Hassan News: ಅಡವಿಟ್ಟ ಚಿನ್ನ ಅದಲು ಬದಲು; ಮಹಾ ಮೋಸಕ್ಕೆ ಬೆಚ್ಚಿಬಿದ್ದ ಎಸ್ಬಿಐ ಬ್ಯಾಂಕ್ ಗ್ರಾಹಕರು,ಆರೋಪಿ ಅಂದರ್
ಆತ ಕಳೆದ 10 ವರ್ಷಗಳಿಂದ ಎಸ್.ಬಿ.ಐ ಬ್ಯಾಂಕಿನಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಹೇಳಿ ಕೇಳಿ ಆತ ಸ್ಥಳೀಯನಾಗಿದ್ದರಿಂದ ಬ್ಯಾಂಕ್ ಸಿಬ್ಬಂದಿ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದ ಆತ, ಬ್ಯಾಂಕಿನ ಚಿನ್ನದ ಸಾಲ ವಿಭಾಗದ ದಾಖಲೆ ನೋಡಿಕೊಳ್ಳೋಕೆ ಶುರುಮಾಡಿದ್ದನು. ಆತನನ್ನ ಅಮಾಯಕ ಎಂದು ನಂಬಿದ ಬ್ಯಾಂಕ್ ಅಧಿಕಾರಿಗಳು ಚಿನ್ನದ ಕಪಾಟಿನ ಕೀ ಕೂಡ ಆತನ ಕೈಗಿತ್ತಿದ್ದರು. ಅಷ್ಟೇ ತಾನು ಮಾಡಿದ ಸಾಲ, ಸಾಲದ ಮೇಲಿನ ಬಡ್ಡಿಗೆಂದು ವರ್ಷಗಳಿಂದ ಅಡಮಾನ ಇಟ್ಟಿದ ಗ್ರಾಹಕರ ಚಿನ್ನವನ್ನ ಒಂದೊಂದೇ ಎಗರಿಸೋಕೆ ಶುರಮಾಡಿದ್ದವ ಅಂದರ್ ಆಗಿದ್ದಾನೆ.
ಹಾಸನ: ಅಡವಿಟ್ಟ ಅಸಲಿ ಚಿನ್ನ ಎಗರಿಸಿ ನಕಲಿ ಚಿನ್ನ(Gold)ವನ್ನ ಬ್ಯಾಂಕ್ ಕಪಾಟಿನಲ್ಲಿಟ್ಟು ಮೋಸ, ತಾನು ಮಾಡಿದ ಸಾಲ ತೀರಿಸಲು ಜನರು ಅಡವಿಟ್ಟ ಚಿನ್ನ ಕದ್ದು, ತಲೆ ಮರೆಸಿಕೊಂಡಿದ್ದ, ಈ ಮಧ್ಯೆ ಆತ್ಮಹತ್ಯೆಯ ನಾಟಕದ ವೀಡಿಯೋ ಮಾಡಿ ಕಳ್ಳಾಟ ಆಡಿದವನನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹೌದು ಬೃಹತ್ ಹಗರಣದ ಜಾಲ ಬೇಧಿಸಲು ಪೊಲೀಸರು ಮುಂದಾಗಿದ್ದರು. ಹಾಸನ(Hassan) ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬೆಳವಾಡಿ ಗ್ರಾಮದ ಎಸ್ಬಿಐ(SBI) ಶಾಖೆಯಲ್ಲಿ 1 ಕೋಟಿಗೂ ಅದಿಕ ಮೌಲ್ಯದ ಚಿನ್ನವನ್ನ ಎಗರಿಸಿರುವ ಆರೋಪ ಕೇಳಿ ಬಂದಿತ್ತು. ಕಷ್ಟಕ್ಕಾಗಿ ತಮ್ಮಲ್ಲಿರುವ ಚಿನ್ನದ ಆಭರಣವನ್ನ ಅಡವಿಟ್ಟು ಸಾಲ ಪಡೆದಿದ್ದ ಗ್ರಾಹಕರು ತಮ್ಮ ಚಿನ್ನ ಬ್ಯಾಂಕ್ನಲ್ಲಿ ಭದ್ರವಾಗಿದೆ ಎಂದುಕೊಂಡಿದ್ದರು. ಬ್ಯಾಂಕ್ನ ಓರ್ವ ಸಿಬ್ಬಂದಿ ಮೇ ತಿಂಗಳಲ್ಲಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಬ್ಯಾಂಕಿನ ಖಜಾನೆಯಲ್ಲಿದ್ದ ಚಿನ್ನದ ಪರಿಶೀಲನೆ ನಡೆಸಿದ ವೇಳೆ ನಡೆದಿರೋ ಭಾರೀ ಗೋಲ್ಮಾಲ್ ಬಯಲಾಗಿದೆ.
ಸಾಲವನ್ನ ತೀರಿಸಲು ಚಿನ್ನವನ್ನ ಕಳ್ಳತನ ಮಾಡಲು ಶುರುಮಾಡಿದ್ದ ಆಸಾಮಿ
2013ರಿಂದ ಇದೇ ಗ್ರಾಮದ ಲವಾ ಬಿ.ಎನ್ ಎಂಬಾತ ಹೊರಗುತ್ತಿಗೆ ಆಧಾರದಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ವರ್ಷ ಕಳೆದಂತೆ ಬ್ಯಾಂಕಿನ ಅಧಿಕಾರಿಗಳ ವಿಶ್ವಾಸ ಕೂಡ ಗಳಿಸಿದ್ದ. ಈತ ಪ್ರಾಮಾಣಿಕ ಎಂದು ನಂಬಿದ ಬ್ಯಾಂಕ್ ಅಧಿಕಾರಿಗಳು ಬ್ಯಾಂಕಿನ ಚಿನ್ನದ ಅಡಮಾನ ವಿಭಾಗದ ಕಡತಗಳು, ಹೊಸ ಖಾತೆ ತೆರೆಯೋ ಪ್ರಕ್ರಿಯೆಯ ಜವಾಬ್ದಾರಿಯನ್ನ ಈತನ ಹೆಗಲಿಗೆ ಹಾಕಿ ಮೈ ಮರೆತ್ತಿದ್ದರು. ಇದನ್ನೆ ಬಂಡವಾಳ ಮಾಡಿಕೊಂಡ ಈ ಖತರ್ನಾಕ್ ತಾನು ಮಾಡಿದ್ದ ಸಾಲ ತೀರಿಸಲು, ಸಾಲದ ಬಡ್ಡಿಕಟ್ಟಲು ಜನರ ಚಿನ್ನವನ್ನ ಒಂದೊಂದಾಗಿ ಎಗರಿಸೋಕೆ ಶುರುಮಾಡಿದ್ದ.
ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನ
ಹೌದು ತನಗೆ ಕಷ್ಟ ಆದಾಗ ಬ್ಯಾಂಕ್ನಲ್ಲಿದ್ದ ಚಿನ್ನ ಎಗರಿಸೋದು, ತಾನು ಎತ್ತಿಕೊಂಡ ತೂಕದಷ್ಟು ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನ ಇಟ್ಟು ಯಾಮಾರಿಸಿದ್ದ. ಆದ್ರೆ, ಯಾವಾಗ ಬ್ಯಾಂಕ್ನ ಹಿರಿಯ ಅಧಿಕಾರಿಗಳು ಚಿನ್ನದ ಪರಿಶೀಲನೆಗಿಳಿದ್ರೋ ನಡೆದಿರೋ ಮಹಾ ವಂಚನೆ ಬಯಲಾಗಿದೆ. ತನ್ನ ಕಳ್ಳತನದ ವಿಚಾರ ಬಯಲಾಗುತ್ತಲೆ ತಿಂಗಳ ಹಿಂದೆ ಎಸ್ಕೇಪ್ ಆಗಿದ್ದ ಲವಾ ಬಿ.ಎನ್ ವಾರದ ಹಿಂದೆ ಸೆಲ್ಫಿ ವೀಡಿಯೋ ಮಾಡಿ ತಾನು ಮಾಡಿರೋ ಕಳ್ಳತನವನ್ನು ಒಪ್ಪಿಕೊಂಡಿದ್ದಾನೆ. ಸಾಲಗಾರರ ಕಾಟ ಹೆಚ್ಚಾಗಿದ್ದರಿಂದ ಚಿನ್ನ ಕದ್ದೆ ನನ್ನ ಸಾವಿಗೆ ಸಾಲಗಾರರೇ ಕಾರಣ ಎಂದು ಆರೋಪಿಸಿದ್ದನು. ಈ ಕುರಿತು ಜೂನ್ 14ರಂದು ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರೋ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.
ಬೆಳವಾಡಿಯ ಎಸ್.ಬಿ.ಐ ಗ್ರಾಮೀಣ ಶಾಖೆಯಾದ್ದರಿಂದ ಹಳ್ಳಿಯ ರೈತರು ತಮ್ಮ ಜಮೀನು ಕೆಲಸಗಳಿಗಾಗಿ ಒಡವೆಗಳನ್ನ ಅಡಮಾನ ಮಾಡಿ ಸಾಲ ಪಡೆದಿದ್ದಾರೆ. ಕೆಲವರು ಐದಾರು ವರ್ಷಗಳಿಂದಲೂ ಅಡವಿಟ್ಟ ಚಿನ್ನ ಬಿಡಿಸಿಲ್ಲ, ಬಡ್ಡಿಕಟ್ಟಿಕೊಂಡು ಗೋಲ್ಡ್ ಲೋನ್ ನವೀಕರಣ ಮಾಡಿದ್ದಾರೆ. ವಂಚನೆ ಮಾಡಿರೋ ಆರೋಪ ಹೊತ್ತಿರೋ ಲವಾ ಸ್ಥಳೀಯನೆ ಆಗಿದ್ದರಿಂದ ಯಾರು ಬೇಗನೆ ಒಡವೆ ಬಿಡಿಸೋದಿಲ್ಲ ಎನ್ನೋದನ್ನ ಲೆಕ್ಕಾಚಾರ ಹಾಕಿ ಅಂತಹವರ ಚಿನ್ನಕ್ಕೆ ಕನ್ನ ಹಾಕಿದ್ದ. ಬ್ಯಾಂಕ್ನ ಸೀಕ್ರೇಟ್ ಲಾಕರ್ನಲ್ಲಿದ್ದ 30 ಚಿನ್ನದ ಕವರ್ನಲ್ಲಿ 18 ಕವರ್ಗಳಲ್ಲಿನ ಚಿನ್ನವನ್ನ ಬದಲಾಯಿಸಿ ಅಸಲಿ ಚಿನ್ನದ ಬದಲು ನಕಲಿ ಚಿನ್ನ ಇಟ್ಟಿದ್ದ. ಇದೀಗ ಪ್ರಕರಣ ಬೆಳಕಿಗೆ ಬರುತ್ತಲೆ ಎಸ್ಕೇಪ್ ಆಗಿದ್ದ ಲವಾನನ್ನ ಕರೆದು ವಿಚಾರಣೆ ಮಾಡೋಕೆ ಶತ ಪ್ರಯತ್ನ ಮಾಡಿದ ಬ್ಯಾಂಕ್ ಅಧಿಕಾರಿಗಳು ಕಡೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ಆರೋಪಿ ಸಿಕ್ಕಿಬಿದ್ದಿದ್ದು, ಆತನ ವಿರುದ್ದ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಚಾಕಲೇಟ್ನಲ್ಲಿ ಪೇಸ್ಟ್ರೂಪದ ಚಿನ್ನವನ್ನು ಸಾಗಿಸುತ್ತಿದ್ದ ಆರೋಪಿಯ ಬಂಧನ
ಒಟ್ಟಿನಲ್ಲಿ ತಮ್ಮ ಹಣಕಾಸಿನ ಅನಿವಾರ್ಯತೆಗಾಗಿ ಚಿನ್ನ ಅಡವಿಟ್ಟು ಸಾಲ ಮಾಡಿದ್ದ ರೈತರು, ತಮ್ಮ ಚಿನ್ನ ಬ್ಯಾಂಕ್ ನಲ್ಲಿ ಭದ್ರವಾಗಿದೆ ಎಂದು ನೆಮ್ಮದಿಯಾಗಿದ್ದರೆ, ಯಾರಿಗೂ ತಿಳಿಯದಂತೆ ಚಿನ್ನ ಎಗರಿಸಿರೋ ಖತರ್ನಾಕ್, ಚಿನ್ನ ಮಾರಾಟ ಮಾಡಿ ತನ್ನ ಕಷ್ಟ ನೀಗಿಸಿಕೊಳ್ಳೋ ಯತ್ನ ಮಾಡಿದ್ದ. ಆದ್ರೆ, ಚಿನ್ನ ಪರಿಶೀಲನೆ ವೇಳೆ ನಡೆದಿರುವ ಮಹಾ ಮೋಸ ಬಯಲಾಗಿದ್ದು, ಈ ಹಗರಣದ ಹಿಂದೆ ಯಾರಿದ್ದಾರೆ, ಕೇವಲ ತಾನು ಮಾಡಿದ ಸಾಲಕ್ಕಾಗಿ ಇಷ್ಟೆಲ್ಲಾ ಚಿನ್ನ ಎಗರಿಸಿ ಆತ ಮಾರಾಟ ಮಾಡಿಕೊಂಡನಾ? ಎನ್ನೋದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.
ವರದಿ: ಮಂಜುನಾಥ್.ಕೆ.ಬಿ ಟಿವಿ9ಹಾಸನ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ