ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳಲಿದೆ. ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನೀಡಿದ್ದ ಸೂಚನೆ ನಿಜವಾಗಿದೆ. ಜುಲೈ 8ರಂದು ರಾಜ್ಯದ ಹಲವೆಡೆ ಮಳೆ ಸುರಿಯಲಿದೆ ಎಂಬ ಸೂಚನೆಗೆ ಅನುಗುಣವಾಗಿ ನಿನ್ನೆ (ಜುಲೈ 8, ಗುರುವಾರ) ಬೆಂಗಳೂರು ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಈ ವಾತಾವರಣ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮುಂದುವರೆಯಲಿದ್ದು, ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಈ ಬಾರಿ ಬೇಸಿಗೆಯಿಂದಲೇ ಅಂದರೆ ಮೇ ತಿಂಗಳ ಆರಂಭದಿಂದಲೇ ಆಗಾಗ ಮಳೆ ಸುರಿಯುತ್ತಿತ್ತಾದರೂ ಮುಂಗಾರು ಪ್ರವೇಶದ ನಂತರ ಮೊದಲ ಒಂದೆರೆಡು ವಾರಗಳನ್ನು ಹೊರತುಪಡಿಸಿದರೆ ಎಲ್ಲೆಡೆ ಮಳೆ ಕ್ಷೀಣವಾಗಿತ್ತು. ಆದರೆ, ಇದೀಗ ಮತ್ತೆ ವರುಣ ಪುನಾರಾಗಮನ ಮಾಡುವಂತೆ ತೋರುತ್ತಿದ್ದು, ಮಲೆನಾಡು, ಕರಾವಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ.
ಮುಂಗಾರಿನ ಬಗ್ಗೆ ಈ ಹಿಂದೆ ಮಾಹಿತಿ ನೀಡಿದ್ದ ಹವಾಮಾನ ಇಲಾಖೆ ಜುಲೈ ಮೊದಲ ವಾರದ ಅಂತ್ಯದ ತನಕ ಮುಂಗಾರಿಗೆ ಪೂರಕ ವಾತಾವರಣ ಇಲ್ಲ. ಆದರೆ, ಎರಡನೇ ವಾರದಲ್ಲಿ ಮಳೆ ಚುರುಕಾಗುವ ಸಾಧ್ಯತೆ ಇದೆ. ಜುಲೈ 8ರ ನಂತರ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಮುನ್ಸೂಚನೆ ನೀಡಿತ್ತು. ಅದರಂತೆಯೇ ಈಗ ಮಳೆ ಆರಂಭವಾಗಿದೆ ಎನ್ನುವುದು ಗಮನಾರ್ಹ. ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ಹೇಳುವಂತೆ, ಜುಲೈ ಎರಡನೇ ವಾರದಲ್ಲಿ ಅಂದರೆ ಪ್ರಸ್ತುತ ಹಂತದಲ್ಲಿ ನೈರುತ್ಯ ಮುಂಗಾರು ಚುರುಕು ಪಡೆಯಲಿದ್ದು, ದೇಶಾದ್ಯಂತ ಮಳೆಯಾಗುವ ಸಾಧ್ಯತೆಯಿದೆ.
ಸದ್ಯ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಮಳೆ ಜೋರಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ವರುಣನ ಅಬ್ಬರ ಹೆಚ್ಚಾಗಲಿದ್ದು, ಮುಂದಿನ ಎರಡು ದಿನ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಇನ್ನೂ 3 ದಿನ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲೂ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮುನ್ಸೂಚನೆ ನೀಡಿದ್ದಾರೆ.
ಈ ವರ್ಷ ನೈರುತ್ಯ ಮುಂಗಾರು ದಕ್ಷಿಣ ಭಾರತ ಹಾಗೂ ಉತ್ತರ ಭಾರತದಲ್ಲಿ ಸಾಮಾನ್ಯ ರೀತಿ ಇರಲಿದ್ದು ಕೆಲವೆಡೆ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಆದರೆ ಭಾರತದ ಪೂರ್ವ ಭಾಗ ಮತ್ತು ಈಶಾನ್ಯ ಭಾಗದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಮಳೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಒಟ್ಟಾರೆಯಾಗಿ ಸೆಪ್ಟೆಂಬರ್ ತನಕ ದೇಶದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ:
Karnataka Rain: ಜುಲೈ 10 ರವರೆಗೆ ರಾಜ್ಯದಲ್ಲಿ ಭಾರಿ ಮಳೆ; ಎಲ್ಲೆಲ್ಲಿ ಯೆಲ್ಲೋ ಅಲರ್ಟ್ ಘೋಷಣೆ? ವಿವರ ಇಲ್ಲಿದೆ