Karnataka News Highlights: ಕರ್ನಾಟಕಕ್ಕೆ ಮುಂಗಾರು ಕಾಲಿಟ್ಟಿದ್ದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿನ್ನೆ (ಜೂ.20) ಮಳೆಯಾಗಿದೆ. ಇನ್ನು ಮುಂದಿನ 5 ದಿನಗಳ ಕಾಲ ಮಳೆಯಾಗಲಿದೆ. ರಾಜ್ಯ ರಾಜಕೀಯದಲ್ಲಿ ಅನ್ನ ಭಾಗ್ಯದ ಯೋಜನೆ ಅಡಿ 10 ಕೆಜಿ ಅಕ್ಕಿ ನೀಡುವ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಸಂಬಂಧ ಆಢಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಡುವೆ ವಾಗ್ಯುದ್ಧ ಶುರುವಾಗಿದೆ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಅಕ್ಕಿ ನೀಡುತ್ತಿಲ್ಲವೆಂದು ಕಾಂಗ್ರೆಸ್ ಆರೋಪಿಸುತ್ತಿದೆ. ಇತ್ತ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರ ಈಗಾಗಲೆ 5 ಕೇಜಿ ಅಕ್ಕಿ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳಲಿ ಎಂದು ವಾಗ್ದಾಳಿ ಮಾಡುತ್ತಿದ್ದಾರೆ.
ಇಂದು ದೆಹಲಿಗೆ ಹೋಗಿರುವ ಸಿಎಂ ಸಿದ್ಧರಾಮಯ್ಯ ಕೃಷ್ಣಮೆನನ್ ಮಾರ್ಗದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆದ ನಂತರ ಮೊದಲ ಬಾರಿಗೆ ಅಮಿತ್ ಶಾ ಅವರನ್ನು ಭೇಟಿ ಆಗಿದ್ದಾರೆ.
ದೆಹಲಿಯ ಕರ್ನಾಟಕ ಭವನದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಸಿಎಂ ಸಿದ್ದರಾಮಯ್ಯ ತೆರಳಿದ್ದಾರೆ. ದೆಹಲಿಯ ಕೃಷ್ಣಮೆನನ್ ಮಾರ್ಗದಲ್ಲಿರುವ ಸಚಿವ ಅಮಿತ್ ಶಾ ನಿವಾಸಕ್ಕೆ ಭೇಟಿ ನೀಡಿಲಿದ್ದಾರೆ.
ಬೆಂಗಳೂರು ಮಹಾನಗರದ ಹಲವೆಡೆ ಮಳೆ ಆರಂಭ ಆಗಿದ್ದು, ಶಾಂತಿನಗರ, ಜಯನಗರ, ರಾಜಾಜಿನಗರ, ವಿಜಯನಗರ, ಜೆ.ಪಿ.ನಗರ, ಬನ್ನೇರುಘಟ್ಟ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಮಡಿವಾಳ, ಕೋರಮಂಗಲ, ಇಂದಿರಾನಗರ, ಮಾರತ್ಹಳ್ಳಿ, ಚಿಕ್ಕಪೇಟೆ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಗಾಂಧಿನಗರ, ಸದಾಶಿವನಗರ,
ಮಲ್ಲೇಶ್ವರಂ, ಕೆಂಗೇರಿ, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವೆಡೆ ಮಳೆ ಆಗಿದೆ.
ರಾಜ್ಯಕ್ಕೆ ಅಕ್ಕಿ ನೀಡುವ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ನಾವು ಜನರಿಗೆ ನೀಡಿರುವ ಭರವಸೆಯಂತೆ ಅಕ್ಕಿ ನೀಡುತ್ತೇವೆ. ರಾಜ್ಯದ ಜನರಿಗೆ ಅಕ್ಕಿ ನೀಡಲು ಪರ್ಯಾಯ ವ್ಯವಸ್ಥೆ ಮಾಡುತ್ತೀದ್ದೇವೆ. ಛತ್ತೀಸ್ಗಢ ಹಾಗೂ ಪಂಜಾಬ್ ಅಕ್ಕಿ ನೀಡಲು ಮುಂದೆ ಬಂದಿವೆ ಎಂದು ಆಹಾರ ಇಲಾಖೆ ಸಚಿವ K.H.ಮುನಿಯಪ್ಪ ಹೇಳಿದರು.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ದೆಹಲಿಯಲ್ಲಿ ಆಹಾರ ಇಲಾಖೆ ಸಚಿವ K.H.ಮುನಿಯಪ್ಪ ಹೇಳಿದರು. ಕಳೆದ ಮೂರು ದಿನಗಳಿಂದ ಭೇಟಿಗೆ ಕಾಲಾವಕಾಶ ನೀಡುತ್ತಿಲ್ಲ. ಕೇಂದ್ರ ರಾಜ್ಯ ಖಾತೆ ಸಚಿವರ ಭೇಟಿಗೆ ಕಾಲಾವಕಾಶ ನೀಡಿದ್ದರು. ನಾಳೆ ಬೆಳಗ್ಗೆ 10ಕ್ಕೆ ಭೇಟಿಗೆ ನೀಡಿದ್ದ ಅವಕಾಶವೂ ನಿರಾಕರಿಸಿದ್ದಾರೆ ಎಂದರು.
ಇಂದು ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗುವೆ. ಅಕ್ಕಿ ವಿಚಾರವಾಗಿ ಅಮಿತ್ ಶಾ ಬಳಿ ಪ್ರಸ್ತಾಪ ಮಾಡುತ್ತೇನೆ ಎಂದು ನವದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು. ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿಗೆ ಸಮಯ ಕೇಳಿಲ್ಲ. FCI ಅಕ್ಕಿ ಕೊಡಲು ಆಗಲ್ಲ ಎಂದಿದ್ದರೆ ಬೇರೆ ಕಡೆ ಚರ್ಚೆ ಮಾಡುತ್ತೇವೆ. ಅಕ್ಕಿ ಇಲ್ಲದಿದ್ದರೆ ಎಫ್ಸಿಐ ಜೂ.12ರಂದು ಯಾಕೆ ಪತ್ರ ಕೊಟ್ಟಿತು ಎಂದು ಪ್ರಶ್ನಿಸಿದರು.
ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ನಿರಾಕರಿಸಿದೆ. ಕೇಂದ್ರದ ಬಿಜೆಪಿ ಸರ್ಕಾರ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ ಎಂದು ದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು. ರಾಜ್ಯಕ್ಕೆ ಅಕ್ಕಿ ನೀಡುವ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಜುಲೈ 1ಕ್ಕೆ ಅಕ್ಕಿ ನೀಡುವ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ನವದೆಹಲಿ: ಸಿಎಂ ಸಿದ್ದರಾಮಯ್ಯ ಅವರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ಮಾಡಿದರು. ಈ ಸಂದರ್ಭದಲ್ಲಿ ವಸತಿ, ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಜಮೀರ್ ಅಹ್ಮದ್ ಹಾಗೂ ನಗರ ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬೈರತಿ ಸುರೇಶ್ ಅವರು ಉಪಸ್ಥಿತರಿದ್ದರು.
ಯಾವ ಮಾಹಿತಿ ಇಟ್ಟುಕೊಂಡು ಹಾಗೇ ಹೇಳಿದ್ದಾರೆಂದು ಕೇಳುತ್ತೇನೆ. ಯಾವ ಠಾಣೆಯಲ್ಲಿ ಸೆಟಲ್ಮೆಂಟ್ ಮಾಡಿದ್ದಾರೆಂದು ಮಾಹಿತಿ ಪಡೆಯುತ್ತೇನೆ. ಒಂದು ವೇಳೆ ಹಾಗೇನಾದರು ಇದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಪರಮೇಶ್ವರ್ ಹೇಳಿದರು. ಪೊಲೀಸ್ ಠಾಣೆಗಳಲ್ಲಿ ಹೀಗೆ ವ್ಯವಸ್ಥೆ ಇರಬೇಕೆಂಬ ನಿಯಮ ಇದೆ. ಅದು ಹಾಗೆಯೇ ನಡೆಯಬೇಕು ಎಂದರು.
ಯಾರನ್ನು ಯಾರೂ ಕೇಳಿ ಚುನಾವಣೆ ವೇಳೆ ಭರವಸೆ ಕೊಡಲ್ಲ. ನಾವು ನಮ್ಮ ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದೆವು. ರಾಜ್ಯಕ್ಕೆ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿರುವುದು ನಿಜ. ಆದರೆ ಹೆಚ್ಚುವರಿ ಅಕ್ಕಿಗೆ ನಾವು ಪತ್ರ ಬರೆದಾಗ ಕೊಡಲ್ಲ ಎಂದಿದ್ದಾರೆ. 7ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದೆ ಎಂದಿದ್ದರು, ಆಮೇಲೆ ಕೊಡಲಿಲ್ಲ. ಬಡವರ ಹೊಟ್ಟೆ ತುಂಬಿಸುವ ಅಕ್ಕಿಗೂ ತೊಂದರೆ ಮಾಡಿದ್ದಾರೆ. ಆದರೆ ನಾವು 10 ಕೆಜಿ ಅಕ್ಕಿ ಕೊಟ್ಟೇ ತೀರುತ್ತೇವೆ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಯುವ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಸದೀಯ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಉದ್ದೇಶದಿಂದ ಮತ್ತು ಯುವಜನರ ಆಲೋಚನೆಗಳು, ದೂರದೃಷ್ಟಿ, ಪ್ರತಿಭೆ ಬಿಂಬಿಸಲು ನಮ್ಮ ಸಚಿವಾಲಯದ ಮುಖಾಂತರ 03 ದಿನಗಳ ಕಾಲ ಪ್ರಕೃತಿ ಮತ್ತು ತರಬೇತಿ ಶಿಬಿರವನ್ನು ನೆಲಮಂಗಲದ ಸಮೀಪ ಧರ್ಮಸ್ಥಳ ಕ್ಷೇಮವನದಲ್ಲಿ ನಡೆಸಲಾಗುತ್ತದೆ.
ಬೆಂಗಳೂರು: 16ನೇ ವಿಧಾನಸಭೆಗೆ ಮೊದಲ ಬಾರಿಗೆ ನೂತನವಾಗಿ ಆಯ್ಕೆಯಾದ 70 ಶಾಸಕರಿಗೆ 3 ದಿನಗಳ ಕಾಲ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಜೂ. 26ರಿಂದ ಜೂ.28ರವರೆಗೆ ಮೂರು ದಿನಗಳ ಕಾಲ ನಡೆಯುವ ತರಬೇತಿ ಶಿಬಿರದಲ್ಲಿ ಈ ನೂತನ ಶಾಸಕರಿಗೆ ಆರೋಗ್ಯ ಸುಸ್ಥಿರತೆ ಮತ್ತು ಜ್ಞಾನಾಭಿವೃದ್ಧಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಸಿಎಂ ಸಿದ್ಧರಾಮಯ್ಯ ಸದ್ಯ ನವದೆಹಲಿ ತಲುಪಿದ್ದಾರೆ. ಏರ್ಪೋರ್ಟ್ನಿಂದ ಕರ್ನಾಟಕ ಭವನಕ್ಕೆ ಆಗಮಿಸಿದ್ದು, ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಬಳಿಕ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ.
ಬೆಂಗಳೂರು: ಕೆಎಂಎಫ್ ಜತೆ ಅಮುಲ್ ವಿಲೀನ ಇಲ್ಲ. ಅಮುಲ್ ಜತೆ ಕೆಎಂಎಫ್ ವಿಲೀನ ಮಾಡೋದು ಹುಚ್ಚತನ. ಯಾವುದೇ ಕಾರಣಕ್ಕೂ KMF ಜತೆ ಅಮುಲ್ ವಿಲೀನವಿಲ್ಲ ಎಂದು ಬೆಂಗಳೂರಿನಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರು: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ ತಪ್ಪಿದೆ. ರಸ್ತೆ ದಾಟುತ್ತಿದ್ದ ಮಹಿಳೆ ಅಪಘಾತದಿಂದ ಅದೃಷ್ಟವಶಾತ್ ರೀತಿಯಲ್ಲಿ ಪಾರಾಗಿದ್ದಾಳೆ. ಉಳ್ಳಾಲದ ತೌಡುಗೋಳಿ ಬಳಿಯ ನರಿಂಗಾನದಲ್ಲಿ ಮಹಿಳೆ ಬಸ್ಸು ಬರುತ್ತಿರುವುದನ್ನು ಗಮನಿಸದೆ ರಸ್ತೆ ದಾಟುತ್ತಿದ್ದಳು. ಇದನ್ನು ಗಮನಿಸಿದ ಚಾಲಕ ಮಹಿಳೆಗೆ ಡಿಕ್ಕಿ ಹೊಡೆಯುವಷ್ಟರಲ್ಲೇ ಬಸ್ಸನ್ನು ಎಡಕ್ಕೆ ತಿರುಗಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಚಾಲಕ ಮಹಿಳೆಯನ್ನು ರಕ್ಷಿಸಿದ್ದಾರೆ. ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಲಕನ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಭೀಮಾ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭೀಮಾ ನಾಯ್ಕಗೆ ವಿರೋಧವಾಗಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಬೆಂಗಳೂರು: ಇವತ್ತಿನಿಂದ ಒಂದು ಪೋರ್ಟಲ್ ಲಾಂಚ್ ಮಾಡುತ್ತಿದ್ದೇವೆ. ಸಾರ್ವಜನಿಕರು ಯಾರೇ ತಮ್ಮ ಅಭಿಪ್ರಾಯ ಬೇಕಾದರೂ ಪೋರ್ಟಲ್ ಮೂಲಕ ನೀಡಬಹುದು. ಟ್ರಾಫಿಕ್ ಮ್ಯಾನೇಜ್ಮೆಂಟ್ ಸಲಹೆಗಳನ್ನು ನೀಡಲು ಸಾಧ್ಯವಾಗುತ್ತೆ. ಗೃಹ ಸಚಿವರ ಜೊತೆಗೂ ಕೂಡ ಮಾತನಾಡಿ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆಯುತ್ತೇನೆ. ಟ್ರಾಫಿಕ್ ಮ್ಯಾನೇಜ್ಮೆಂಟ್ಗೆ ಸಂಬಂಧಿಸಿಯೇ ಪ್ರತ್ಯೇಕ ಸಭೆ ನಡೆಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ
ಕೊಪ್ಪಳ: ಕೊಪ್ಪಳ ತಾಲೂಕಿನ ಹಿರೇಹಳ್ಳದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 45 ಟನ್ ಮರಳನ್ನು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸರ ಜಂಟಿ ಕಾರ್ಯಚರಣೆ ನಡೆಸಿತ್ತು. ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಮರಳುಗಾರಿಕೆ ಬಗ್ಗೆ ಸರ್ವೆ ಮಾಡಿದೆ.
ಬೆಂಗಳೂರು: 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಬಾಳೆ ಹಣ್ಣು ಹಾಗೂ ಮೊಟ್ಟೆ ವಿತರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಸಂಪುಟ ತೀರ್ಮಾನಕ್ಕೆ ಸಂಬಂಧಿಸಿದಂತೆ ಮಕ್ಕಳ ಬದುಕಿನ ಜೊತೆಗೆ 2 ಪಕ್ಷದವರು ಚೆಲ್ಲಾಟ ಆಡುತ್ತಿದ್ದಾರೆ. ಯಾರ ಬಗ್ಗೆ ಓದಬೇಕು ಅನ್ನುವ ಗೊಂದಲ ಮಕ್ಕಳಲ್ಲಿ ಇದೆ. ಮಕ್ಕಳ ಮನಸ್ಸಲ್ಲಿ ಇಂತಹ ವಾತಾವರಣ ನಿರ್ಮಾಣ ಸರಿಯಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರು: ಗೃಹಜ್ಯೋತಿಗೆ ಅರ್ಜಿ ಸಲ್ಲಿಸೋಕೆ ಬಂದ ಜನರ ಪರದಾಡುತ್ತಿದ್ದಾರೆ. ಸರ್ವರ್ ಬ್ಯುಸಿಯಿಂದಾಗಿ ಜನರು ಬೆಳ್ಳಗ್ಗೆಯಿಂದ ಕ್ಯೂನಲ್ಲಿ ನಿಂತಿದ್ದಾರೆ. ಒಂದಷ್ಟು ಹೊತ್ತು ಕಾದು ಕಾದು ಸುಸ್ತಾಗಿ ಸಾರ್ವಜನಿಕರು ಮನೆಗಳಿಗೆ ತೆರಳುತ್ತಿದ್ದಾರೆ.
ಬೆಂಗಳೂರು: ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸತೀಶ್ ಜಾರಕಿಹೊಳಿ ಬಾಯಿ ಚಪಲಕ್ಕೆ ಮಾತನಾಡ್ತಾರೆ ಅಷ್ಟೇ. ಸರ್ವರ್ ಸ್ಟ್ರಾಂಗ್ ಮಾಡಿಕೊಳ್ಳಬೇಕೆಂದು ಇವರಿಗೆ ಗೊತ್ತಿಲ್ವಾ? ಕೇಂದ್ರ 5 ಕೆಜಿ ಅಕ್ಕಿ ಕೊಡುತ್ತಿದೆ, ಈ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. 35 ಲಕ್ಷ ಬಿಲ್ ಕಟ್ಟಬೇಕೆಂದು VTU ವಿಸಿ ಬಾಯಿ ಬಡ್ಕೊತ್ತಿದ್ದಾರೆ. ಕೋಲಾರದಲ್ಲಿರುವ ಡಿಸಿಸಿ ಬ್ಯಾಂಕ್ನಲ್ಲಿ ಗಲಾಟೆ ಆಗಿದೆ. ತನಿಖೆ ನಡೆದರೆ ಯಾರ ಯಾರು ಜೈಲಿಗೆ ಹೋಗುತ್ತಾರೆ ಗೊತ್ತಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಬೆಂಗಳೂರು: ಯಾವುದೇ ಪಕ್ಷ, ವ್ಯಕ್ತಿಯಾಗಿದ್ದರೂ ಕ್ರಮಕೈಗೊಳ್ಳಬೇಕು. ಸುಳ್ಳು ಸುದ್ದಿ ಹಾಕಿ ಜಾತಿ, ಧರ್ಮದ ನಡುವೆ ಸಂಘರ್ಷ ಸೃಷ್ಟಿಸುತ್ತಾರೆ. ಇದಕ್ಕೆ ಮೊದಲು ಕಡಿವಾಣ ಹಾಕಬೇಕು. ನನಗೇ ಇದರ ಕೆಟ್ಟ ಅನುಭವವಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದೇನೆ ಅಂತ ಸುಳ್ಳು ಸುದ್ದಿ ಹರಡಿದ್ದರು. ಆಗ ನನಗೆ ಸಾಕಷ್ಟು ಹೊಡೆತ ಬಿದ್ದಿದೆ. ಇಲ್ಲದ ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡಿದ್ದರು. ಕೊನೆಗೆ ತಪ್ಪಿತಸ್ಥರನ್ನು ಬಂಧಿಸಿದರು. ಆದರೆ, ನನ್ನ ವ್ಯಕ್ತಿತ್ವಕ್ಕೆ ಡ್ಯಾಮೇಜ್ ಆಗಿತ್ತಲ್ಲವಾ ? ಯಾರೂ ಕೂಡ ಇಂತಹ ಕೆಟ್ಟ ಕೆಲಸ ಮಾಡಬಾರದು. ಯಾವುದೇ ಪಕ್ಷವಾದರೂ ಕ್ರಮಕೈಗೊಳ್ಳಬೇಕು ಫೇಕ್ ನ್ಯೂಸ್ನಿಂದ ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿರುವ ವಿಚಾರ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಮಂಗಳೂರು: ಕೇಂದ್ರ ಸರ್ಕಾರ ಇಂಥ ಕೆಲಸ ಮಾಡಲ್ಲ, ಇದು ಕಾಂಗ್ರೆಸ್ ವಿಫಲತೆ. ಬಿಟ್ಟಿ ಭಾಗ್ಯ ಘೋಷಿಸಿ ಅದನ್ನು ಕೊಡಲು ಕಾಂಗ್ರೆಸ್ಗೆ ಆಗುತ್ತಿಲ್ಲ. ಹೀಗಾಗಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದು ಕಾಂಗ್ರೆಸ್ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂಬ ಸತೀಶ್ ಜಾರಕಿಹೊಳಿ ಆರೋಪಕ್ಕೆ ನಳಿನ್ ಕುಮಾರ್ ತಿರುಗೇಟು ನೀಡಿದರು.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಆರೋಗ್ಯ ಸ್ಥಿರವಾಗಿದೆ. ನಿನ್ನೆ (ಜೂ.20) ತಡರಾತ್ರಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ MICUನಲ್ಲಿ ಪಾರ್ವತಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು MICUನಿಂದ ವಾರ್ಡ್ಗೆ ಶಿಫ್ಟ್ ಮಾಡುತ್ತೇವೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ದಾವಣಗೆರೆ: ಮಳೆಗಾಗಿ ದಾವಣಗೆರೆ ಜಿಲ್ಲೆಯಲ್ಲಿ ವಿಶಿಷ್ಟ ಸಂಪ್ರದಾಯ ಜೀವಂತವಾಗಿದೆ. ಮನೆ ಮನೆ ಭಿಕ್ಷೆ ಬೇಡಿದರೇ ಮಳೆ ಆಗುತ್ತದೆ ಎಂಬ ನಂಬಿಕೆ ಇದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿ ಮಲಹಾಳ್ ಗ್ರಾಮದಲ್ಲಿ ವಿಶಿಷ್ಟ ಸಂಪ್ರದಾಯ ಜೀವಂತವಾಗಿದೆ. ಗ್ರಾಮದ ಕೆಲ ಅವಿವಾಹಿತರು ಮನೆ ಮನೆಗಳಿಗೆ ಹೋಗಿ ಭಿಕ್ಷೆ ಬೇಡಿ ದವಸ ಧಾನ್ಯಗಳನ್ನ ತರುತ್ತಾರೆ. ಹೀಗೆ ತಂದ ಧಾನ್ಯಗಳಿಂದ ದೇವಿಗೆ ನೈವದ್ಯೆ ಮಾಡುವುದು ಇಲ್ಲಿನ ಸಂಪ್ರದಾಯವಾಗಿದೆ. ವರುಣ ದೇವರೇ ಮಳೆ ಇಲ್ಲದೆ ರೈತ ಭಿಕ್ಷೆ ಬೇಡುವ ಕಾಲ ಬಂದಿದೆ ಕೃಪೆ ಮಾಡು ಎಂಬ ಸಂದೇಶ ನೀಡುವುದೇ ಇದರ ಉದ್ದೇಶವಾಗಿದೆ. ಹೀಗೆ ಮಾಡಿದರೇ ಮಳೆ ಬರುತ್ತದೆ ಎಂಬ ನಂಬಿಕೆಯಲ್ಲಿ ಜನ ಇದ್ದಾರೆ.
ಮೈಸೂರು: ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂಬ ಆರೋಪ ವಿಚಾರ ಸತೀಶ್ ಜಾರಕಿಹೊಳಿ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರ ಸರ್ಕಾರದಲ್ಲಿ ಎಂತೆಂಥಾ ಸಚಿವರು ಇದ್ದಾರೆ? ಸಚಿವರಿಗೆ ಓರಿಯಂಟಿಯೇಶನ್ ಅಗತ್ಯವಿದೆ. ಅವರಿಗೆ ಯಾವದರೂ ಬಗ್ಗೆಯೂ ಅರಿವಿಲ್ಲದೆ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇದೊಂದು ರೀತಿ ಕರ್ನಾಟಕಕ್ಕೆ ಅವಮಾನ. ಸಾರ್ವಜನಿಕವಾಗಿ ಏನು ಮಾತನಾಡಬೇಕು ? ಅನ್ನೋದು ಗೊತ್ತಿಲ್ಲ. ಈ ರೀತಿ ಅಸಂಬದ್ಧವಾದ ಹೇಳಿಕೆ ಕೊಟ್ಟರೆ ಕರ್ನಾಟಕದ ಮರ್ಯಾದೆ ಹೋಗುತ್ತದೆ. ಸರ್ವರ್ ಅನ್ನು ಯಾರು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ ನಮ್ಮ ರಾಜ್ಯ ಸರ್ಕಾರದ ಪ್ರತಿನಿಧಿ. ಈ ರೀತಿ ಹೇಳಿಕೆ ಕೊಟ್ಟು ಮುಜುಗರಕ್ಕೆ ಒಳಗಾಗುವುದು ಬೇಡ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜ್ವರ ಕಾಣಿಸಿಕೊಂಡ ಹಿನ್ನೆಲೆ ರಾತ್ರಿ 11.30ಕ್ಕೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸದ ಸಮಯ ಬದಲಾವಣೆಯಾಗಿದೆ. ಬೆಳಗ್ಗೆ 9.50ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಬೇಕಾಗಿತ್ತು. ಆದರೆ ಈಗ 11.30 ಗೆ ಹೆಚ್ಎಎಲ್ನಿಂದ ವಿಶೇಷ ವಿಮಾನ ಮೂಲಕ ದೆಹಲಿಗೆ ತೆರಳಲಿದ್ದಾರೆ. ದೆಹಲಿಗೆ ತೆರಳುವ ಮುನ್ನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.
ಬೆಂಗಳೂರು: ಹೊಸದುರ್ಗದ ಮಾಜಿ ಶಾಸಕ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರು ಸಿಐಡಿ ಡೈರೆಕ್ಟರ್ ಜನರಲ್ ಆಪ್ ಪೊಲೀಸ್ ಅವರಿಗೆ ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ಪತ್ರ ಬರೆದಿದ್ದಾರೆ.
ಕಲಬುರಗಿ: ಸೇತುವೆ ಮೇಲಿಂದ ತಳ್ಳಿ ಕಾಲೇಜು ವಿದ್ಯಾರ್ಥಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ನಾಗರಾಣಿ ಬಳಿ ನಡೆದಿದೆ. ಕಲಬುರಗಿ ನಗರದ ಕಮಲನಗರ ನಿವಾಸಿ ಶಿವಕುಮಾರ್ (17) ಕೊಲೆಯಾದ ಕಾಲೇಜು ವಿದ್ಯಾರ್ಥಿ.
ಬೆಂಗಳೂರು: ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು (ಜೂ.21) ರಾಜ್ಯದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
Published On - 7:36 am, Wed, 21 June 23