ಸಚಿವರು ಸಮಾಧಾನವಾಗಿದ್ದಾರೆ, ಇಲಾಖೆ ಇಷ್ಟವಾಗದಿದ್ರೆ ಮುಂದೆ ನೋಡೋಣ: ಬಿ.ಎಸ್.ಯಡಿಯೂರಪ್ಪ
ಸಚಿವರಾದ ಬಸವರಾಜ ಬೊಮ್ಮಾಯಿ, ಅಶೋಕ್ ಸಮ್ಮುಖದಲ್ಲಿ ಮಾಧ್ಯಮಗಳ ಮುಂದೆ ತರಾತುರಿಯಲ್ಲಿ ಬಂದ ಇಬ್ಬರು, ನಮಗೇನು ಅಸಮಾಧಾನವಿಲ್ಲ ಎಂದು ಹೇಳಿ ಮತ್ತೆ ಸಿಎಂ ನಿವಾಸದ ಒಳಗೆ ತೆರಳಿದ್ದಾರೆ.
ಬೆಂಗಳೂರು: ನೂತನ ಖಾತೆ ಸಂಬಂಧ ಸಚಿವರಿಗೆ ಅಸಮಾಧಾನವಿಲ್ಲ. ಎಲ್ಲ ಸಚಿವರು ಸಮಾಧಾನವಾಗಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಅಸಮಾಧಾನಿತರ ಜೊತೆ ಮಾತುಕತೆ ನಡೆಸಿದ ನಂತರ ಮಾತನಾಡಿದ ಯಡಿಯೂರಪ್ಪ, ಸಚಿವ ಸ್ಥಾನ ಹಂಚಿಕೆ ಮಾಡುವುದು ಸುಲಭದ ಕೆಲಸವಲ್ಲ. ಮಾಧುಸ್ವಾಮಿ, ಗೋಪಾಲಯ್ಯ ಸಮಾಧಾನವಾಗಿದ್ದಾರೆ. ಅಕಸ್ಮಾತ್ ಅವರಿಗೆ ಸಚಿವ ಸ್ಥಾನ ಇಷ್ಟವಾಗದಿದ್ದರೆ ಮುಂದೆ ನೋಡೋಣ. ಎಲ್ಲರ ಜತೆಯೂ ನಾನು ಮಾತನಾಡಿದ್ದೇನೆ ಎಂದರು.
ಖಾತೆ ಹಂಚಿಕೆ ವಿಚಾರಕ್ಕೆ ಸಬಂಧಿಸಿದಂತೆ ಅಬಕಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಹಾಗೂ ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಗೋಪಾಲಯ್ಯ ಅಸಮಾಧಾನ ಹೊರ ಹಾಕಿದ್ದರು. ಇವರನ್ನು ಕಾವೇರಿ ನಿವಾಸಕ್ಕೆ ಕರೆಸಿ ಯಡಿರೂಪ್ಪ ಮಾತುಕತೆ ನಡೆಸಿದ್ದರು. ಈಗ ಮಾತುಕತೆ ಯಶಸ್ವಿಯಾದಂತಾಗಿದೆ.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ತೆರಳಿ ಬಿ.ಎಸ್.ಯಡಿಯೂರಪ್ಪ ಬಳಿ ಸಚಿವರಿಬ್ಬರೂ ಚರ್ಚೆ ನಡೆಸಿದ್ದಾರೆ. ನಂತರ ಸಚಿವರಾದ ಬಸವರಾಜ ಬೊಮ್ಮಾಯಿ, ಅಶೋಕ್ ಸಮ್ಮುಖದಲ್ಲಿ ಮಾಧ್ಯಮಗಳ ಮುಂದೆ ತರಾತುರಿಯಲ್ಲಿ ಬಂದ ಇಬ್ಬರು, ನಮಗೇನು ಅಸಮಾಧಾನವಿಲ್ಲ ಎಂದು ಹೇಳಿ ಮತ್ತೆ ಸಿಎಂ ನಿವಾಸದ ಒಳಗೆ ತೆರಳಿದ್ದಾರೆ.
ಅಬಕಾರಿ ಖಾತೆ ನೀಡಿರುವ ಬಗ್ಗೆ ಮಾತನಾಡಿದ್ದ ಎಂಟಿಬಿ, ಅಬಕಾರಿ ಇಲಾಖೆಯಲ್ಲಿ ಮಾಡೋಕೆ ಏನಿದೆ? ಕಂಪನಿಗಳಿಂದ ಮದ್ಯ ಖರೀದಿಸಲಾಗುತ್ತದೆ. ಹೋಲ್ಸೇಲ್ ದರದಲ್ಲಿ ಡೀಲರ್ಗಳಿಗೆ ಮದ್ಯ ಕೊಡಲಾಗುತ್ತದೆ. ಡೀಲರ್ಗಳು ಇದನ್ನು ಅಂಗಡಿಗೆ ಮಾರಿ, ಬಂದ ಹಣವನ್ನು ಸರ್ಕಾರಕ್ಕೆ ತಲುಪಿಸುತ್ತಾರೆ. ಇಲ್ಲಿ ನಾನು ಮಾಡುವ ಕೆಲಸ ಏನೂ ಇಲ್ಲ ಎಂದು ಅಸಮಾಧಾನದ ಬುಗ್ಗೆ ಚಿಮ್ಮಿಸಿದ್ದರು. ಇನ್ನು ಖಾತೆ ಬದಲಾವಣೆ ಮಾಡಿದ್ದಕ್ಕೆ ಗೋಪಾಲಯ್ಯ ಕಿಡಿಕಾರಿದ್ದರು. ನನ್ನ ಖಾತೆ ಬದಲಾವಣೆ ಮಾಡಿದ್ದಾರೆ. ಸಂಜೆ ಸಿಎಂ ಜತೆ ಮಾತಾಡಿ ನಾನೇನು ತಪ್ಪು ಮಾಡಿದ್ದೇವೆ ಎಂದು ಕೇಳುತ್ತೇನೆ ಎಂದಿದ್ದರು.
ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಗ್ರೀನ್ಸಿಗ್ನಲ್.. ಯಾರಿಗೆ ಯಾವ ಖಾತೆ? ವಿವರ ಇಲ್ಲಿದೆ