ಬೆಂಗಳೂರು, ಮೇ 27: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿದಿದ್ದು, ಜೂನ್ 4ಕ್ಕೆ ಫಲಿತಾಂಶ ಬರಲಿದೆ. ಇದರ ಮಧ್ಯೆ ಜೂನ್ 3 ಮತ್ತು ಜೂನ್ 13 ರಂದು ಪರಿಷತ್ ಚುನಾವಣೆ (MLC Elections) ನಡೆಯಲಿದ್ದು, ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮೇಲ್ಮನೆಯಲ್ಲಿ ಹಿಡಿತ ಸಾಧಿಸಲು ಬಿಜೆಪಿ-ಜೆಡಿಎಸ್ (BJP JDS) ಒಂದೆಡೆ ರಣತಂತ್ರ ರೂಪಿಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ (Congress) ಕೂಡಾ ಕಸರತ್ತು ಮಾಡುತ್ತಿದೆ. ಆದರೆ, ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯೇ ಕಾಂಗ್ರೆಸ್‌ಗೆ ತಲೆಬಿಸಿಯಾಗಿದೆ.
ಮೇಲ್ಮನೆಯ11 ಸ್ಥಾನಗಳಿಗೆ ಜೂನ್13 ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಜೂನ್ 3 ಕೊನೆಯ ದಿನಾಂಕವಾಗಿದೆ. ಇದರಲ್ಲಿ 7 ಸ್ಥಾನ ಗೆಲ್ಲು ಕಾಂಗ್ರೆಸ್‌ಗೆ ಅವಕಾಶವಿದೆ. ಆದರೆ, ಈ ಏಳು ಸ್ಥಾನಕ್ಕೆ 100 ಕ್ಕೂ ಹೆಚ್ಚು ಆಕಾಂಕ್ಷಿಗಳು ಟವೆಲ್ ಹಾಕಿದ್ದಾರೆ. ಹೀಗಾಗಿ ಮೇ, 28 ಮತ್ತು 29ರಂದು ದೆಹಲಿಗೆ ತೆರಳಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಜ್ಜಾಗಿದ್ದು, ದೆಹಲಿಯಲ್ಲೇ ಅಭ್ಯರ್ಥಿಗಳ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ. ಹೀಗಾಗಿ ಆಕಾಂಕ್ಷಿಗಳ ದಂಡೇ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡುತ್ತಿದ್ದು, ಲಾಬಿ ಮುಂದುವರೆಸಿದ್ದಾರೆ.
ಭಾನುವಾರ ಡಿಸಿಎಂ ಭೇಟಿ ಮಾಡಿದ್ದ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರಿನ ಇಬ್ಬರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ಇತ್ತ ವಿಧಾನ ಪರಿಷತ್ ಚುನಾವಣೆ ಗೆಲ್ಲಲು ದೋಸ್ತಿ ನಾಯಕರು ಭಾನುವಾರ ಮೊದಲ ಸಮನ್ವಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಜೂನ್ 3ರಂದು ನಡೆಯೋ ಶಿಕ್ಷಕ, ಮತ್ತು ಪದವೀಧರ ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರ ರೂಪಿಸಲಾಯಿತು. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್, ಶಾಸಕ ಅಶ್ವತ್ಥ್ ನಾರಾಯಣ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ವಾಗ್ದಾನ ಮಾಡೋದರ ಜೊತೆಗೆ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ನಾನು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದರು: ರಘುಪತಿ ಭಟ್
ಬಿಜೆಪಿಯಲ್ಲೂ ಮೂರು ಸ್ಥಾನಕ್ಕೆ 40 ಆಕಾಂಕ್ಷಿಗಳು ಲಾಬಿ ಮಾಡ್ತಿದ್ದಾರೆ. ಈ ಲಾಬಿಯ ಮಧ್ಯೆ ಅತ್ತ ಮೈಸೂರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಭೆ ನಡೆಸಿದ್ದಾರೆ. ಎನ್‌ಡಿಎ ಅಭ್ಯರ್ಥಿ ವಿವೇಕಾನಂದರನ್ನು ಗೆಲ್ಲಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಎಲ್ಲಾ 6 ಕ್ಷೇತ್ರಗಳನ್ನು ಗೆಲ್ಲಲು ನಾವು ತಯಾರಿ ಮಾಡಿಕೊಂಡಿದ್ದೇವೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದಿಂದ ಟಿಕೆಟ್ ಮಿಸ್ ಆಗಿದ್ದಕ್ಕೆ ಮಾಜಿ ಶಾಸಕ ರಘುಪತಿ ಭಟ್ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಪಕ್ಷ ರಘುಪತಿ ಭಟ್‌ರನ್ನ ಮುಂದಿನ 6 ವರ್ಷಕ್ಕೆ ವಜಾಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಘುಪತಿ ಭಟ್, ಕಾರ್ಯಕರ್ತನನ್ನ ಪಕ್ಷದಿಂದ ವಜಾ ಮಾಡಲು ಆಗಲ್ಲ. ನನಗೆ ಯಾವ ಹುದ್ದೆಯಿಂದ ವಜಾ ಮಾಡಿದ್ದೀರಾ ಹೇಳಿ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ