Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಪರ ಸರ್ಕಾರದ ಸಾರ್ಥಕ ಒಂದು ವರ್ಷ: ರಣದೀಪ್ ಸುರ್ಜೆವಾಲ ಶ್ಲಾಘನೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ಮೇ 20 ರಂದು 1 ವರ್ಷ ಪೂರೈಸುತ್ತಿದೆ. ಕಡಿಮೆ‌ ಅವಧಿಯಲ್ಲಿ ಸರ್ಕಾರ ಅಪೂರ್ವ ಸಾಧನೆ ಮಾಡಿ, ಅಗಣಿತ ಜನ ಮನ್ನಣೆ ಗಳಿಸಿದ ಕಾಂಗ್ರೆಸ್​ ಸರ್ಕಾರವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲ(Randeep Surjewala) ಅವರು ಬಣ್ಣಿಸಿದ್ದಾರೆ.

ಜನಪರ ಸರ್ಕಾರದ ಸಾರ್ಥಕ ಒಂದು ವರ್ಷ: ರಣದೀಪ್ ಸುರ್ಜೆವಾಲ ಶ್ಲಾಘನೆ
ರಣದೀಪ್ ಸುರ್ಜೆವಾಲ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: May 19, 2024 | 7:51 PM

ಬೆಂಗಳೂರು, ಮೇ.19: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ಮೇ 20 ರಂದು 1 ವರ್ಷ ಪೂರೈಸುತ್ತಿದೆ. ಕಡಿಮೆ‌ ಅವಧಿಯಲ್ಲಿ ಸರ್ಕಾರ ಅಪೂರ್ವ ಸಾಧನೆ ಮಾಡಿ, ಅಗಣಿತ ಜನ ಮನ್ನಣೆ ಗಳಿಸಿದೆ. ಯಾವುದೇ ಜಾತಿ, ಧರ್ಮ ಎಂದು ನೋಡದೇ ಎಲ್ಲ ವರ್ಗವನ್ನೂ ಸಮಾನಾಗಿ ಕಾಣುವ ಮೂಲಕ ಸರ್ವರಿಗೂ ಸಮಬಾಳು – ಸಮಪಾಲು ಎಂಬ ತತ್ತ್ವವನ್ನು ಸಾರಿದೆ. ಆ ಮೂಲಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ 4.60 ಕೋಟಿ ಜನರನ್ನು ತಲುಪುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲ(Randeep Surjewala) ಅವರು ಬಣ್ಣಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಸಾಧನೆಗೆ ರಣದೀಪ್ ಸುರ್ಜೆವಾಲ ಹರ್ಷ

ರಾಜ್ಯ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸರ್ಕಾರ ಎಂದರೆ ಕೇವಲ ರಸ್ತೆ, ಸೇತುವೆಯಂಥ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಮಾತ್ರವಲ್ಲ. ಬಡವರು, ಮಹಿಳೆಯರು,‌ ರೈತರು ಸೇರಿದಂತೆ ಶ್ರಮಿಕ ವರ್ಗವನ್ನೂ ಸಹ ಆರ್ಥಿಕವಾಗಿ ಸಶಕ್ತರನ್ನಾಗಿಸಿ, ಮುಖ್ಯವಾಹಿನಿಗೆ ತಂದು, ಸರ್ವರ ಸರ್ವತೋಮುಖ ಅಭಿವೃದ್ಧಿ ಮಾಡುವುದು ಎಂಬ ವಿಭಿನ್ನ ಆಶಯದೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಡಿ ಇಟ್ಟಿದೆ‌. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ದೇಶದಲ್ಲಿ, ಅಷ್ಟೇ ಏಕೆ ವಿಶ್ವದಲ್ಲೇ ಮಾದರಿಯಾಗಿದೆ.

ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ: ನಾಳೆ ಸಿಎಂ ಮಹತ್ವದ ಸುದ್ದಿಗೋಷ್ಠಿ, ಬಿಜೆಪಿಯಿಂದ ಪ್ರತಿಭಟನೆಗೆ ಕರೆ

ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕೇವಲ ಭರವಸೆ ಕೊಡದೇ, ಗ್ಯಾರಂಟಿ ಕಾರ್ಡ್​ಗಳ ಮೂಲಕ ಜನರಿಗೆ ವಿಶ್ವಾಸ ಮೂಡಿಸಿತ್ತು. ಬಹುಮತದ ಜನಾಶಯ ಪಡೆದ ನಂತರ ಸುಮ್ಮನೆ ಕೂರದೇ 9 ತಿಂಗಳಲ್ಲಿ, ಅನ್ನಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಶಕ್ತಿ, ಯುವ ನಿಧಿಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರದ ಅಕ್ಕಿ ಕೊಡದೇ ಅಸಹಕಾರ ನೀಡಿದಾಗಲೂ ಜನರ ಬ್ಯಾಂಕ್ ಖಾತೆಗೆ ಹಣ ಹಾಕುವ ಮೂಲಕ ನುಡಿದಂತೆ ನಡೆಯುತ್ತಿದೆ.

ನೇರ ನಗದು ವರ್ಗಾವಣೆ ಮೂಲಕ ಕೋಟ್ಯಂತರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ತಲುಪಿಸಿ, ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಗ್ಯಾರಂಟಿ ಯೋಜನೆಗಳಿಂದ ಬಡ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ. ಮಕ್ಕಳ ವಿದ್ಯಾಭ್ಯಾಸ, ಹಿರಿಯರ ಔಷದೋಪಚಾರಕ್ಕೆ ನೆರವಾಗಿದೆ. ರಾಜ್ಯದ ಪ್ರವಾಸೋದ್ಯಮ ಚಟುವಟಿಕೆ ಚುರುಕಾಗಿದೆ. ಒಟ್ಟಿನಲ್ಲಿ ಸರ್ಕಾರ “ಜನರಿಂದ ಜನರಿಗಾಗಿ,” ಎಂಬ ಪ್ರಜಾಪ್ರಭುತ್ವದ ಮೂಲ ಆಶಯವನ್ನು ಈಡೇರಿಸುತ್ತಿದೆ.

ಇದನ್ನೂ ಓದಿ:ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಮತ್ತು ಜೆಡಿಎಸ್ ನ 25-30 ಶಾಸಕರು ಕಾಂಗ್ರೆಸ್ ಸೇರ್ತಾರೆ: ಡಿ ಸುಧಾಕರ್, ಸಚಿವ

ಮಹಿಳೆಯರು ಉಚಿತ ಪ್ರಯಾಣದ ಮೂಲಕ, ಗೃಹ ಲಕ್ಷ್ಮೀ ಯೋಜನೆಯ ಮೂಲಕ ಸ್ವಾವಲಂಬಿಗಳಾಗುವತ್ತ ಹೆಜ್ಜೆ ಇಡುತ್ತಿದ್ದಾರೆ. ಮನೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ಆ ಮೂಲಕ ಸರ್ಕಾರವು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೂಲ ಆಶಯವನ್ನು ಈಡೇರಿಸುವತ್ತ ದಾಪುಗಾಲಿಡುತ್ತಿದೆ.

ರಾಜ್ಯದ 223 ತಾಲೂಕುಗಳಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ವಿಳಂಬ ಮಾಡಿ, ಅಸಹಕಾರ ತೋರಿದಾಗಲೂ ಸಹ ರಾಜ್ಯದ ಗ್ಯಾರಂಟಿ ಯೋಜನೆಗಳು ಜನರಿಗೆ ನೆರವಾದವು. ಜನರು ತೊಂದರೆ ಇಲ್ಲದೇ ಜೀವನ ಮಾಡಲು ರಾಜ್ಯ ಸರ್ಕಾರ ತನ್ನ ಯೋಜನೆಗಳ ಮೂಲಕ ಅನುವು ಮಾಡಿಕೊಟ್ಟಿತು. ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಹಣ ನೀಡಿದ ಸರ್ಕಾರದ ನಡೆ ಶ್ಲಾಘನೀಯ. ಈ ವೇಳೆ ರೈತರ ಖಾತೆಗೆ ಎರಡು ಸಾವಿರ ರೂಪಾಯಿಗಳನ್ನು ಸಹ ರಾಜ್ಯ ಸರ್ಕಾರ ಜಮೆ ಮಾಡಿ ರೈತ ಪರ ಸರ್ಕಾರ ಎಂಬುದನ್ನು ಸಾಬೀತು ಮಾಡಿದೆ.

ಕ್ರಾಂತಿಕಾರಿ ಹೆಜ್ಜೆಗಳಿಂದ ಒಂದು ವರ್ಷದಲ್ಲಿ ಸಾಕಷ್ಟು ಸಾಧನೆ ಮಾಡಿದ ಸರ್ಕಾರ ಮುಂದಿನ ನಾಲ್ಕು ವರ್ಷಗಳನ್ನು ಸಮರ್ಥವಾಗಿ ಎದುರಿಸಲಿದೆ. ಮಾತ್ರವಲ್ಲ ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಿ, ರಾಜ್ಯದಲ್ಲಿ ಅಭಿವೃದ್ಧಿಯ ಪರ್ವವನ್ನು ಸೃಷ್ಟಿ ಮಾಡಲಿದೆ ಎಂಬ ದೃಢ ವಿಶ್ವಾಸವಿದೆ. ವರ್ಷದಲ್ಲಿ ಕೋಟ್ಯಂತರ ಜನರ ಹರ್ಷಕ್ಕೆ ಕಾರಣವಾದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸುರ್ಜೆವಾಲಾ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ