ಕರ್ನಾಟಕದ ಹಲವೆಡೆ ಭಾರೀ ಮಳೆ, ಸಿಡಿಲಿಗೆ ಇಂದು ಇಬ್ಬರು ಬಲಿ
ರಾಜ್ಯ ರಾಜಧಾನಿ ಬೆಂಗಳೂರು(Bengaluru) ಸೇರಿದಂತೆ ಇಂದು(ಮೇ.19) ಹಲವೆಡೆ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಾಸನ, ಚಿಕ್ಕಮಗಳೂರು, ಧಾರವಾಡ, ಕೊಪ್ಪಳ, ಬಾಗಲಕೋಟೆ, ಮೈಸೂರು, ಶಿವಮೊಗ್ಗ, ರಾಮನಗರದ ಕೆಲವೆಡೆ ವರುಣನ ಸಿಂಚನವಾಗಿದೆ. ಈ ಮಧ್ಯೆ ಕೊಪ್ಪಳ, ಬೆಂಗಳೂರು ಗ್ರಾಮಾಂತರದಲ್ಲಿ ಸಿಡಿಲಿಗೆ ಬಲಿಯಾಗಿದ್ದಾರೆ.
ಬೆಂಗಳೂರು, ಮೇ.19: ರಾಜ್ಯ ರಾಜಧಾನಿ ಬೆಂಗಳೂರು(Bengaluru) ಸೇರಿದಂತೆ ಇಂದು(ಮೇ.19) ಹಲವೆಡೆ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಾಸನ, ಚಿಕ್ಕಮಗಳೂರು, ಧಾರವಾಡ, ಕೊಪ್ಪಳ, ಬಾಗಲಕೋಟೆ, ಮೈಸೂರು, ಶಿವಮೊಗ್ಗ, ರಾಮನಗರದ ಕೆಲವೆಡೆ ವರುಣನ ಸಿಂಚನವಾಗಿದೆ. ಜೊತೆಗೆ ಇಂದಿನಿಂದ(ಮೇ 19 ರಿಂದ ಮೇ 22) ದಕ್ಷಿಣ ಒಳನಾಡಲ್ಲಿ 5 ದಿನ 17 ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಸಿಡಿಲಿಗೆ ಇಬ್ಬರು ಸಾವನ್ನಪ್ಪಿದ್ದಾರೆ.
ಕೃಷಿ ಜಮೀನಿನಲ್ಲಿದ್ದ ರೈತ, ಸಿಡಿಲಿಗೆ ಬಲಿ
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಬಚನಾಳ ಗ್ರಾಮದಲ್ಲಿ ಕೃಷಿ ಜಮೀನಿನಲ್ಲಿದ್ದ ರೈತನಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಈಶಪ್ಪ ಕಳಮಳ್ಳಿ(30) ಮೃತ ರೈತ. ಜಮೀನಿನಲ್ಲಿ ಬಿತ್ತನೆ ಸಲುವಾಗಿ ಈಶಪ್ಪ, ಭೂಮಿ ಸ್ವಚ್ಛಗೊಳಿಸುತ್ತಿದ್ದ. ಅದರಲ್ಲೂ ಮಳೆ ಬಂದ ಖುಷಿಯಲ್ಲಿ ಎತ್ತುಗಳೊಂದಿಗೆ ಭೂಮಿ ಹದ ಮಾಡುತ್ತಿದ್ದ. ಈ ವೇಳೆ ದುರ್ಘಟನೆ ನಡೆದಿದ್ದು, ಅದೃಷ್ಟವಶಾತ್ ಮೃತನ ಸಹೋದರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ:ಕಲಬುರಗಿ: ಕೂಲಿ ಕೆಲಸಕ್ಕೆ ಹೋಗಿದ್ದ ತಂದೆ-ಮಗ ಸಿಡಿಲಿಗೆ ಬಲಿ
ದನ ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿದು ಸಾವು
ಬೆಂಗಳೂರು ಗ್ರಾಮಾಂತರ: ನೆಲಮಂಗಲ ತಾಲೂಕಿನ ಮೆಳೇಕತ್ತಿಗನೂರು ಗ್ರಾಮದ ಬಳಿ ಸಿಡಿಲು ಬಡಿದು ಓರ್ವ ಕೊನೆಯುಸಿರೆಳೆದಿದ್ದಾನೆ. ಕೆಂಪಣ್ಣ(54) ಸಾವಿಗೀಡಾದ ವ್ಯಕ್ತಿ. ದನ ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿದು ಕೊನೆಯುಸಿರೆಳೆದಿದ್ದು, ದಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಿಡಿಲು ಬಡಿದು ಓರ್ವ ಯುವಕನಿಗೆ ಗಂಭೀರ ಗಾಯ, ಎಮ್ಮೆ-ಕರು ಸಾವು
ಧಾರವಾಡ: ಧಾರವಾಡ ತಾಲೂಕಿನ ಮುಗದ ಗ್ರಾಮದ ಕೆರೆ ಬಳಿ ಸಿಡಿಲು ಬಡಿದು ಓರ್ವ ಯುವಕ ಗಂಭೀರ ಗಾಯಗೊಂಡಿದ್ದು, ಒಂದು-ಎಮ್ಮೆ ಕರು ಸಾವನ್ನಪ್ಪಿದ್ದಾನೆ. ದಡ್ಡಿಕಮಲಾಪುರ ಗ್ರಾಮದ ರವಿ ಕೊರಮಡ್ಡಿಗೆ, ಗಾಯಗೊಂಡ ಯುವಕ. ಎಮ್ಮೆ ಕಾಯಲು ಹೋಗಿದ್ದಾಗ ಈ ಘಟನೆ ನಡೆದಿದೆ. ಇದೇ ವೇಳೆ ಎಮ್ಮೆ ಕರು ಸಿಡಿಲಿಗೆ ಬಲಿಯಾಗಿವೆ. ಗಂಭೀರವಾಗಿ ಗಾಯಗೊಂಡ ರವಿಯನ್ನು ಧಾರವಾಡ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ