Karnataka Rain: ಬೆಂಗಳೂರಿನಲ್ಲಿ ಮುಂದುವರಿದ ಜಿಟಿ ಜಿಟಿ ಮಳೆ: ರಾಜ್ಯದಲ್ಲಿ ಜು. 18ರವರೆಗೂ ಇರಲಿದೆ ವರುಣನ ಆರ್ಭಟ
ಮೈಸೂರು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ ಜಿಟಿಜಿಟಿ ಮಳೆ ಮುಂದುವರೆದಿದೆ. ಇದರಿಂದ ಬೆಳಗ್ಗೆಯ ವ್ಯಾಪಾರಕ್ಕೆ ತೊಂದರೆಯಾಗಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಬೆಂಗಳೂರು (ಜು. 15): ಪೂರ್ವ ಅರಬ್ಬಿ ಸಮುದ್ರ ಹಾಗೂ ಕಚ್ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರೀ ಮಳೆ ಮುಂದುವರೆದಿದೆ. ಹವಾಮಾನ ಇಲಾಖೆ ಹೇಳಿರು ಪ್ರಕಾರ, ಇನ್ನೂ ನಾಲ್ಕು ದಿನಗಳ ಕಾಲ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಜುಲೈ 18ರವರೆಗೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆಯಿಂದಲೇ ಒಂದೆ ಸಮನೆ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಸದ್ಯಕ್ಕೆ ಯಾವುದೆ ಹಾನಿ ಸಂಭವಿಸಿಲ್ಲ.
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಂಟಿಗ್ರೇಡ್, ಕನಿಷ್ಟ ಉಷ್ಣಾಂಶ 20 ಡಿಗ್ರಿ ಇರಲಿದೆ. ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ತುಂಬಿ ಹರಿಯುತ್ತಿದೆ. ಈಗಾಗಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ರೆಡ್, ಯೆಲ್ಲೋ, ಅರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಗಾಳಿ-ಮಳೆಯಾಗುತ್ತಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಇನ್ನೂ ಮೈಸೂರು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ ಜಿಟಿಜಿಟಿ ಮಳೆ ಮುಂದುವರೆದಿದೆ. ಇದರಿಂದ ಬೆಳಗ್ಗೆಯ ವ್ಯಾಪಾರಕ್ಕೆ ತೊಂದರೆಯಾಗಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ತುಮಕೂರಿನ ಮಧುಗಿರಿ, ಗುಬ್ಬಿ,ಕೊರಟಗೆರೆ, ತಿಪಟೂರು ಸೇರಿದಂತೆ ಅನೇಕ ಕಡೆ ಮೋಡ ಮುಸುಕಿದ ವಾತಾವರಣವಿದೆ.
ಇತ್ತ ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆಯಿಂದ ಜಿಟಿಜಿಟಿ ಮಳೆ ಶುರುವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮಳೆಯಲ್ಲದೇ ಕಂಗಾಲಾಗಿದ್ದ ರೈತರು ಸದ್ಯ ನೆಲ ಬಿಟ್ಟು ಮೇಲೇಳುತ್ತಿರುವ ಮೆಕ್ಕೆಜೋಳ ಕಂಡು ಸಂತಸಗೊಂಡಿದ್ದಾರೆ. ಕೊಡಗು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಬಿಟ್ಟುಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ಬಾಗಮಂಡಲ, ನಾಪೋಕ್ಲು, ಮಡಿಕೇರಿ, ಸುಂಟಿಕೊಪ್ಪ ಮತ್ತು ಸೋಮವಾರಪೇಟೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಾವೇರಿ ನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಡಿಕೇರಿ ನಗರದಲ್ಲಿ ಆಕಾಶವಾಣಿ ಕೇಂದ್ರದ ಬಳಿ ಭೂಕುಸಿತ ಉಂಟಾಗಿದೆ.
ಕಳೆದೊಂದು ವಾರದಿಂದ ಪ್ರತಿದಿನ ಬೀದರ್ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಮನೆಯಿಂದ ಹೊರಬಾರದೆ ಜನ ಪರದಾಡುತ್ತಿದ್ದು, ಜಮೀನಿನಲ್ಲಿ ನೀರು ನಿಂತ ಪರಿಣಾಮ ಬೆಳೆ ಹಾಳಾಗುತ್ತಿದೆ ಎಂದು ರೈತರು ಅಳಲುತೋಡೊಕೊಳ್ಳುತ್ತಿದ್ದಾರೆ. ಇತ್ತ ಕೋಲಾರ ಜಿಲ್ಲೆಯಲ್ಲೂ ರಾತ್ರಿಯಿಂದ ಜಿಟಿ ಜಿಟಿ ಮಳೆ ಆಗುತ್ತಿದೆ. ಮಳೆಯ ನಡುವಯೆ ದಿನನಿತ್ಯದ ಕೆಲಸ ಕಾರ್ಯಗಳನ್ನು ಆರಂಭಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಮುಂದುವರೆದಿದೆ. ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಸ್ ನಿಲ್ದಾಣ ಕೇಸರು ಗದ್ದೆಯಂತಾಗಿದೆ. ಇನ್ನೂ ಮಂಡ್ಯ ಜಿಲ್ಲೆಯಾದ್ಯಂತ ಸೋನೆ ಮಳೆ ಆಗುತ್ತಿದೆ. ಬೆಳಗ್ಗಿನ ಜಾವದಿಂದ ಸುರಿಯುತ್ತಿದ್ದು, ಸೋನೆ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ಕೂಡ ಕಳೆದ ರಾತ್ರಿ ಗಾಳಿ ಸಮೇತ ಮಳೆ ಅಬ್ಬರ ಜೋರಾಗಿದೆ. ನಗರದ ಜೋಗಿಮಟ್ಟಿ ರಸ್ತೆಯಲ್ಲಿ ಮರ ನೆಲಕ್ಕುರುಳಿದ ಪರಿಣಾಮ ರಸ್ತೆಯ ಸಂಪರ್ಕ ಕಡಿತಗೊಂಡಿದೆ.
ಕಳೆದ ನಾಲ್ಕು ದಿನಗಳಿಂದ ಕರ್ನಾಟಕ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಏಳುವ ಗಾಳಿ ಯಿಂದ ಅಲೆಗಳ ಹೊಡೆತ ಇನ್ನಷ್ಟು ಹೆಚ್ಚಲಿದ್ದು, ಕಡಲ ಕೊರೆತ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಈಗಾಗಲೇ ಈ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನೂ ನೆರೆಯ ಕೇರಳ ಹಾಗೂ ಮಹಾರಾಷ್ಟ್ರ, ತಮಿಳುನಾಡಿನ ನೀಲಗಿರಿಯ ಪಶ್ಚಿಮ ಘಟ್ಟ, ಗುಜರಾತ್ನ ಕೆಲ ಪ್ರದೇಶಗಳಲ್ಲಿ ಕೂಡ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Karnataka Dams: ರಾಜ್ಯದಲ್ಲಿ ಮಳೆ ಜೋರು; ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ
Karnataka Rain: ಕೊಡಗಿನಲ್ಲಿ ಮುಂದುವರಿದ ವರುಣ; ಕಾವೇರಿ, ಲಕ್ಷ್ಮಣ ತೀರ್ಥ ನದಿಗಳ ನೀರಿನ ಮಟ್ಟ ಏರಿಕೆ
(Karnataka Rain Monsoon heavy rain in karnataka next four Five das red alert in coastal and malenadu)
Published On - 8:06 am, Thu, 15 July 21