ಡಿಕೆಶಿ ವಿರುದ್ಧ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ ಯತ್ನಾಳ್​ ವಿರುದ್ಧವೂ ಸರ್ಕಾರದಿಂದ ಕಾನೂನು ಸಮರ

| Updated By: ರಮೇಶ್ ಬಿ. ಜವಳಗೇರಾ

Updated on: Sep 05, 2024 | 5:15 PM

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ಬೆಳವಣಿಗೆಗಳು ನೋಡಿದರೆ ದ್ವೇಷ ರಾಜಕಾರಣ ಶುರುವಾದಂತಿದೆ. ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​​ ಸೇರಿದಕೊಂಡು ಕಾಂಗ್ರೆಸ್​ ಸರ್ಕಾರದ ಅಕ್ರಮಗಳನ್ನು ಬಯಲಿಗೆಳೆಯುವ ಕೆಲಸ ಮಾಡುತ್ತಿದೆ. ಇನ್ನೊಂದೆಡೆ ವಿಪಕ್ಷಗಳಿಗೆ ತಿರುಗೇಟು ನೀಡಲು ಅವರ ಸರ್ಕಾರದ ಅವಧಿಯಲ್ಲಿ ಹಳೇ ಕೇಸ್​ಗಳಿಗೆ ಮರು ನೀಡುವ ಕೆಲಸವಾಗುತ್ತಿದೆ. ಇದರ ಮಧ್ಯ ಡಿಕೆ ಶಿವಕುಮಾರ್​ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ನಡುವೆ ಕಾನೂನು ಸಮರ ಶುರುವಾಗಿದೆ.

ಡಿಕೆಶಿ ವಿರುದ್ಧ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ ಯತ್ನಾಳ್​ ವಿರುದ್ಧವೂ ಸರ್ಕಾರದಿಂದ ಕಾನೂನು ಸಮರ
ಡಿಕೆ ಶಿವಕುಮಾರ್- ಬಸನಗೌಡ ಪಾಟೀಲ್ ಯತ್ನಾಳ್
Follow us on

ನವದೆಹಲಿ/ಬೆಂಗಳೂರು, (ಸೆಪ್ಟೆಂಬರ್ 05): ಅಕ್ರಮ ಆಸ್ತಿಗಳಿಗೆ ಪ್ರಕರಣದಲ್ಲಿ ಸಿಬಿಐ ತನಿಖೆಯಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಹೈಕೋರ್ಟ್ ರಿಲೀಫ್ ನೀಡಿದ್ರೂ, ಡಿಕೆಶಿ ರಾಜಕೀಯ ಕಡು ವಿರೋಧಿ ಬಸನಗೌಡ ಪಾಟೀಲ್‌ ಯತ್ನಾಳ್ ಸುಮ್ಮನಾಗಿಲ್ಲ.. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಮತ್ತೊಂದೆಡೆ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ತೆರೆಯಲು ಹೈಕೋರ್ಟ್ ಅವಕಾಶ ನೀಡಿರುವುದರ ವಿರುದ್ಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಇದರೊಂದಿಗೆ ಡಿಕೆ ಶಿವಕುಮಾರ್ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಿರುವ ಯತ್ನಾಳ್​ ವಿರುದ್ಧ ರಾಜ್ಯ ಸರ್ಕಾರವೂ ಸಹ ಕಾನೂನು ಸಮರ ಸಾರಿದೆ.

ಡಿಕೆಶಿ ಬೆನ್ನು ಹತ್ತಿದ ಬಸನಗೌಡ ಪಾಟೀಲ್ ಯತ್ನಾಳ್

ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಕೆಯಾಗಿದೆ. ಬ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ರಾಜಕೀಯ ವೈರಿ ಡಿಕೆಶಿ ವಿರುದ್ದ ಕಾನೂನು ಹೋರಾಟ ಮುಂದುವರಿಸುವ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಯತ್ನಾಳ್

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣ ಹಿಂಪಡೆಯುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಸುದೀರ್ಗ ವಿಚಾರಣೆ ನಡೆಸಿದ ಹೈಕೋರ್ಟ್ ಯತ್ನಾಳ್ ಅರ್ಜಿಯನ್ನು ತಿರಸ್ಕರಿಸಿತ್ತು. ರಾಜ್ಯ ಸರ್ಕಾರ ಮತ್ತು ಸಿಬಿಐ ನಡುವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ತೀರ್ಮಾನಿಸಲಿ ಎಂದು ಅಭಿಪ್ರಾಯಪಟ್ಟಿತ್ತು. ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದರೆ ಸೂಕ್ತ ಎಂದು ಹೈಕೋರ್ಟ್‌ ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಹಿನ್ನಲೆಯಲ್ಲಿ ಇದೀಗ ಯತ್ನಾಳ್ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಯತ್ನಾಳ್ ಡಿಕೆಶಿ ಕೇಸ್ ಸಂಬಂಧ ಹಿರಿಯ ವಕೀಲರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಯತ್ನಾಳ್ ಸುಪ್ರೀಂಕೋರ್ಟ್ ಮೊರೆ ಹೋಗುವ ಮುನ್ಸೂಚನೆ ತಿಳಿದಿದ್ದ ಡಿಕೆಶಿ ಸುಪ್ರೀಂಕೋರ್ಟ್ ಗರ ಈಗಾಗಲೇ ಕೇವಿಯಟ್ ಸಲ್ಲಿಸಿದ್ದಾರೆ.

ಮತ್ತೊಂದೆಡೆ ಯತ್ನಾಳ್ ಗೆ ಶಾಕ್ ನೀಡಿದ ರಾಜ್ಯ ಸರ್ಕಾರ

ಮತ್ತೊಂದೆಡೆ, ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ತೆರೆಯಲು ಹೈಕೋರ್ಟ್ ಅವಕಾಶ ನೀಡಿರುವುದರ ವಿರುದ್ಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಕಾರ್ಖಾನೆ ತೆರೆಯಲು ಅನುಮತಿ ನೀಡದಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಯತ್ನಾಳ್ ಒಡೆಯನದ ಕಾರ್ಖಾನೆ ನಿಯಮಗಳ ಉಲ್ಲಂಘಿಸಿದೆ ಎಂದು ಮೇಲ್ಮನವಿ ಅರ್ಜಿಯಲ್ಲಿ ಪಿಸಿಬಿ ಆರೋಪಿಸಿದೆ.

ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನಲ್ಲಿರುವ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ತೆರೆಯಲು ಹೈಕೋರ್ಟ್ ಅನುಮತಿ ನೀಡಿತ್ತು. ಆದರೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿರಲಿಲ್ಲ. ಇದರ ವಿರುದ್ಧ ಇತ್ತೀಚೆಗಷ್ಟೇ ಯತ್ನಾಳ್ ಪ್ರತಿಭಟನೆಯನ್ನೂ ನಡೆಸಿದ್ದರು. ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಬಿಜೆಪಿಯ ಇತರ ನಾಯಕರು ಯತ್ನಾಳ್ ಬೆಂಬಲಕ್ಕೆ ನಿಂತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಈ ವಿಚಾರವಾಗಿ ಯತ್ನಾಳ್ ಜತೆ ಮಾತುಕತೆ ನಡೆಸಿ, ಪ್ರತಿಭಟನೆ ಕೈಬಿಡಲು ಮನವಿ ಮಾಡಿದ್ದರು ಆದರೂ ಮಾಲಿನ್ಯ ನಿಯಂತ್ರಣ ಮಂಡಳಿ ಯತ್ನಾಳ್ ಗೆ ಕಾರ್ಖಾನೆ ಆರಂಭಕ್ಕೆ ಅವಕಾಶ ಕೊಟ್ಟಿಲ್ಲ.‌

ರಾಜಕೀಯ ದ್ವೇಷದ ಕಾರಣ ನನ್ನ ಕಾರ್ಖಾನೆ ತೆರೆಯಲು ಅವಕಾಶ ಕೊಟ್ಟಿಲ್ಲ ಎಂದು ಯತ್ನಾಳ್ ಆರೋಪ ಮಾಡುತ್ತಾ.. ಡಿಕೆಶಿ ವಿರುದ್ಧವೂ ಸುಪ್ರಿಂಕೋರ್ಟ್ ನಲ್ಲಿ ಕೇಸ್ ನಡೆಸುವ ಚಾಲೆಂಜ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Thu, 5 September 24