ಬೆಂಗಳೂರು, ಮೇ 23: ರಾಜ್ಯದಲ್ಲಿ ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಹೀಗಾಗಿ ರಾಜ್ಯದಲ್ಲಿ ಇದೇ ಅವಧಿಯಲ್ಲಿ ಸುರಿಯುವ ಸರಾಸರಿ ಮುಂಗಾರು ಪೂರ್ವ ಮಳೆಗೆ (Rain) ಹೋಲಿಸಿದರೆ ಉತ್ತಮ ಮಳೆಯಾಗಿದೆ. ಐಎಂಡಿ (IMD) ಪ್ರಕಾರ, ಕರ್ನಾಟಕದಲ್ಲಿ ಈ ವರ್ಷ ಮಾರ್ಚ್‌ನಿಂದ ಮೇ 21ರ ನಡುವೆ 107.8 ಮಿಮೀ ಮಳೆ ಆಗಿದೆ. ಆ ಮೂಲಕ ಈ ವರ್ಷ 23 ಮಿಮೀ ಹೆಚ್ಚುವರಿ ಮಳೆ ಆಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಕೆಲ ದಿನಗಳಿಂದ ಧಾರಾಕಾರ ಮಳೆ ಆಗುತ್ತಿದೆ. ಅದೇ ರೀತಿಯಾಗಿ ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟಿಸಿದ್ದಾನೆ. ಜೊತೆಗೆ ಅವಾಂತರಗಳನ್ನು ಸೃಷ್ಟಿಸಿದ್ದಾನೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಾದ್ಯಂತ ಗುಡುಗು ಸಿಡಿಲು ಸಹಿತ ಮಳೆ ಆಗಿದೆ. ಪರಿಣಾಮ ಸಿಡಿಲು ಬಡಿದು ಓರ್ವ ಮಹಿಳೆ ಸಾವನ್ನಪ್ಪಿದ್ದರೆ ನಾಲ್ವರ ಸ್ಥಿತಿ ಗಂಭೀರವಾಗಿರುವಂತಹ ಘಟನೆ ರಾಯಬಾಗ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಶೋಭಾ ಕೃಷ್ಣಾ ಕುಗುಡೆ(45) ಮೃತ ಮಹಿಳೆ.
ಇದನ್ನೂ ಓದಿ: ಧಾರವಾಡದಲ್ಲಿ ಇವತ್ತು ಮತ್ತೇ ಜೋರು ಮಳೆ, ಜನ ಮತ್ತು ರೈತ ಸಮುದಾಯ ಖುಶ್!
ಮಲ್ಲಪ್ಪ ಮೇತ್ರಿ, ಭಾರತಿ ಕಮತೆ, ಬಾಬುರಾವ್ ಚವ್ಹಾನ್, ಪ್ರವೀಣ್ ದರ್ಮಟ್ಟಿ ಅವರನ್ನು ರಾಯಬಾಗ ನಿಸರ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆ ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದಿದೆ. ಸ್ಥಳಕ್ಕೆ ರಾಯಬಾಗ ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಕೂಡ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದು. ಇಬ್ಬರ ಸ್ಥಿತಿ ಗಂಭೀರವಾಗಿದೆ.
ಯಾದಗಿರಿ ನಗರದ ವಿವಿಧೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಆಗಿದೆ. ಬಿರುಗಾಳಿ ಮಳೆ ಅಬ್ಬರಕ್ಕೆ ಬೃಹತ್ ಮರದ ಕೊಂಬೆಗಳು ಮುರಿದುಬಿದ್ದಿವೆ. ಲೋಕೋಪಯೋಗಿ ಇಲಾಖೆ ಕಚೇರಿ, ಶಿವನಗರ ಬಡಾವಣೆಯಲ್ಲಿ ಘಟನೆ ನಡೆದಿದೆ. ಮಳೆ ನೀರಿನಿಂದ ಲೋಕೋಪಯೋಗಿ ಇಲಾಖೆ ಕಚೇರಿ ಜಲಾವೃತಗೊಂಡಿದೆ. ಬಿರುಗಾಳಿ ಸಹಿತ ಮಳೆ ಅಬ್ಬರಕ್ಕೆ ಮನೆ ಮೇಲ್ಚಾವಣಿ ಹಾರಿಹೋಗಿದೆ.
ಧಾರವಾಡ ತಾಲೂಕಿನ ಹಂಗರಕಿ ಗ್ರಾಮದಲ್ಲಿ ಗಾಳಿ ಸಹಿತ ಧಾರಾಕಾರ ಮಳೆಗೆ ದನದ ಕೊಟ್ಟಿಗೆಯ ಶೆಡ್‌ಗೆ ಹಾನಿ ಆಗಿದೆ. ಬಿರುಗಾಳಿಗೆ ಶೆಡ್‌ನ ಮೇಲ್ಚಾವಣಿ ಶೀಟ್ ಹಾರಿ ಹೋಗಿದೆ. ಬಸವರಾಜ್ ಬಡಿಗೇರ ಎಂಬುವರಿಗೆ ಸೇರಿದ ಶೆಡ್‌ಗೆ ಹಾನಿ ಆಗಿದೆ. ಮೇವು ಸಂಗ್ರಹ ಹಾಗೂ ಜಾನುವಾರು ಕಟ್ಟಲು ಶೆಡ್ ನಿರ್ಮಿಸಿದ್ದರು. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಿಂದ ಬೆಳೆ ಹಾನಿ ಸಂಭವಿಸಿದೆ. ತುಳಸಿಗೇರಿ, ಹಿರೇಶೆಲ್ಲಿಕೇರಿ, ದೇವನಾಳದಲ್ಲಿ ಮಳೆಯಿಂದಾಗಿ ಬೆಳೆ ಹಾನಿ ಆಗಿದೆ. ಭಾರಿ ಮಳೆಯಿಂದ ದಾಳಿಂಬೆ, ಚಿಕ್ಕು, ಪಪ್ಪಾಯಿ, ಕಬ್ಬು ಬೆಳೆ ನಾಶವಾಗಿದೆ. ದೇವನಾಳ ಗ್ರಾಮದಲ್ಲಿ ಮನೆಯ ಶೀಟ್ ಹಾರಿ ಹತ್ತಾರು ಮನೆಗಳಿಗೆ ಹಾನಿ ಉಂಟಾಗಿದೆ.
ಬೆಳಗಾವಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಿಂದ ಅವಾಂತರ ಉಂಟಾಗಿದ್ದು, ರೂಪಿನಾಳ ಗ್ರಾಮದ ಬಳಿ ಹೆದ್ದಾರಿ ಮೇಲೆ ಮರ ಧರೆಗುರುಳಿದೆ. ಹೀಗಾಗಿ ಚಿಕ್ಕೋಡಿ-ಮೀರಜ್ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ. ಕಳೆದ 2 ಗಂಟೆಯಿಂದ ಸಂಚಾರ ಬಂದ್ ಹಿನ್ನೆಲೆ ವಾಹನ ಸವಾರರು ಪರದಾಡಿದ್ದಾರೆ. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Bengaluru Rains: ಬೆಂಗಳೂರಿನ ಹಲವೆಡೆ ಜಿಟಿಜಿಟಿ ಮಳೆ: ಸಿಲಿಕಾನ್ ಸಿಟಿ ಫುಲ್ ಕೂಲ್ ಕೂಲ್
ವಿಜಯಪುರ ಜಿಲ್ಲೆಯಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆ ಆಗಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ ಮಳೆಯಿಂದ ಹಲವೆಡೆ ಅವಾಂತರ ಉಂಟಾಗಿದೆ. ಸಿಡಿಲು ಬಡಿದು ಎರಡು ಹಸು ಸಾವನ್ನಪ್ಪಿವೆ. ಬಸವರಾಜ ಪಾಟೀಲ್, ಬಸಪ್ಪ ಉಪ್ಪಲದಿನ್ನಿ ಎಂಬುವರಿಗೆ ಹಸುಗಳು ಸೇರಿದ್ದವು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ, ಕಾರವಾರ, ಯಲ್ಲಾಪುರ, ಜೋಯಿಡಾ, ಹೊನ್ನಾವರ ಭಾಗದಲ್ಲಿ ಮಳೆ ಪ್ರಾರಂಭವಾಗಿದೆ. ಬೆಳಗಿನಿಂದ ಜಿಲ್ಲೆಯ ಹಲವು ಭಾಗಗಳು ಮೋಡ ಕವಿದ ವಾತಾವರಣವಿದ್ದು, ಸಂಜೆಯಾಗುತಿದ್ದಂತೆ ಮಳೆ ಆರಂಭವಾಗುವ ಮೂಲಕ ಉಷ್ಣಾಂಶ ಇಳಿಕೆ ಆಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.