Karnataka Rains: ರಾಜ್ಯದ ಹಲವೆಡೆ ಕೈಕೊಟ್ಟ ನೈಋತ್ಯ ಮುಂಗಾರು ಮಳೆ; ಕರಾವಳಿಯ ಬಹುತೇಕ ಭಾಗಗಳಲ್ಲಿ ನಾಳೆಯೂ ಮುಂದುವರೆಯಲಿರುವ ಮಳೆ

Karnataka Rains Updates: ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಬಹುತೇಕ ಭಾಗಗಳಲ್ಲಿ, ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಬಹಳಷ್ಟಿದೆ. ಜು.23ರಂದು ಕೂಡ ಈ ಭಾಗಗಳಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Karnataka Rains: ರಾಜ್ಯದ ಹಲವೆಡೆ ಕೈಕೊಟ್ಟ ನೈಋತ್ಯ ಮುಂಗಾರು ಮಳೆ; ಕರಾವಳಿಯ ಬಹುತೇಕ ಭಾಗಗಳಲ್ಲಿ ನಾಳೆಯೂ ಮುಂದುವರೆಯಲಿರುವ ಮಳೆ
ಸಾಂಕೇತಿಕ ಚಿತ್ರ
Follow us
| Updated By: Rakesh Nayak Manchi

Updated on:Jul 21, 2022 | 2:43 PM

ಬೆಂಗಳೂರು: ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನಲ್ಲಿ ಕೆಲವು ಕಡೆಗಳಲ್ಲಿ ಮಳೆಯಾಗಿರುವುದು ಬಿಟ್ಟರೆ ರಾಜ್ಯದ ಉಳಿದ ಕಡೆಗಳಲ್ಲಿ ನೈಋತ್ಯ ಮುಂಗಾರು ಮಳೆ (Southwest Monsoon Rain) ದುರ್ಬಲವಾಗಿತ್ತು. ಅದಾಗ್ಯೂ ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಬಹುತೇಕ ಭಾಗಗಳಲ್ಲಿ, ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಬಹಳಷ್ಟಿದೆ. ಜು.23ರಂದು ಕೂಡ ಈ ಭಾಗಗಳಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Meteorological department) ತಿಳಿಸಿದೆ. ಅಲ್ಲದೆ ಕರ್ನಾಟಕದ ಕರಾವಳಿಯ ಮಂಗಳೂರಿನಿಂದ ಕಾರಾವರದವರೆಗಿನ ಕರಾವಳಿಯುದ್ದಕ್ಕೂ ಏಳುತ್ತಿರುವ ಅಲೆಗಳ ಪ್ರಸ್ತುತ ವೇಗವು 37-76 ಸೆಂ.ಮೀ. ನಡುವೆ ಬದಲಾಗುತ್ತಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇದ್ದು, ಮುಂದಿನ 24 ಗಂಟೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಬಹಳಷ್ಟಿದೆ. ಇದೇ ರೀತಿಯ ವಾತಾವಣ ಜು.23ರಂದು ಕೂಡ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹೇಗಿತ್ತು ಮಳೆಯ ಪ್ರಮಾಣ?

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬುಧವಾರದಂದು ಮಳೆಯಾಗಿದ್ದು, ಹಾಸನ ಜಿಲ್ಲೆಯ ನುಗ್ಗೇಹಳ್ಳಿಯಲ್ಲಿ 4 ಸೆಂ.ಮೀ, ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್, ಕದ್ರಾ, ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ತಲಾ 2ಸೆಂ.ಮೀ, ಕಾರವಾರ, ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಉಡುಪಿ ಜಿಲ್ಲೆಯ ಕುಂದಾಪುರ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಮಂಕಿ, ಅಂಕೋಲಾ, ಹಳಿಯಾಳ, ಗೋಕರ್ಣ, ಬೇಲಿಕೇರಿ, ಬೀದರ್ ಜಿಲ್ಲೆಯ ಮಂಠಾಳ, ರಾಯಚೂರು ಜಿಲ್ಲೆಯ ಸಿಂಧನೂರು, ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು, ಹಾಸನ ಜಿಲ್ಲೆಯ ಹಾಸನ, ಶ್ರವಣಬೆಳಗೊಳ, ಕೊಡಗು ಜಿಲ್ಲೆಯ ಭಾಗಮಂಡಲ, ಸಂಪಾಜೆ, ಮೈಸೂರು ಜಿಲ್ಲೆಯ ಕೆ.ಆರ್.ನಗರ, ಎಚ್.ಡಿ.ಕೋಟೆಯಲ್ಲಿ ತಲಾ 1 ಸೆ.ಮೀ. ಮಳೆಯಾಗಿದೆ.

ತೆಪ್ಪದಲ್ಲಿ ಶವ ಸಾಗಿಸಿ ಅಂತ್ಯಕ್ರಿಯೆ

ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹಿನ್ನಲೆ ಕಂಪ್ಲಿ ಕೋಟೆ ಭಾಗದಲ್ಲಿನ ಸ್ಮಶಾನಕ್ಕೆ ಹೋಗುವ ದಾರಿ ಜಲಾವೃತಗೊಂಡಿದೆ. ಪರಿಣಾಮವಾಗಿ ತೆಪ್ಪದಲ್ಲಿ ಶವ ಸಾಗಿಸಿದ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ನಡೆದಿದೆ. ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ನೀರು ಹೊರಹರಿವು ಬಿಡಲಾಗಿದ್ದು, ಕಂಪ್ಲಿ ಕೋಟೆ ಭಾಗದಲ್ಲಿ ಸಂಪೂರ್ಣ ಜಲಾವೃತವಾಗಿದೆ. ಈ ನಡುವೆ ದಮ್ಮೂರು ಫಕಿರಮ್ಮ ಅವರು ಸಾವನ್ನಪ್ಪಿದ್ದು, ಇವರ ಮೃತದೇಹವನ್ನು ತೆಪ್ಪದ ಮೂಲಕ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಒಂದು ತೆಪ್ಪದಲ್ಲಿ ಶವ ಮತ್ತು ನಾಲ್ವರು ಸಂಬಂಧಿಕರು ಹಾಗೂ ಉಳಿದ ಮೂರು ತೆಪ್ಪಗಳಲ್ಲಿ ಕೆಲವು ಗ್ರಾಮಸ್ಥರು ತೆರಳಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

20 ದಿನದಲ್ಲಿ 1247 ಮನೆಗಳು ಭಾಗಶಃ ಕುಸಿತ

ಬೀದರ್: ಜಿಲ್ಲೆಯಲ್ಲಿ ಕಳೆದ 20 ದಿನಗಳಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು, 1,247 ಮನೆಗಳು ಭಾಗಶಃ ಕುಸಿತಗೊಂಡಿದೆ. ಬಸವಕಲ್ಯಾಣ ತಾಲೂಕಿನಲ್ಲಿ ‌275 ಮನೆಗಳು, ಔರಾದ್ ತಾಲೂಕಿನಲ್ಲಿ 440 ಮನೆಗಳು, ಕಮಲನಗರ ‌ತಾಲೂಕಿನಲ್ಲಿ 101 ಮನೆಗಳು, ಬೀದರ್ 198 ಮನೆಗಳು, ಭಾಲ್ಕಿ ತಾಲೂಕಿನಲ್ಲಿ 119 ಮನೆಗಳು ಕುಸಿತಗೊಂಡರೆ, ಚಿಟ್ಟಗುಪ್ಪಾ ತಾಲೂಕಿನಲ್ಲಿ 43 ಮನೆಗಳು, ಹುಲಸೂರು ‌23 ಮನೆಗಳು, ಹುಮ್ನಾಬಾದ್ 48 ಮನೆಗಳು ಭಾಗಶಃ ಕುಸಿತಗೊಂಡಿದೆ. ಈ ಪೈಕಿ ಕೆಲವು ಸಂತ್ರಸ್ತರಿಗೆ ಪರಿಹಾರ ವಿತರಣೆ ಮಾಡಲಾಗಿದೆ.

ಕುಸಿದು ಬಿದ್ದ ಅಂಗನವಾಡಿ, ತಪ್ಪಿದ ಅನಾಹುತ

ಧಾರವಾಡ: ನಿರಂತರ ಮಳೆಯಿಂದಾಗಿ ಶಿಥಿಲಗೊಂಡಿದ್ದ ಅಂಗನವಾಡಿ ಕೇಂದ್ರ ಕುಸಿದು ಬಿದ್ದ ಘಟನೆ ಅಳ್ನಾವರ ತಾಲೂಕಿನ ಶಿವನಗ ಗ್ರಾಮದಲ್ಲಿ ನಡೆದಿದೆ. ಇತ್ತೀಚೆಗೆ ಸುರಿದ ಮಳೆಗೆ ಅಂಗಡನವಾಡಿ ಕೇಂದ್ರ ಶಿಥಿಲಗೊಂಡಿತ್ತು. ಇದೀಗ ಆ ಕಟ್ಟಡ ಕುಸಿತಗೊಂಡಿದ್ದು, ಮಕ್ಕಳು ಬರುವ ಮುನ್ನವೇ ಕುಸಿತಗೊಂಡಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.

Published On - 12:36 pm, Thu, 21 July 22