಬಂದಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿ ವಿಚಾರವಾಗಿ ವಿಪಕ್ಷ ಮತ್ತು ಆಡಳಿತ ಪಕ್ಷದ ನಡುವೆ ಜಟಾಪಟಿಗಳು ನಡೆಯುತ್ತಲೇ ಇವೆ. ತೀರಾ ಇತ್ತೀಚೆಗಷ್ಟೇ ಜನಾಂದೋಲನ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ವಿಪಕ್ಷಗಳು ಗ್ಯಾರಂಟಿ ನಿಲ್ಲಿಸಲು ಹುನ್ನಾರ ಮಾಡುತ್ತಿವೆ. ಆದರೆ ಅದು ಅವರ ಹಣೆಯಲ್ಲೂ ಬರೆದಿಲ್ಲ ಎಂದಿದ್ದರು.

ಅತ್ತ ಸಿಎಂ ಸಿದ್ದರಾಮಯ್ಯ ಸಹ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಮಂಗಳವಾರ ದೆಹಲಿಯಲ್ಲಿ ಬೇರೆಯದ್ದೇ ಬೆಳವಣಿಗೆ ನಡೆದಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ. ಗ್ಯಾರಂಟಿ ಒತ್ತಡ ಕಡಿಮೆ ಮಾಡುವಂತೆ ಖುದ್ದು ಸಚಿವ ಸತೀಶ್ ಜಾರಕಿಹೊಳಿ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಮಂಗಳವಾರ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ರಾಜ್ಯಾಧ್ಯಕ್ಷರ ಸಭೆ ನಡೆಸಲಾಗಿತ್ತು. ಈ ಸಭೆ ಬಳಿಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಗ್ಯಾರಂಟಿ ಪರಿಷ್ಕರಣೆ ಕುರಿತು ಮನವಿ ಮಾಡಿದ್ದಾರೆ.

‘ಗ್ಯಾರಂಟಿ’ ಪರಿಷ್ಕರಣೆಗೆ ಮನವಿ!

ಗ್ಯಾರಂಟಿ ಯೋಜನೆಗಳಿಗೆ ಭಾರಿ ಹಣ ಖರ್ಚಾಗುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಎದುರಾಗಿದೆ. ಅಲ್ಲದೆ ಶ್ರೀಮಂತರು ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ವಿಚಿತ್ರ ಏನಂದರೆ ಗ್ಯಾರಂಟಿ ಲಾಭ ಪಡೆದರೂ ಲೇವಡಿ ಮಾಡುತ್ತಾರೆ. ಅವರು ಕಾಂಗ್ರೆಸ್ ಪರ ನಿಲ್ಲುವುದಿಲ್ಲ ಎಂದು ವಾದ ಮುಂದಿಟ್ಟಿದ್ದಾರೆ. ಶ್ರೀಮಂತರನ್ನ ಕೈ ಬಿಟ್ರೆ 20 ಸಾವಿರ ಕೋಟಿ ರೂಪಾಯಿ ಉಳಿತಾಯ ಮಾಡಬಹುದು. ಈ ಹಣವನ್ನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಕೆ ಮಾಡಬಹುದು. ಇನ್ನು ಮನೆ ಯಜಮಾನಿಗೆ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ವೈಜ್ಞಾನಿಕ ಮಾನದಂಡ ರೂಪಿಸಿಲ್ಲ. ಈ ಗೃಹಲಕ್ಷ್ಮೀ ಯೋಜನೆ ಬಡವರಿಗೆ ಮಾತ್ರ ಲಾಭ ಸಿಗುವಂತೆ ನಿಯಮ ಪರಿಷ್ಕರಣೆ ಮಾಡಬೇಕು. ಹೀಗೆ ಗ್ಯಾರಂಟಿ ಯೋಜನೆಗಳಲ್ಲಿ ಕೆಲವೊಂದನ್ನ ಪರಿಷ್ಕರಿಸಬೇಕು ಈ ಮೂಲಕ ದಲಿತರ ಹಣ ದುರ್ಬಳಕೆ ಆರೋಪವನ್ನ ತಪ್ಪಿಸಬಹುದು ಎಂದು ಹೈಕಮಾಂಡ್ ಮುಂದೆ ಸಚಿವರು ವಾದ ಮುಂದಿಟ್ಟಿದ್ದಾರೆ.

ಹೈಕಮಾಂಡ್ ಮುಂದೆ ತಾವಿಟ್ಟ ವಾದದ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಸಚಿವ ಸತೀಶ್ ಜಾರಕಿಹೊಳಿ, ಗ್ಯಾರಂಟಿ ಬಂದ್ ಮಾಡಬೇಕೆಂದು ನಾನು ಹೇಳಿಲ್ಲ. ಗ್ಯಾರಂಟಿಗಳನ್ನು ಪರಿಷ್ಕರಣೆ ಮಾಡುವುದಕ್ಕೆ ಸಲಹೆ ನೀಡಿದ್ದೇನೆ. ಜನರ ಅಭಿಪ್ರಾಯವನ್ನು ಹೈಕಮಾಂಡ್​​ಗೆ ತಿಳಿಸಿದ್ದೇನೆ ಎಂದಿದ್ದಾರೆ.

ಅನ್ನಭಾಗ್ಯ ಯೋಜನೆಯಲ್ಲಿ ಪರಿಷ್ಕರಣೆ: ಮುನಿಯಪ್ಪ ಸುಳಿವು

ಸತೀಶ್ ಜಾರಕಿಹಳಿ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಮುನಿಯಪ್ಪ, ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ. ಹೀಗಿದ್ದರೂ ಶಕ್ತಿ ಯೋಜನೆ ಒಂದನ್ನ ಬಿಟ್ಟು ಉಳಿದ ಗ್ಯಾರಂಟಿಯೋಜನೆಗಳನ್ನ ಪರಿಷ್ಕರಣೆ ಮಾಡಬಹುದು ಎಂದಿದ್ದಾರೆ. ಯಾರು ಅರ್ಹರಿದ್ದಾರೆ ಅವರಿಗೆ ಮಾತ್ರ ಅನ್ನಭಾಗ್ಯ ಕೊಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆ: ಅಕ್ಕಿ ಬದಲು ಹಣವಲ್ಲ, ಇನ್ನು ಸಿಗಲಿದೆ ಎಣ್ಣೆ, ಬೇಳೆ, ಸಕ್ಕರೆ

ಇನ್ನು ಸಚಿವ ಮಧು ಬಂಗಾರಪ್ಪ ಕೂಡ, ಕೆಲವೊಂದು ಯೋಜನೆಗಳು ದುರ್ಬಳಕೆ ಆಗುತ್ತಿವೆ. ಹಾಗೆ ಆಗಬಾರದು ಎಂದಿದ್ದಾರೆ.

ಈ ಮಧ್ಯೆ, ಐದು ಗ್ಯಾರಂಟಿಗಳಲ್ಲಿ ಯಾವುದೇ ಪರಿಷ್ಕರಣೆ ಮಾಡಲ್ಲ. ಆದರೆ, ನಕಲಿ ಬಿಪಿಎಲ್​ ಕಾರ್ಡ್​ ರದ್ದು ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Wed, 14 August 24