ಉಡುಪಿ ರಾಜಕೀಯದಲ್ಲಿ ಬಿರುಗಾಳಿ: ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್ ಮಧ್ಯೆ ಬಿಗ್ ಫೈಟ್
ಉಡುಪಿ ಬಿಜೆಪಿಯಲ್ಲಿ ಬಂಡಾಯದ ಬಿಸಿ ಬೇಗನೆ ಆರುವ ಲಕ್ಷಣ ಕಾಣಿಸುತ್ತಿಲ್ಲ. ಪರಿಷತ್ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ರಘುಪತಿ ಭಟ್ಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿದ ಬೆನ್ನಲ್ಲೇ ಅವರ ಬೆಂಬಲಿಗರು ಮತ್ತು ಹಾಲಿ ಶಾಸಕ ಯಶ್ಪಾಲ್ ಸುವರ್ಣ ನಡುವಣ ವಾಕ್ಸಮರ ತಾರಕಕ್ಕೇರಿದೆ. ಆ ಕುರಿತ ವಿವರ ಇಲ್ಲಿದೆ.
ಉಡುಪಿ, ಮೇ 24: ವಿಧಾನ ಪರಿಷತ್ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಸೇರಿದಂತೆ 6 ಕ್ಷೇತ್ರಗಳಿಗೆ ಜೂನ್ 3ರಂದು ನಡೆಯಲಿರುವ ಚುನಾವಣೆಯಲ್ಲಿ (MLC Election) ಬಿಜೆಪಿ (BJP) ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಉಡುಪಿಯ (Udupi) ಮಾಜಿ ಶಾಸಕ ರಘುಪತಿ ಭಟ್ (K. Raghupati Bhat) ಹಾಗೂ ಹಾಲಿ ಶಾಸಕ ಯಶ್ಪಾಲ್ ಸುವರ್ಣ ಬೆಂಬಲಿಗರ ನಡುವಣ ವಾಕ್ಸಮರ ಈಗ ತಾರಕಕ್ಕೇರಿದೆ. 2 ದಿನಗಳ ಒಳಗೆ ಸ್ಪಷ್ಟೀಕರಣ ನೀಡುವಂತೆ ರಾಜ್ಯ ಬಿಜೆಪಿ ಶಿಸ್ತು ಸಮಿತಿಯಿಂದ ಗುರುವಾರ ರಘುಪತಿ ಭಟ್ಗೆ ನೋಟಿಸ್ ಜಾರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಯಶ್ಪಾಲ್ ಸುವರ್ಣ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ರಘುಪತಿ ಭಟ್ ಬೆಂಬಲಿಗರು ಅಭಿಯಾನ ಆರಂಭಿಸಿದ್ದಾರೆ.
‘ರಘುಪತಿ ಭಟ್ಗೆ ಎಂಎಲ್ಸಿ ಟಿಕೆಟ್ ತಪ್ಪಿಸಿದ್ದೇ ಯಶ್ಪಾಲ್ ಸುವರ್ಣ, ನೈಋತ್ಯ ಪದವೀಧರ ಕ್ಷೇತ್ರದಿಂದ ಟಿಕೆಟ್ ನೀಡದಂತೆ ಹೈಕಮಾಂಡ್ಗೆ ಮನವಿ ಮಾಡಿದ್ದರು ಯಶ್ಪಾಲ್. ಈ ಮೂಲಕ ತನ್ನ ರಾಜಕೀಯ ಗುರುವಿಗೇ ಯಶ್ಪಾಲ್ ಖೆಡ್ಡಾ ತೋಡಿದ್ದಾರೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್ಗಳನ್ನು ಹರಿಯಬಿಡಲಾಗಿದೆ.
ಆದರೆ, ರಘುಪತಿ ಭಟ್ ಮತ್ತು ಅವರ ಬೆಂಬಲಿಗರಿಗೆ ತಿರುಗೇಟು ನೀಡಿರುವ ಯಶ್ಪಾಲ್ ಸುವರ್ಣ, ರಘುಪತಿ ಭಟ್ ಕಳೆದ 25 ವರ್ಷಗಳಿಂದ ವಿವಿಧ ಹುದ್ದೆಗಳನ್ನು ಅನುಭವಿಸಿದ್ದಾರೆ. 55 ವರ್ಷ ವಯಸ್ಸಿನ ಒಳಗೆಯೇ ಪಕ್ಷದಲ್ಲಿ ಅತಿಹೆಚ್ಚು ಅಧಿಕಾರ ಅನುಭವಿಸಿದ್ದಾರೆ. ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಹೇಳಿದ್ದಾರೆ. ಈ ಕುರಿತ ಪೋಸ್ಟರ್ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
2023 ರ ವಿಧಾನಸಭೆ ಚುನಾವಣೆಯಲ್ಲಿಯೂ ಭಟ್ಗೆ ಟಿಕೆಟ್ ತಪ್ಪಿಸಲಾಗಿತ್ತು. ಈಗ ಎಂಎಲ್ಸಿ ಟಿಕೆಟ್ ಸಿಗದಂತೆ ಮಾಡುವಲ್ಲಿ ಯಶ್ಪಾಲ್ ಯಶಸ್ವಿಯಾಗಿದ್ದಾರೆ. ರಘುಪತಿ ಭಟ್ ಪಕ್ಷದಿಂದ ಬಹುತೇಕ ಮೂಲೆಗುಂಪು ಸಾಧ್ಯತೆ ಎಂಬ ಕುರಿತೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: ಬಿಜೆಪಿಯಿಂದ ನೋಟಿಸ್ ಜಾರಿ: ಪಕ್ಷದಿಂದ ಉಚ್ಛಾಟನೆಯಾಗ್ತಾರಾ ರಘುಪತಿ ಭಟ್?
ರಘುಪತಿ ಭಟ್ ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷವು ಈ ಕ್ಷೇತ್ರದಿಂದ ಶಿವಮೊಗ್ಗದ ಡಾ. ಧನಂಜಯ ಸರ್ಜಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಅಲ್ಲದೆ, ಶಿಕ್ಷಕರ ಕ್ಷೇತ್ರದ ಟಿಕೆಟ್ ಅನ್ನು ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿದೆ. ಇದು ರಘುಪತಿ ಭಟ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ