ವಿಧಾನ ಪರಿಷತ್: ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ ಧ್ವನಿಮತದ ಮೂಲಕ ವಿಧಾನ ಪರಿಷತ್ನಲ್ಲಿ ಅಂಗೀಕಾರಗೊಂಡಿದೆ. ಈ ವಿಧೇಯಕಕ್ಕೆ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಧೇಯಕ ಸಂವಿಧಾನ ವಿರೋಧಿ ಎಂದು ಭಾವಿಸುತ್ತೇನೆ. ಮಾರಮ್ಮನ ಗುಡಿ, ಚಂದ್ರಮ್ಮನ ಗುಡಿ ಎಂದು ದಿನಕ್ಕೊಂದು ದೇಗುಲ, ಚರ್ಚ್‌ಗಳು ಹುಟ್ಟಿಕೊಳ್ಳುತ್ತಿವೆ. ನಾಯಿಕೊಡೆಗಳಂತೆ ದೇವಸ್ಥಾನಗಳು ಹುಟ್ಟಿಕೊಳ್ಳುತ್ತವೆ ಎಂದು ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕದ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿ ಎಸ್ ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಘೋಷಣೆ; ಲೋಕಸಭಾ ಸ್ಪೀಕರ್ ಓಂ ಬಿರ್ಲಾರಿಂದ ಪ್ರಶಸ್ತಿ ಪ್ರದಾನ
ವಿಧಾನಸೌಧ: ಬಿ.ಎಸ್.ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಘೋಷಿಸಲಾಗಿದೆ. ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಪ್ರಶಸ್ತಿ ಘೋಷಿಸಿದ್ದು, ಲೋಕಸಭೇಯ ಸ್ಪೀಕರ್ ಓಂ ಬಿರ್ಲಾರಿಂದ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ವಿಧಾನಮಂಡಲ ಜಂಟಿ ಅಧಿವೇಶನ ನಡೆಯುತ್ತಿದ್ದು ಅಧಿವೇಶನದಲ್ಲಿ ಈ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ಘೋಷಿಸಲಾಗಿದೆ.
ಲೋಕಸಭೆ ಮಾದರಿಯಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾರವರು ಸೂಚನೆ ನೀಡಿದ್ದರು. ಶಾಸಕರಲ್ಲಿ ಅತ್ಯುತ್ತಮ ಸಂಸದೀಯ ಪಟುವನ್ನು ಗುರುತಿಸಲು ಈ ಪ್ರಶಸ್ತಿ ಘೋಷಿಸುತ್ತೇವೆ ಎಂದು ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ತಿಳಿಸಿದರು.
ರಾಜಕೀಯದಲ್ಲಿ ಯುವ ಪೀಳಿಗೆಗೆ ಪಕ್ಷಗಳು ಆದ್ಯತೆ ನೀಡಬೇಕು. ಸಂಸದೀಯ ಮೌಲ್ಯ ಬಲಪಡಿಸುವ ನಿಟ್ಟಿನಲ್ಲಿ ಚಿಂತಿಸಬೇಕು. ಶಾಸನಸಭೆಯಲ್ಲಿ ನಾವೆಲ್ಲರೂ ಒಟ್ಟಾಗಿ ಚಿಂತನೆ ನಡೆಸಬೇಕು. ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮಗ್ನರಾಗಬೇಕು ಎಂದು ವಿಧಾನಸಭೆ, ಪರಿಷತ್ನ ಎಲ್ಲಾ ಸದಸ್ಯರಲ್ಲಿ ಮನವಿ ಮಾಡುವೆ ಎಂದು ವಿಧಾನ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಜತೆಗೆ ಸೆಂಟ್ರಲ್ ವಿಸ್ತಾದ 1 ಭಾಗಕ್ಕೆ ಅನುಭವ ಮಂಟಪದ ಹೆಸರನ್ನು ಇಡುವಂತೆಯೂ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸಭಾಪರಿ ಬಸವರಾಜ ಹೊರಟ್ಟಿ, ಸಂವಿಧಾನದ ಮೂಲ ಆಶಯ ಜಾರಿಗೆ ತರುವುದು ಜನಪ್ರತಿನಿಧಗಳ ಕರ್ತವ್ಯ. ಜನರಿಗೆ ನೆರವಾಗುವ ಅವಿರತ ಪ್ರಯತ್ನ ನಮ್ಮದಾಗಬೇಕು. ಎಲ್ಲಾ ಜಾತಿ, ಧರ್ಮ, ಭಾಷೆ ಮೀರಿ ಕೆಲಸ ಮಾಡಬೇಕು. ಸದನ ಆರೋಪ, ಪ್ರತ್ಯಾರೋಪದ ಅಖಾಡವಾಗಬಾರದು. ಜನರಿಂದ ಆಯ್ಕೆಯಾದ ನಾವು ಜನರ ನೋವಿಗೆ ಸ್ಪಂದಿಸಬೇಕು. ಸದನದಲ್ಲಿ ಯಾವುದೇ ವಿಚಾರ ವಿಸ್ತೃತವಾಗಿ ಚರ್ಚೆಯಾಗದೇ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವುದು ದುರ್ದೈವವಾಗಿದೆ. ಚಿಂತಕರ ಚಾವಡಿ ಪರಿಷತ್ನಲ್ಲಿ ಚರ್ಚೆ ನಡೆಸದೆ ಅರ್ಧಗಂಟೆಯಲ್ಲಿ 27 ವಿಧೇಯಕಗಳ ಅಂಗೀಕಾರಗೊಳ್ಳುವುದು ಸರಿಯಲ್ಲ. ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ ತಡೆಯಬೇಕು. ಶಾಸನ ಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಪ್ರಭಾವಿಗಳಿಗೆ ಟಿಕೆಟ್ ನೀಡುತ್ತಿದ್ದಾರೆಂದು ಜನಾಭಿಪ್ರಾಯವಿದೆ. ಎಲ್ಲ ಪಕ್ಷಗಳೂ ಸಾರ್ವಜನಿಕರ ಟೀಕೆಗೆ ಗುರಿಯಾಗಿವೆ. ಹಣವಿರುವವರು ಮಾತ್ರ ಚುನಾವಣೆಯಲ್ಲಿ ಆಯ್ಕೆಯಾಗ್ತಿದ್ದಾರೆ. ಇಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧೆ ಸಾಮಾನ್ಯ ವಿಚಾರವಲ್ಲ. ಮುಕ್ತ ನ್ಯಾಯ ಸಮ್ಮತ ಚುನಾವಣೆಗೆ ನಾವು ಆಸ್ಪದ ನೀಡಬೇಕು. ಎಲ್ಲಾ ಪಕ್ಷಗಳು ಜನರ ನೋವಿಗೆ ಸ್ಪಂದಿಸುವವರಿಗೆ ಟಿಕೆಟ್ ನೀಡಬೇಕು ಎಂದು ಆಶಿಸಿದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಿಎಂ ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಉಪಸ್ಥಿತಿಯಿದ್ದರು. ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಬಹಿಷ್ಕರಿಸಿದೆ.
(Karnataka Temple Building Protection Bill passed in Vidhana Parishad)
Published On - 2:42 pm, Fri, 24 September 21