ಇಂದು ರಾಜ್ಯಾದ್ಯಂತ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ, ಇಲ್ಲಿದೆ ಪ್ರಮುಖ ಮಾಹಿತಿ
KAR TET Exam: ಇಂದು ರಾಜ್ಯಾದ್ಯಂತ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದೆ. ಮೊದಲ ಪತ್ರಿಕೆ ಬೆಳಿಗ್ಗೆ 9.30 ರಿಂದ 12.00 ಗಂಟೆಯವರೆಗೆ ನಡೆಯಲಿದೆ. ಹಾಗೂ ಎರಡನೇ ಪತ್ರಿಕೆ ಮಧ್ಯಾಹ್ನ 2.00 ರಿಂದ 4.30 ರವರೆಗೆ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.

ಬೆಂಗಳೂರು, ಸೆ.2023: ಭಾನುವಾರವಾದ ಇಂದು ರಾಜ್ಯಾದ್ಯಂತ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(KAR TET Exam) ನಡೆಯಲಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು schooleducation.kar.nic.in ವೆಬ್‍ಸೈಟ್‍ನಲ್ಲಿ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸುವುದರ ಮೂಲಕ ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ರಾಜ್ಯದ 35 ಶೈಕ್ಷಣಿಕ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ ನಡೆಯಲಿದೆ. ಪತ್ರಿಕೆ 1ಕ್ಕೆ ಒಟ್ಟು 1,43,705 ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿದೆ. 1ರಿಂದ 5ನೇ ತರಗತಿ ಶಿಕ್ಷಕರಿಗೆ 1,43,705 ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿದೆ. 6ರಿಂದ 8ನೇ ತರಗತಿ ಶಿಕ್ಷಕರಿಗಾಗಿ ಪತ್ರಿಕೆ 2ಕ್ಕೆ ಒಟ್ಟು 1,89,994 ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿದೆ.
ಮೊದಲ ಪತ್ರಿಕೆ ಬೆಳಿಗ್ಗೆ 9.30 ರಿಂದ 12.00 ಗಂಟೆಯವರೆಗೆ ನಡೆಯಲಿದೆ. ಹಾಗೂ ಎರಡನೇ ಪತ್ರಿಕೆ ಮಧ್ಯಾಹ್ನ 2.00 ರಿಂದ 4.30 ರವರೆಗೆ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ. ಅಭ್ಯರ್ಥಿಗಳು ಪ್ರತಿ ಪತ್ರಿಕೆಯ ಪರೀಕ್ಷಾ ಪ್ರಾರಂಭದ ಅವಧಿಗಿಂತ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಿರಬೇಕು. ಪರೀಕ್ಷೆ ಪತ್ರ ಇಲ್ಲದೇ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಈ ಬಗ್ಗೆ ಯಾವುದೇ ವಿನಾಯಿತಿ ಇಲ್ಲ. ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ಸ್ಥಾನಿಕ ಜಾಗ್ರತಾ ದಳದ ಅಧಿಕಾರಿಗಳನ್ನು ಮತ್ತು ಮೊಬೈಲ್ ಸ್ವಾಧೀನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ 20 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಅದರಲ್ಲಿ ಪ್ರತಿ ಬೆಂಚ್‍ಗೆ ಇಬ್ಬರು ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಆಸನ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಟಿಇಟಿ ಪಾಸ್ ಮಾಡದ ಹೊರಗುತ್ತಿಗೆ ಶಿಕ್ಷಕರಿಗೆ ಗೇಟ್ ಪಾಸ್; ಬಿಬಿಎಂಪಿ ನಿರ್ಧಾರಕ್ಕೆ ಶಿಕ್ಷಕರು ಕಂಗಾಲು
ಪೂರ್ವ ಮುದ್ರಿತ ಓಎಂಆರ್ ಶೀಟ್ನಲ್ಲಿ ಒಮ್ಮೆ ಬರೆದಿರುವುದನ್ನು ಪುನಃ ಬದಲಾಯಿಸುವುದು, ತಿದ್ದುವುದು, ಬಿಳಿ ಪ್ಲ್ಯೂಯಿಡ್ ಬಳಸುವುದನ್ನು ನಿಷೇಧಿಸಲಾಗಿದೆ. ಬಿಳಿ ಪ್ಲ್ಯೂಯಿಡ್ ಹಚ್ಚಿ ಉತ್ತರ ಬದಲಾಯಿಸಲು ಅವಕಾಶವಿಲ್ಲ. ಇಂತಹ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ. ಪರೀಕ್ಷೆಗೆ ಆಗಮಿಸುವ ಅಭ್ಯರ್ಥಿಗಳು ಮೊಬೈಲ್ ಫೋನ್, ಬ್ಲೂಟೂತ್ ಡಿವೈಸ್, ಪೇಜರ್, ವೈರ್‍ಲೆಸ್, ಕ್ಯಾಲ್ಕುಲೇಟರ್, ಮೊದಲಾದ ಎಲೆಕ್ಟ್ರಾನಿಕ್ ಉಪಕರಣಗಳು, ಸ್ಲೈಡ್ ರೂಲುಗಳು, ಮಾರ್ಕರ್‍ಗಳು, ಲಾಗ್ ಟೇಬಲ್‍ಗಳು, ವೈಟ್‍ಫ್ಲೂಯಿಡ್‍ಗಳು, ಬ್ಲೇಡು, ಇಂಕ್ ಎರೇಸರ್, ಬಿಳಿ ಫ್ಲೂಯಿಡ್, ಬೆಂಕಿ ಪೊಟ್ಟಣ, ಸಿಗರೆಟ್ ಲೈಟರ್ ಮುಂತಾದವುಗಳನ್ನು ಪರೀಕ್ಷಾ ಕೇಂದ್ರದ ಆವರಣದೊಳಗೆ ತರುವುದನ್ನು ನಿಷೇಧಿಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ