ಹಾಸನ: 907 ವರ್ಷಗಳಿಂದ ಪೂಜೆ ಸ್ವೀಕರಿಸುತ್ತಿದ್ದ ದಕ್ಷಿಣ ಭಾರತದ ಶಕ್ತಿ ದೇವತೆ ಮಹಾಕಾಳಿಯ ಗರ್ಭಗುಡಿಗೆ ಕಳೆದ ಒಂದು ವರ್ಷದಿಂದ ಬೀಗ ಹಾಕಲಾಗಿದೆ. ಹಾಸನ ತಾಲೂಕಿನ ದೊಡ್ಡಗದ್ದವಳ್ಳಿಯ ಐತಿಹಾಸಿಕ ದೇಗುಲದ ಗರ್ಭಗುಡಿ 1 ವರ್ಷದಿಂದ ಪೂಜೆಯಿಂದ ವಂಚಿತವಾಗಿದೆ. ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕೇಂದ್ರ ಪುರಾತತ್ವ ಇಲಾಖೆಯ ಮಹಾ ಯಡವಟ್ಟಿನ ವಿರುದ್ಧ ಭಕ್ತರು ಕಿಡಿಕಾರಿದ್ದಾರೆ.
ಹೊಯ್ಸಳರ ಕಾಲದ ಈ ಮಹಾಕಾಳಿ ದೇವಾಯ 9 ಗೋಪುರ, 9 ಲಾಂಛನಾ ಮತ್ತು 9 ಕಳಸ ಇರುವ ಅತ್ಯಂತ ಅಪರೂಪದ ದೇವಾಲಯವಾಗಿದೆ. ಕೋಲ್ಕತ್ತದ ಉಗ್ರ ಕಾಳಿ ಬಿಟ್ಟರೆ, ದಕ್ಷಿಣ ಭಾರತದ ಸೌಮ್ಯ ಸ್ವರೂಪಿ ಕಾಳಿಮಾತೆ ಎಂದೇ ಈ ದೇಗುಲ ಹೆಸರುವಾಸಿಯಾಗಿದೆ.
2020 ರ ನವೆಂಬರ್ 22 ರಂದು ನಿಗೂಢ ರೀತಿಯಲ್ಲಿ ಪೀಠದಿಂದ ಬಿದ್ದು ಭಿನ್ನವಾಗಿರುವ ಕಾಳಿ ವಿಗ್ರಹ ಅಂದು ಪೂಜೆಯಿಂದ ವಂಚಿತವಾಗಿದ್ದು, ಒಂದು ವರ್ಷ ಕಳೆದರೂ ಮಹಾಕಾಳಿಗೆ ಪೂಜೆ ಕಾರ್ಯ ನಡೆದಿಲ್ಲ. ದೊಡ್ಡಗದ್ದವಳ್ಳಿಯ ಮಹಾಲಕ್ಷ್ಮಿ ಚತುಷ್ಕೂಟ ದೇವಾಲಯ ಮಹಾಲಕ್ಷ್ಮಿ, ಮಹಾಕಾಳಿ, ಈಶ್ವರ, ಮಹಾವಿಷ್ಣು ನೆಲೆಸಿರುವ ಪುಣ್ಯ ಕ್ಷೇತ್ರದಲ್ಲಿಯೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯರು ಆಕ್ರೋಶಗೊಂಡಿದ್ದಾರೆ.
ಪುರಾತತ್ತ್ವ ಇಲಾಖೆ ಮಹಾಕಾಳಿ ಗರ್ಭಗುಡಿಗೆ ಬೀಗ ಹಾಕಿದೆ. ದೇವಿ ದರ್ಶನಕ್ಕೆ ಬಂದು ಪೂಜೆಯಿಲ್ಲದೆ ಭಕ್ತರು ಹಾಗೆ ಹೋಗುವ ವಾತಾವರಣ ಸದ್ಯ ಇಲ್ಲಿ ನಿರ್ಮಾಣವಾಗಿದೆ. ಭಗ್ನಗೊಂಡ ಮೂರ್ತಿಗೆ ಪೂಜೆ ಇಲ್ಲದ ಕಾರಣ ನಿತ್ಯ ಪೂಜೆ ಸ್ಥಗಿತವಾಗಿದೆ. ಹೊಸ ವಿಗ್ರಹ ಮಾಡಿಸಿ ಪೂಜೆ ಸಲ್ಲಿಸಲು ಪುರಾತತ್ವ ಇಲಾಖೆ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ತೋರಿದೆ. ಇದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ:
ದ್ವೈತ ಮಠಕ್ಕೆ ಸೇರಿದ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯ; ಏಳು ಹೆಡೆಗಳ ನಾಗದೇವತೆಯ ವಿಶೇಷತೆ ಏನು ಗೊತ್ತಾ?
ಬೀದರ್: ರಾಕ್ಷಸರಿಂದ ನಿರ್ಮಾಣವಾದ ಆಂಜನೇಯ ದೇವಾಲಯ; ಇಲ್ಲಿನ ಹನುಮಂತನಿಗಿದೆ 2 ಸಾವಿರ ವರ್ಷಗಳ ಇತಿಹಾಸ