
ಬೆಂಗಳೂರು, (ಸೆಪ್ಟೆಂಬರ್ 27): ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ Pre-Pregnancy Care Unitಗಳನ್ನು ಆರಂಭಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವುದು, ತಾಯಿ ಮರಣ ಪ್ರಮಾಣ ಕಡಿಮೆ ಮಾಡುವುದು ಹಾಗೂ ಸುರಕ್ಷಿತ ಹೆರಿಗೆಗೆ ಆದ್ಯತೆ ನೀಡುವ ಪ್ರಮುಖ ಉದ್ದೇಶದಿಂದ ದೇಶದಲ್ಲೇ ಪ್ರಥಮ ಬಾರಿಗೆ ಸಮಗ್ರ ವ್ಯವಸ್ಥೆ ರೂಪಿಸುವತ್ತ ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆಗೆ ಕೈ ಹಾಕಿದೆ.
ಗರ್ಭಧಾರಣೆಯಾದ ಬಳಿಕ ಮಾತ್ರವಲ್ಲ, ಗರ್ಭಧಾರಣೆಗೆ ಮುನ್ನವೇ ಮಹಿಳೆಯ ಆರೋಗ್ಯದ ಮೇಲೆ ನಿಗಾ ಇಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಮಹಿಳೆಯ ಆರೋಗ್ಯ ಸ್ಥಿತಿ, ಪೌಷ್ಟಿಕತೆ ಹಾಗೂ ಗರ್ಭಧಾರಣೆಗೆ ಸಂಬಂಧಿಸಿದ ಅಪಾಯಗಳನ್ನು ಮೊದಲೇ ಗುರುತಿಸಿ ಸೂಕ್ತ ಆರೈಕೆ ನೀಡಲು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ ಗರ್ಭಿಣಿಯರಿಗೆ ಗುಣಮಟ್ಟದ ಪ್ರಸವಪೂರ್ವ ಆರೈಕೆ Quality Antenatal Care Programmeಗೆ ಹೆಚ್ಚಿನ ಒತ್ತು ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ರಾಜ್ಯದಲ್ಲಿ ತಾಯಿ ಮರಣ ಪ್ರಮಾಣವನ್ನು ಮತ್ತಷ್ಟು ಕಡಿಮೆ ಮಾಡಿ ಶೂನ್ಯ ತಾಯಿ ಮರಣದ ಗುರಿ ಸಾಧಿಸುವತ್ತ ಸರ್ಕಾರದ ಗಮನ ಹರಿಸಿದ್ದು, ತಾಯಿ ಮರಣಕ್ಕೆ ಕಾರಣವಾಗುವ ಪ್ರಮುಖ ಅಂಶಗಳನ್ನು ಗುರುತಿಸಿ, ಆರಂಭಿಕ ಹಂತದಲ್ಲೇ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ. ಗರ್ಭಿಣಿಯರ ಆರೋಗ್ಯ ತಪಾಸಣೆ, ಪೌಷ್ಟಿಕತೆ, ಸುರಕ್ಷಿತ ಹೆರಿಗೆ ಹಾಗೂ ಹೆರಿಗೆಯ ನಂತರದ ಆರೈಕೆಗೆ ಹೆಚ್ಚಿನ ಒತ್ತು ನೀಡಲು ಇದನ್ನು ಜಾರಿಗೆ ತರುತ್ತಿದೆ.
ಒಟ್ನಲ್ಲಿ ತಾಯಿ ಮರಣ ತಡೆ ಕೇವಲ ಆಸ್ಪತ್ರೆಗಳಿಗೆ ಸೀಮಿತವಾಗದೆ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಜಾಗೃತಿ ಮೂಡಿಸಲು ಮುಂದಾಗಿದ್ದು, ಗರ್ಭಧಾರಣೆಗೆ ಮುನ್ನ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಅಗತ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಹಾಗೂ ಅಪಾಯದ ಗರ್ಭಧಾರಣೆಗಳನ್ನು ಮೊದಲೇ ಗುರುತಿಸಲು ಆರೋಗ್ಯ ಇಲಾಖೆ ಈ ಮಹತ್ವದ ಯೋಜನೆಗೆ ಕೈ ಹಾಕಿದೆ.