ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ: ಭೇಷ್ ಎಂದು ಪ್ರಶಸ್ತಿ ನೀಡಿದ ಕೇಂದ್ರ ಸರ್ಕಾರ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ಎರಡನೇ ಸ್ಥಾನ ಗಳಿಸಿದೆ. 27 ಲಕ್ಷಕ್ಕೂ ಹೆಚ್ಚು ರೈತರು ನೋಂದಾಯಿಸಿದ್ದು, 11 ಲಕ್ಷಕ್ಕೂ ಅಧಿಕ ರೈತರಿಗೆ 2094 ಕೋಟಿ ರೂ. ಬೆಳೆ ವಿಮೆ ಪರಿಹಾರ ನೀಡಲಾಗಿದೆ. ನೈಸರ್ಗಿಕ ವಿಕೋಪಗಳಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ನೀಡಿ, ಆರ್ಥಿಕ ಭದ್ರತೆ ಒದಗಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ.

ಬೆಂಗಳೂರು, ಜನವರಿ 19: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (Pradhan Mantri Fasal Bima Yojana – PMFBY) ಅನುಷ್ಠಾನದಲ್ಲಿ ಕರ್ನಾಟಕ (Karnataka) ರಾಜ್ಯವು ಎರಡನೇ ಸ್ಥಾನ ಪಡೆದುಕೊಂಡಿದೆ. ರಾಜ್ಯ ಸರ್ಕಾರದ ಈ ಮಹತ್ವದ ಸಾಧನೆಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಅಭಿನಂದಿಸಿದೆ. 2024–25ನೇ ಸಾಲಿನಲ್ಲಿ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದಿರುವುದಕ್ಕಾಗಿ ಕರ್ನಾಟಕಕ್ಕೆ ಈ ಗೌರವ ಲಭಿಸಿದೆ. ಬೆಂಗಳೂರಿನಲ್ಲಿ ನಡೆದ 13ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ವತಿಯಿಂದ ರಾಜ್ಯ ಸರ್ಕಾರಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕದಲ್ಲಿ ಒಟ್ಟು 27,04,166 ರೈತರು ಬೆಳೆ ವಿಮೆ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, ಇವರಲ್ಲಿ 11,85,642 ರೈತರು ವಿಮಾ ಪರಿಹಾರಕ್ಕಾಗಿ ಕ್ಲೇಮ್ ಸಲ್ಲಿಸಿದ್ದಾರೆ. ಈ ಕ್ಲೇಮ್ ಮೊತ್ತ 2,094 ಕೋಟಿ ರೂ. ಆಗಿದೆ. ನೈಸರ್ಗಿಕ ವಿಕೋಪಗಳು, ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ತಲುಪಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂಬುದು ಈ ಸಾಧನೆಯಿಂದ ಸ್ಪಷ್ಟವಾಗಿದೆ.
ಕೇಂದ್ರ ಕೃಷಿ ಇಲಾಖೆಯು ಕರ್ನಾಟಕ ಸರ್ಕಾರದ ರೈತಪರ ನೀತಿಗಳು ಹಾಗೂ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಕೂಡ ಇದೇ ರೀತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಶುಭ ಹಾರೈಸಿದೆ. ಬೆಳೆ ವಿಮೆ ಯೋಜನೆಯ ಮೂಲಕ ರೈತರ ಆದಾಯ ರಕ್ಷಣೆ ಹಾಗೂ ಆರ್ಥಿಕ ಭದ್ರತೆಗೆ ರಾಜ್ಯ ಸರ್ಕಾರ ನೀಡುತ್ತಿರುವ ಒತ್ತಾಸೆ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ.
ಈ ಯೋಜನೆಯಡಿ ರೈತರು ಮುಂಗಾರು ಬೆಳೆಗೆ ಶೇ. 2 ಮತ್ತು ಹಿಂಗಾರು ಬೆಳೆಗೆ ಶೇ. 1.5 ರಷ್ಟು ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಉಳಿದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಎಂದರೇನು?
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಎನ್ನುವುದು ನೈಸರ್ಗಿಕ ವಿಕೋಪಗಳು, ಕೀಟಬಾಧೆ ಅಥವಾ ರೋಗಗಳಿಂದಾಗಿ ಬೆಳೆ ನಷ್ಟ ಅನುಭವಿಸುವ ರೈತರಿಗೆ ಆರ್ಥಿಕ ರಕ್ಷಣೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು 2016ರಲ್ಲಿ ಜಾರಿಗೆ ತಂದ ಒಂದು ಮಹತ್ವಾಕಾಂಕ್ಷೆಯ ವಿಮಾ ಯೋಜನೆಯಾಗಿದೆ. ‘ಒಂದು ರಾಷ್ಟ್ರ, ಒಂದು ಯೋಜನೆ’ ಎಂಬ ತತ್ವದಡಿ ಕಾರ್ಯನಿರ್ವಹಿಸುವ ಈ ಯೋಜನೆಯಲ್ಲಿ, ರೈತರು ಅತ್ಯಂತ ಕಡಿಮೆ ಪ್ರೀಮಿಯಂ ದರವನ್ನು (ಮುಂಗಾರು ಬೆಳೆಗೆ ಶೇ 2, ಹಿಂಗಾರು ಬೆಳೆಗೆ ಶೇ 1.5 ಮತ್ತು ವಾಣಿಜ್ಯ/ತೋಟಗಾರಿಕೆ ಬೆಳೆಗಳಿಗೆ ಶೇ 5 ರಷ್ಟನ್ನು ರೈತರು ಪಾವತಿಸಬೇಕಾಗುತ್ತದೆ. ಉಳಿದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ) ಪಾವತಿಸುವ ಮೂಲಕ ಬಿತ್ತನೆಯ ಪೂರ್ವ ಹಂತದಿಂದ ಕೊಯ್ಲಿನ ನಂತರದ ಹಂತದವರೆಗೆ ಸಂಭವಿಸುವ ಬೆಳೆ ಹಾನಿಗೆ ಸಮಗ್ರ ವಿಮಾ ರಕ್ಷಣೆಯನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: PMFBY- ಪಿಎಂ ಫಸಲ್ ಬಿಮಾ ಯೋಜನೆ: 30 ಲಕ್ಷ ರೈತರಿಗೆ ಕೇಂದ್ರದಿಂದ 3,200 ಕೋಟಿ ರೂ ಬಿಡುಗಡೆ
ರೈತರ ಆದಾಯವನ್ನು ಸ್ಥಿರಗೊಳಿಸಲು ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
