ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ: ನಾಳೆ ಸಿಎಂ ಮಹತ್ವದ ಸುದ್ದಿಗೋಷ್ಠಿ, ಬಿಜೆಪಿಯಿಂದ ಪ್ರತಿಭಟನೆಗೆ ಕರೆ

ನಾಳೆ(ಮೇ 20) ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಲಿದೆ. ಆದ್ರೆ, ಸಿದ್ದರಾಮಯ್ಯ ಸರ್ಕಾರದ ಒಂದು ವರ್ಷದ ಸಂಭ್ರಮಾಚರಣೆ ಮಾಡುವುದಕ್ಕೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ. ಹೀಗಾಗಿ ನೀತಿ ಸಂಹಿತೆ ಬಳಿಕ ಸಂಭ್ರಮಾಚರಣೆ ಮಾಡಲು ತೀರ್ಮಾನಿಸಿಸಲಾಗಿದೆ. ಆದ್ರೆ, ನಾಳೆ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಸರ್ಕಾರದ 1 ವರ್ಷದ ಕಾರ್ಯವೈಖರಿ ಬಗ್ಗೆ ತಿಳಿಸಲಿದ್ದಾರೆ. ಮತ್ತೊಂದೆಡೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಬಿಜೆಪಿ ತೀರ್ಮಾನಿಸಿದೆ.

ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ: ನಾಳೆ ಸಿಎಂ ಮಹತ್ವದ ಸುದ್ದಿಗೋಷ್ಠಿ, ಬಿಜೆಪಿಯಿಂದ ಪ್ರತಿಭಟನೆಗೆ ಕರೆ
ಸಿದ್ದರಾಮಯ್ಯ, ಬಿಜೆಪಿ
Follow us
|

Updated on: May 19, 2024 | 12:35 PM

ಬೆಂಗಳೂರು, (ಮೇ 19): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Karnataka Congress Government) ಅಧಿಕಾರಕ್ಕೆ ಬಂದು ನಾಳೆ(ಮೇ 20) ಒಂದು ವರ್ಷವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರದ(Siddaraiah Government ) ಒಂದು ವರ್ಷದ ಸಂಭ್ರಮಾಚರಣೆಗೆ ಲೋಕಸಭಾ ಚುನಾವಣೆ ನೀತಿ ಸಂಹಿತಿ ಅಡ್ಡಿಯಾಗಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಅವರು ನಾಳೆ(ಸೋಮವಾರ) ಸುದ್ದಿಗೋಷ್ಠಿ ನಡೆಸಿ ಒಂದು ವರ್ಷದಲ್ಲಿ ಏನೆಲ್ಲಾ ಮಾಡಿದ್ದಾರೆ ಎನ್ನುವುದನ್ನು ಜನತೆ ಮುಂದೆ ಬಿಚ್ಚಿಡಲಿದ್ದಾರೆ. ಮತ್ತೊಂದೆಡೆ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ ನೀಡಿದೆ. ಒಂದು ವರ್ಷದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟು ಪ್ರತಿಭಟನೆಗೆ ತೀರ್ಮಾನಿಸಿದೆ.

ಕಳೆದ ವರ್ಷ 2023, ಮೇ ತಿಂಗಳ ಸಮಯ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಅಂತರಗಳಿಂದ ಬಹುಮತಗಳಿಂದ ಗೆದ್ದು ಸರ್ಕಾರ ರಚಿಸಿತ್ತು. ನಂತರ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಮಧ್ಯೆ ಭಾರೀ ಪೈಪೋಟಿ ನಡೆದು ದೆಹಲಿ ಹೈಕಮಾಂಡ್ ಅಂಗಳದಲ್ಲಿ ಹಲವು ಸುತ್ತಿನ ಮಾತುಕತೆ, ಚರ್ಚೆ ನಂತರ ಮೇ 20ರಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ, ಡಿ ಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ ಮನೆ ಮಾಡಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ‘ಕೈ’ ರಕ್ತ ಚರಿತ್ರೆ, ಭಾರತದಲ್ಲಿ ಮತ್ತೊಂದು ಜಂಗಲ್ ರಾಜ್: ಕಾನೂನು ಸುವ್ಯವಸ್ಥೆ ಬಗ್ಗೆ ಬಿಜೆಪಿ ಲೇವಡಿ

ಕಳೆದೊಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಏನೇನು ಕೆಲಸ ಮಾಡಿದೆ, ರಾಜ್ಯದ ಜನತೆಗೆ ಒಪ್ಪಿಗೆಯಾಗಿದೆಯೇ ಎಂದು ಗೊತ್ತಾಗಲು ಜೂನ್ 4ರ ಲೋಕಸಭೆ ಚುನಾವಣೆಯಂದು ಗೊತ್ತಾಗಲಿದೆ. ಹೀಗಾಗಿ ಈ ಲೋಕಸಭೆ ಚುನಾವಣೆಯ ಫಲಿತಾಂಶ ಕರ್ನಾಟಕದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಪಾಲಿಗೆ ರಾಜಕೀಯವಾಗಿ ಮಹತ್ವದ್ದಾಗಿದೆ. ಕಳೆದೊಂದು ವರ್ಷ ರಾಜ್ಯದ ಜನತೆ ಪಾಲಿಗೆ ಸ್ವಲ್ಪ ಕಹಿ ಸ್ವಲ್ಪ ಸಿಹಿ ಎನ್ನಬಹುದು, ರೈತರಿಗಂತೂ ಬರಗಾಲದಿಂದ ಕಷ್ಟವೇ ಹೆಚ್ಚಾಗಿತ್ತು.

28 ಲೋಕಸಭಾ ಕ್ಷೇತ್ರಗಳ ಫಲಿತಾಂಶದಿಂದ ಮಾತ್ರ ರಾಜ್ಯ ಸರ್ಕಾರದ ಸಾಧನೆ, ಕೆಲಸವನ್ನು ಅಳೆಯುವುದು ಸರಿಯಲ್ಲ. ವಿಧಾನ ಸಭೆ ಚುನಾವಣೆಗೂ, ಲೋಕಸಭೆ ಚುನಾವಣೆಯ ಶೈಲಿ ಭಿನ್ನವಾಗಿರುತ್ತದೆ. ಆದರೆ ಸದ್ಯಕ್ಕಂತೂ ಚುನಾವಣಾ ಫಲಿತಾಂಶ ಕರ್ನಾಟಕ ರಾಜಕೀಯದ ಪಾಲಿಗೆ ಮಹತ್ವದ್ದು ಎಂದು ಅಲ್ಲಗಳೆಯಲು ಸಾಧ್ಯವಿಲ್ಲ.

ವಿಪಕ್ಷದಿಂದ ರಾಜ್ಯಾದ್ಯಂತ ಪ್ರತಿಭಟನೆ

ಇನ್ನು ಸಿದ್ದರಾಮಯ್ಯ ಅವರು ತಮ್ಮ ಸರ್ಕಾರ ಒಂದು ವರ್ಷ ಏನೇನು ಮಾಡಿದೆ ಎಂದು ನಾಳೆ ಸುದ್ದಿಗೋಷ್ಠಿ ಮೂಲಕ ರಾಜ್ಯದ ಜನತೆ ಮುಂದೆ ಬಿಚ್ಚಿಡಲಿದ್ದಾರೆ. ಮತ್ತೊಂದೆಡೆ ವಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಮುಂದಾಗಿವೆ.

ಒಂದು ವರ್ಷದಲ್ಲಿ ಸರ್ಕಾರ ಲೋಪ-ದೋಷಗಳು, ವೈಫಲ್ಯಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತೆ ಪ್ರತಿಭಟನೆ ಮಾಡಲು ರಾಜ್ಯ ಬಿಜೆಪಿ, ಎಲ್ಲಾ ಬಿಜೆಪಿ ಘಟಕಗಳಿಗೆ ಸೂಚನೆ ನೀಡಿದೆ. ಮತ್ತೊಂದೆಡೆ ವಿಪಕ್ಷದ ಹಿರಿಯ ನಾಯಕರು ಸಹ ಸುದ್ದಿಗೋಷ್ಠಿ ನಡೆಸಿ ಸಮಾಜ ಕಲ್ಯಾಣ, ಆಹಾರ, ಕೃಷಿ ಮತ್ತು ಗೃಹ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ವೈಫಲ್ಯಗಳ ಕುರಿತು ಜನರ ಮುಂದಿಡಲು ತೀರ್ಮಾನಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ರಾಜ್ಯಪಾಲರಿಗೆ ದೂರು ನಿರ್ಧರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ