ಬೆಂಗಳೂರು, ಮಾರ್ಚ್.30: ಕೆಪಿಎಸ್ಸಿಯಲ್ಲಿ ನೇಮಕಾತಿ ಆಯ್ಕೆ ಪಟ್ಟಿಯೇ ನಾಪತ್ತೆಯಾಗಿದ್ದು ಕೆಪಿಎಸ್‌ಸಿ (KPSC) ಅಧಿಕಾರಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಕಿರಿಯ ಎಂಜಿನಿಯರ್ ನೇಮಕಾತಿ ಆಯ್ಕೆ ಪಟ್ಟಿಯ ಕಡತವೇ ನಾಪತ್ತೆಯಾಗಿದೆ.
2016 ರಲ್ಲಿ ಕೊಳಗೇರಿ ಮಂಡಳಿ ಜೂನಿಯರ್ ಇಂಜಿನಿಯರ್ ನೇಮಕಾತಿ ಪರೀಕ್ಷೆ ನಡೆದಿತ್ತು. 2018ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ ಮಾಡಲಾಗಿತ್ತು. ಇದನ್ನ ಪ್ರಶ್ನಿಸಿ ಎಚ್.ಡಿ. ವಿವೇಕಾನಂದ ಎಂಬುವವರು ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಹೈಕೋರ್ಟ್ ಆದೇಶದಂತೆ ಆಯ್ಕೆ ಪಟ್ಟಿ ತಯಾರಿಸಲಾಗಿತ್ತು. ಕೆಪಿಎಸ್‌ಸಿ ಗೌಪ್ಯ ಶಾಖೆ-3 ರಲ್ಲಿ ಆಯ್ಕೆ ಪಟ್ಟಿ ತಯಾರಿಸಲಾಗಿತ್ತು. ಜನವರಿ 22 ರಂದು ಕಾರ್ಯದರ್ಶಿಯವರ ಆಪ್ತ ಶಾಖೆಯಲ್ಲಿ ಕಡತ ಸ್ವೀಕಾರ ಮಾಡಲಾಯಿತು. ಆ ಬಳಿಕ ಕಡತ ನಾಪತ್ತೆ ಎಂದು ದೂರು ದಾಖಲಿಸಲಾಗಿದೆ.
ಇದನ್ನೂ ಓದಿ: ಚುನಾವಣೆ ಬಂದ್ರೆ ಸಾಕು ಕುಮಾರಸ್ವಾಮಿ ಹಾರ್ಟ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ: ವ್ಯಂಗ್ಯವಾಡಿದ ಕಾಂಗ್ರೆಸ್ ಶಾಸಕ
ಬಳಿಕ ಕೆಪಿಎಸ್‌ಸಿ ಯ ಎಲ್ಲಾ ಶಾಖೆಗಳಲ್ಲೂ ಕಡತಕ್ಕಾಗಿ ಶೋಧ ನಡೆಸಲಾಗಿದೆ. ಕಡತ ಪತ್ತೆಯಾದಲ್ಲಿ ಕೂಡಲೇ ಶಾಖೆ-2ಕ್ಕೆ ಹಿಂದಿರುಗಿಸುವಂತೆ ಕೆಪಿಎಸ್‌ಸಿ ಜ್ಞಾಪನ ಹೊರಡಿಸಿತ್ತು. ಬಳಿಕ ಕೆಪಿಎಸ್‌ಸಿ ಸಿಬ್ಬಂದಿಯಿಂದ ಕಡತಕ್ಕಾಗಿ ಎಲ್ಲೆಡೆ ಶೋಧ ನಡೆದಿದೆ. ಅಧಿಕಾರಿ, ಸಿಬ್ಬಂದಿ ಸುಮಾರು ಒಂದು ತಿಂಗಳು ಶೋಧ ನಡೆಸಿದ್ರು. ಆದರೆ ಕಡೆತ ಎಲ್ಲೂ ಸಿಕ್ಕಿಲ್ಲ. ಹೀಗಾಗಿ ಕಡತ ನಾಪತ್ತೆ ಬಗ್ಗೆ ದೂರು ದಾಖಲಿಸಲು ಆಯೋಗ ಸಭೆ ನಡೆಸಿ ನಿರ್ಧಾರ ಕೈಗೊಂಡಿದ್ದು ಕಡತ ನಾಪತ್ತೆ ಬಗ್ಗೆ ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ