ಬೆಂಗಳೂರು: ಶುಲ್ಕ ಕಡಿತ ಆದೇಶ ಖಂಡಿಸಿ ಇಂದು (ಫೆಬ್ರವರಿ 23) ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ಬೃಹತ್ ಸಮಾವೇಶ ನಡೆಸಿದ್ದು, ಕೆಎಸ್ಆರ್ ರೈಲ್ವೇ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೆ ಮೆರವಣಿಗೆ ನಡೆಸಿದರು. ಇಂದು ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಪ್ರತಿಭಟನೆಯಲ್ಲಿ ಶೇ. 30 ರಷ್ಟು ಶುಲ್ಕ ಕಡಿತದ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಒತ್ತಡ ಹೇರಿದರು. ಅಲ್ಲದೇ ಸ್ಥಳಕ್ಕೆ ಆಗಮಿಸಿದ್ದ ಶಿಕ್ಷಣ ಸಚಿವರಿಗೆ 1ರಿಂದ 5ನೇ ತರಗತಿವರೆಗೆ ಶಾಲೆ ಆರಂಭಿಸಲು ಒತ್ತಡ ಹೇರಿದರು.
ಶೇ. 30ರಷ್ಟು ಶಾಲಾ ಶುಲ್ಕ ಕಡಿತದ ಆದೇಶ ಪುನರ್ ಪರಿಶೀಲಿಸುವಂತೆ ಒತ್ತಾಯಿಸಿದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಜೊತೆಗೆ ಹಲವು ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸದ ಕಾರಣ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸಿದರು. ಕ್ಯಾಮ್ಸ್, ಕುಸುಮಾ, ಮಿಕ್ಸಾ, ಮಾಸ್ ಸೇರಿ ಒಟ್ಟು 11 ಖಾಸಗಿ ಶಾಲಾ ಒಕ್ಕೂಟಗಳಿಂದ ಪ್ರತಿಭಟನೆಗೆ ಬೆಂಬಲ ನೀಡಿದರು.
ಖಾಸಗಿ ಶಾಲಾ ಒಕ್ಕೂಟದ ಬೇಡಿಕೆಗಳೇನು?
1. ರಾಜ್ಯ ಸರ್ಕಾರ ಆದೇಶ ಮಾಡಿರುವ ಶೇ.30 ರಷ್ಟು ಶುಲ್ಕ ಕಡಿತದ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕು.
2. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಅನುದಾನ ನೀಡಬೇಕು.
3. ಕಟ್ಟಡ ಸುರಕ್ಷಿತ ಪ್ರಮಾಣ ಪತ್ರ ಹಿಂದಿನ ಶಾಲೆಗಳಿಗೆ ಕೈ ಬಿಡುವಂತೆ ಒತ್ತಾಯ.
4. 1 ರಿಂದ 5 ನೇ ತರಗತಿಗಳನ್ನ ಆರಂಭ ಮಾಡಬೇಕು.
5. ಬಿಇಓ, ಡಿಡಿಪಿಐಗಳ ಭ್ರಷ್ಟಾಚಾರ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಮಕ್ಕಳ ಹಿತಕ್ಕಾಗಿ ಚಿಂತಿಸೋಣ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೀವೆಲ್ಲ ಬಹಳ ಸಂಖ್ಯೆಯಲ್ಲಿ ಸೇರಿದ್ದೀರಿ. ಪೋಷಕರು ಬಂದಿದ್ದರೆ ಇನ್ನೆಷ್ಟು ಜನ ಸೇರುತ್ತಿದ್ದರು? ಪೋಷಕರದ್ದು ಸೈಲೆಂಟ್ ಮೆಜಾರಿಟಿ. ನಿಮ್ಮ ಶಾಲೆಯ ಪೋಷಕರ ಜೊತೆ ನೀವು ಮಾತನಾಡಿ ಒಂದು ಸೂತ್ರ ತಂದಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ. ಖಾಸಗಿ ಶಾಲೆಗಳ ಶಿಕ್ಷಕರ ಪರಿಸ್ಥಿತಿ ಗೊತ್ತಿದೆ. ಪೋಷಕರ ಜರ್ಜರಿತವೂ ಅರ್ಥ ಆಗುತ್ತದೆ. ಇದಕ್ಕೆ ಯಾರನ್ನ ದೂಷಿಸಬೇಕು? ಕೊರೊನಾದಿಂದ ಹೀಗೆಲ್ಲ ಆಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಸರ್ಕಾರಕ್ಕೆ ಪ್ರತಿಷ್ಠೆ ಮುಖ್ಯವಲ್ಲ, ವಿದ್ಯಾರ್ಥಿಗಳ ಹಿತ ಮುಖ್ಯ. ಇಲಾಖೆಯಲ್ಲಿ ಕೆಲ ವ್ಯವಸ್ಥೆ ಸರಿಪಡಿಸುವ ಕೆಲಸ ಮಾಡುತ್ತೇವೆ. ಮಕ್ಕಳ ಹಿತಕ್ಕಾಗಿ ನಾವೆಲ್ಲ ಚಿಂತಿಸೋಣ ಎಂದರು.
ಶಿಕ್ಷಕರ ಪರಿಸ್ಥಿತಿ ನೋಡಿ ಕಣ್ಣಲ್ಲಿ ನೀರು ಬಂತು
ನಮ್ಮ ಈ ಚಳುವಳಿ ಸುರೇಶ್ ಕುಮಾರ್ ವಿರುದ್ಧ ಅಲ್ಲ. ಕೇವಲ ಶುಲ್ಕ ಕಡಿತದ ಆದೇಶದ ವಿರುದ್ಧ ಪ್ರತಿಭಟನೆ ಅಷ್ಟೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಶಿಕ್ಷಕರಿಗೆ ಏನೂ ಮಾಡಿಲ್ಲ. ಶಿಕ್ಷಕರ ಪರಿಸ್ಥಿತಿ ನೋಡಿ ಕಣ್ಣಲ್ಲಿ ನೀರು ಬಂತು. ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಏನೇನೂ ಮಾಡುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಎಲ್ಲ ಆದೇಶಗಳನ್ನ ಶಿಕ್ಷಣ ಇಲಾಖೆ ಅಧಿಕಾರಿಗಳು ತಿರುಚಿದ್ದಾರೆ. ಶುಲ್ಕ ಕಡಿತದ ಆದೇಶವನ್ನ ದಯವಿಟ್ಟು ಮರು ಪರಿಶೀಲನೆ ಮಾಡಿ. ಶಿಕ್ಷಣ ಇಲಾಖೆಯಲ್ಲಿ ಏಜೆಂಟ್ಗಳು ಜಾಸ್ತಿ ಇದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನ ಉಳಿಸಿ, ಶಿಕ್ಷಕರ ನೆರವಿಗೆ ಬನ್ನಿ ಎಂದು ಶಿಕ್ಷಣ ಸಚಿವರಿಗೆ ಎಂಎಲ್ಸಿ ಪುಟ್ಟಣ್ಣ ಮನವಿ ಮಾಡಿದರು.
ಶಿಕ್ಷಣ ಇಲಾಖೆಗೆ ಸರ್ಕಾರ 25,000 ಕೋಟಿ ಹಣ ನೀಡುತ್ತದೆ. ಖಾಸಗಿ ಶಾಲೆಗಳಲ್ಲಿ 40 ಲಕ್ಷ ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ. ಆದರೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನ ಸರ್ಕಾರ ಕಡೆಗಣಿಸುತ್ತಿದೆ. ಸರ್ಕಾರದ ಧೋರಣೆ ಇದೇ ರೀತಿ ಮುಂದುವರೆದರೆ ಶಾಲೆ ಮುಖ್ಯಸ್ಥರು ಹಾಗೂ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಬೇಕಾಗುತ್ತದೆ. ಖಾಸಗಿ ಶಾಲೆಗಳನ್ನ ಸರ್ಕಾರಿ ಶಾಲೆಗಳಾಗಿ ರಾಷ್ಟ್ರೀಕರಣ ಮಾಡಿ. ಶುಲ್ಕ ಕಡಿತದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಬೀದಿಗೆ ಬಿದ್ದಿವೆ. ಶೇಕಡಾ 30ರಷ್ಟು ಶುಲ್ಕ ಕಡಿತ ಆದೇಶವನ್ನು ಹಿಂಪಡೆಯಬೇಕು. ಆದೇಶ ಹಿಂಪಡೆಯದಿದ್ದರೆ ಸಾಂಕೇತಿಕವಾಗಿ ಹೋರಾಡುತ್ತೇವೆ. ಸರ್ಕಾರದ ಜೊತೆ ಶಿಕ್ಷಣ ಇಲಾಖೆ ಸಚಿವರು ಮಾತನಾಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಹೊರೆಯಾಗಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಒಂದು ಭಾಗವಾಗಿವೆ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಅಭಿಪ್ರಾಯಪಟ್ಟರು.
ಇದನ್ನೂ ಓದಿ
ಖಾಸಗಿ ಶಾಲಾ ಶುಲ್ಕ ಶೇ. 30ರಷ್ಟು ಕಡಿತ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ
ಶಾಲಾ ಶುಲ್ಕ ಪಾವತಿಸದಿದ್ರೆ ಆನ್ಲೈನ್ ಕ್ಲಾಸ್ ಬಂದ್ ಮಾಡ್ತೀವಿ.. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಧಮ್ಕಿ
Published On - 4:00 pm, Tue, 23 February 21