ನಾನು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದರು: ರಘುಪತಿ ಭಟ್
ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟಿಸಲಾಗಿದೆ. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕೈಹಿಡಿದು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದ್ದಾರೆ. ಪಕ್ಷ ನನ್ನ ಯಾವ ಹುದ್ದೆಯಿಂದ ವಜಾ ಮಾಡಿದೆ ಹೇಳಲಿ ಎಂದು ಪ್ರಶ್ನೆ ಮಾಡಿದ್ದಾರೆ.
ಉಡುಪಿ, ಮೇ 26: ಶಿಸ್ತು ಸಮಿತಿಯ ನೋಟಿಸ್ ಈವರೆಗೂ ನನಗೆ ತಲುಪಿಲ್ಲ. ಮಾಧ್ಯಮಗಳ ಮೂಲಕ ಉಚ್ಚಾಟನೆ ಎಂದು ಗೊತ್ತಾಯಿತು. ಪಕ್ಷ ನನ್ನ ಯಾವ ಹುದ್ದೆಯಿಂದ ವಜಾ ಮಾಡಿದೆ ಹೇಳಲಿ ಎಂದು ಮಾಜಿ ಶಾಸಕ ರಘುಪತಿ ಭಟ್ (Raghupati Bhat) ಬಿಜೆಪಿಗೆ (BJP) ಪ್ರಶ್ನೆ ಮಾಡಿದ್ದಾರೆ. ಬಿಜೆಪಿಯಿಂದ 6 ವರ್ಷ ಉಚ್ಚಾಟನೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕೈಹಿಡಿದು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದರು ಎಂದು ಕಿಡಿಕಾರಿದ್ದಾರೆ.
ನಾನು ಮೋದಿಗೆ ಬೈದಿಲ್ಲ, ರಾಜ್ಯದ ನಾಯಕರಿಗೆ ಬೈದಿಲ್ಲ. ಇಂತಹ ವಜಾಗಳಿಗೆಲ್ಲ ನಾನು ತಲೆ ಬಿಸಿ ಮಾಡಿಕೊಳ್ಳಲ್ಲ. ಬಿಜೆಪಿ ಪಕ್ಷದ ವ್ಯವಸ್ಥೆಯ ಬಗ್ಗೆ ನನಗೆ ಅಸಮಾಧಾನವಿದೆ. ಪಕ್ಷದ ಎಲ್ಲ ಹುದ್ದೆಯಿಂದ ವಜಾ ಮಾಡುತ್ತೇವೆ ಅಂದಿದ್ದಾರೆ. ಪಕ್ಷದ ನಾಯಕರನ್ನು ಟೀಕಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ಬಂದರು. ಪಕ್ಷಕ್ಕೆ ವಾಪಸಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರು. ಇದು ಶಾಶ್ವತ ವಜಾ ಅಲ್ಲ ಪರಿಷತ್ ಚುನಾವಣೆಯಲ್ಲಿ ನಾನು ಗೆದ್ದ ಮೇಲೆ ವಜಾ ರದ್ದಾಗುತ್ತದೆ. ಬಿಜೆಪಿ ಕಾರ್ಯಕರ್ತನನ್ನ ವಜಾ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಬಿಜೆಪಿ ಶಿಸ್ತು ಸಮಿತಿಗೆ ಸಾಲು ಸಾಲು ಪ್ರಶ್ನೆ ಮಾಡಿದ ರಘುಪತಿ ಭಟ್
ಬಿಜೆಪಿ ಶಿಸ್ತು ಸಮಿತಿಗೆ ನನ್ನ ಹಲವು ಪ್ರಶ್ನೆ ಇದೆ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಮೇಲೆ ಏನು ಶಿಸ್ತು ಕ್ರಮವಾಗಿದೆ? ಅಡ್ಡ ಮತದಾನ ಮಾಡಿದ ಇಬ್ಬರೂ ಶಾಸಕರನ್ನ ಏನು ಮಾಡಿದ್ದೀರಿ? ವಜಾ ಮಾಡಿದ್ದೀರಾ? ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬೆಂಬಲಿಸಿದ ಶಾಸಕರನ್ನು ವಜಾ ಮಾಡಿದ್ದೀರಾ? ಅಗೋಚರವಾಗಿ ಬಿಜೆಪಿ ವಿರುದ್ಧ ಕೆಲಸ ಮಾಡುವವರ ಮೇಲೆ ಏನು ಕ್ರಮ ಆಗಿದೆ.
ಇದನ್ನೂ ಓದಿ: ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಉಚ್ಚಾಟನೆ
ಪಕ್ಷದ ದೃಷ್ಟಿಯಿಂದ ಜಿಲ್ಲಾಧ್ಯಕ್ಷರು ಶಾಸಕರು ಸುನಿಲ್ ಕುಮಾರ್ ಮಾಡುವುದು ಸರಿ ಇದೆ. ಪಕ್ಷದಿಂದ ವಜಾ ಮಾಡುವ ಸಮಾನ ನ್ಯಾಯ ಜಾರಿಗೆ ತನ್ನಿ. ಬಹಿರಂಗ ಹೇಳಿಕೆ ಕೊಡುವ ಭ್ರಷ್ಟಾಚಾರ ಆರೋಪ ಮಾಡುವ ನಾಯಕರ ಮೇಲೆ ನಿಮ್ಮ ಕ್ರಮ ಏನು? ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಸಲು ಯಾರಿಗೆ ಎಷ್ಟು ಹಣ ಹೋಗಿದೆ, ಯಾರು ಕೆಲಸ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳೇ ಆರೋಪ ಮಾಡುತ್ತಿದ್ದಾರೆ. ವಿಪ್ ಉಲ್ಲಂಘನೆ ಮಾಡಿದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ನಾನೊಬ್ಬ ಪಾಪದವ, ಬಡಪಾಯಿ ಮಾತ್ರ ನಿಮಗೆ ವಜಾ ಮಾಡಲು ಸಿಕ್ಕಿದ್ದಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಉಡುಪಿ ರಾಜಕೀಯದಲ್ಲಿ ಬಿರುಗಾಳಿ: ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್ ಮಧ್ಯೆ ಬಿಗ್ ಫೈಟ್
ನಾನು ವಿಚಲಿತನಾಗಿಲ್ಲ ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ. ಜಗದೀಶ್ ಶೆಟ್ಟರ್ ಅವರ ಪ್ರಕರಣವೇ ನನಗೆ ಮಾದರಿ. ಕರಾವಳಿ ಬಿಜೆಪಿ ಕಾರ್ಯಕರ್ತರಿಗೆ ಶಿಸ್ತು ಜಾಸ್ತಿ ಶಿಕ್ಷೆಯೂ ಜಾಸ್ತಿ. ಉಡುಪಿಯಲ್ಲಿ ನಾಲ್ವರು ಸಿಟ್ಟಿಂಗ್ ಎಂಎಲ್ಎಗಳನ್ನು ಬದಲಿಸಲಾಯಿತು. ಇದನ್ನ ಶಿವಮೊಗ್ಗ, ಬೆಂಗಳೂರು, ಬಾಗಲಕೋಟೆ ಮತ್ತು ಹುಬ್ಬಳ್ಳಿಯಲ್ಲಿ ಮಾಡಕ್ಕಾಗುತ್ತಾ? ಉಡುಪಿಯಲ್ಲಿ ಪಾಪದ ಕಾರ್ಯಕರ್ತರು ಸಂಘ ಪಕ್ಷ ಅಂತ ಕೆಲಸ ಮಾಡುತ್ತಾರೆ. ಕರಾವಳಿ ವಿಚಾರದಲದಲ್ಲಿ ಬಿಜೆಪಿ ಮನಬಂದಂತೆ ನಡೆದುಕೊಳ್ಳುತ್ತಿದೆ. ಈ ಚುನಾವಣೆಯಲ್ಲಿ ಮತದಾರರು ಕಾರ್ಯಕರ್ತರು ಸರಿಯಾದ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:11 pm, Sun, 26 May 24