Karnataka Weather Today: ದಟ್ಟ ಚಳಿಗೆ ಉತ್ತರ ಕರ್ನಾಟಕವೂ ಕಂಗಾಲು; ಕರಾವಳಿ, ಮಲೆನಾಡಂತೂ ಕೇಳೋದೇ ಬೇಡ!
Weather Forecast: ಕೊಡಗು, ಶಿವಮೊಗ್ಗ, ಬೆಂಗಳೂರು, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಚಳಿ ವಿಪರೀತ ಹೆಚ್ಚಾಗಿದೆ. ಸದಾ ಬಿಸಿಲಿನಿಂದ ಕೂಡಿರುವ ಉತ್ತರ ಕರ್ನಾಟಕದಲ್ಲೂ ಚಳಿ ವಿಪರೀತವಾಗಿದೆ.
ಬೆಂಗಳೂರು: ದಟ್ಟ ಚಳಿಗೆ ಕರ್ನಾಟಕದ ಜನರು ತತ್ತರಿಸಿದ್ದಾರೆ. ಇಷ್ಟು ದಿನ ಒಂದೇಸಮನೆ ಸುರಿಯುತ್ತಿದ್ದ ಮಳೆ ಇದೀಗ ಬಿಡುವು ಪಡೆದಿದ್ದು, ಎಲ್ಲೆಡೆ ಶೀತ ಗಾಳಿ ಆವರಿಸಿದೆ. ದಿನವಿಡೀ ಬೆಚ್ಚಗೆ ಹೊದ್ದುಕೊಂಡು ಮನೆಯೊಳಗೇ ಇರಬೇಕು ಎನಿಸುವಷ್ಟು ಚಳಿ ಶುರುವಾಗಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಕಾಶ್ಮೀರಕ್ಕೋ, ಶಿಮ್ಲಾಗೋ ಹೋದ ಅನುಭವವಾಗುತ್ತಿದೆ. ಬೆಂಗಳೂರಂತೂ ಥಂಡಾ ಥಂಡಾ ಕೂಲ್ ಕೂಲ್ ಆಗಿದೆ. ಒಮ್ಮೆ ಸೂರ್ಯನ ಮುಖ ಕಂಡರೆ ಸಾಕಪ್ಪ ಎನಿಸುವಷ್ಟು ಜನ ಚಳಿಯಿಂದ ಕಂಗೆಟ್ಟಿದ್ದಾರೆ. ಚಳಿ ಹೆಚ್ಚಾಗಿರುವುದರಿಂದ ವೈರಲ್ ಜ್ವರ, ಶೀತ, ತಲೆನೋವು, ಉಸಿರಾಟದ ತೊಂದರೆ, ಮೈಕೈ ನೋವು ಮುಂತಾದ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿದ್ದರೂ ಬೇರೆ ರಾಜ್ಯಗಳಲ್ಲಿ ಇನ್ನೂ ಮಳೆ ಸಂಪೂರ್ಣವಾಗಿ ಕಡಿಮೆಯಾಗಿಲ್ಲ.
ಭಾರತ ಹವಾಮಾನ ಇಲಾಖೆ (IMD) ಕೆಲವು ರಾಜ್ಯಗಳಲ್ಲಿ ಇಂದಿನಿಂದ 3 ದಿನಗಳ ಕಾಲ ಮಳೆಯಾಗಲಿದೆ ಎಂದು ತಿಳಿಸಿದೆ. ಇಂದಿನಿಂದ 3 ದಿನ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮಳೆಯಾಗಲಿದೆ. ಇಂದು ಅರುಣಾಚಲ ಪ್ರದೇಶದ ಮೇಲೆ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಇಂದು ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಮಳೆಯಾಗಲಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮಳೆ ಮತ್ತು ಹಿಮಪಾತದ ಸಾಧ್ಯತೆಯಿದೆ.
ಕೊಡಗು, ಶಿವಮೊಗ್ಗ, ಬೆಂಗಳೂರು, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಚಳಿ ವಿಪರೀತ ಹೆಚ್ಚಾಗಿದೆ. ಸದಾ ಬಿಸಿಲಿನಿಂದ ಕೂಡಿರುವ ಉತ್ತರ ಕರ್ನಾಟಕದಲ್ಲೂ ಚಳಿ ವಿಪರೀತವಾಗಿದೆ. ಉತ್ತರ ಕರ್ನಾಟಕದ ಧಾರವಾಡ, ಹುಬ್ಬಳ್ಳಿ, ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲಿ ಇನ್ನೂ 3 ದಿನ ಚಳಿ ಹೆಚ್ಚಾಗಲಿದೆ.
ಡಿಸೆಂಬರ್ 24ರಿಂದ 29ರವರೆಗೆ ಪಶ್ಚಿಮ ಹಿಮಾಲಯದ ಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಡಿಸೆಂಬರ್ 27ರಂದು ಕಾಶ್ಮೀರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ.
ಡಿಸೆಂಬರ್ 26ರಿಂದ 29ರವರೆಗೆ ವಾಯುವ್ಯ ಭಾರತದ ಪಕ್ಕದ ಬಯಲು ಪ್ರದೇಶಗಳಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ ವಾಯುವ್ಯ ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಶೀತ ಅಲೆ ಉಂಟಾಗಲಿದೆ. ಇಂದು ಉತ್ತರಾಖಂಡ, ಉತ್ತರ ಪ್ರದೇಶ, ಪೂರ್ವ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ಮತ್ತು ಪಂಜಾಬ್, ಹರಿಯಾಣ, ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಸೌರಾಷ್ಟ್ರ ಮತ್ತು ಕಚ್, ತೆಲಂಗಾಣ, ಬಿಹಾರ, ಜಾರ್ಖಂಡ್‌ನಲ್ಲಿ ಮಳೆಯಾಗಲಿದೆ.
ಇಂದಿನಿಂದ ಡಿಸೆಂಬರ್ 25ರವರೆಗೆ ಪಶ್ಚಿಮ ಹಿಮಾಲಯನ್ ಪ್ರದೇಶದಲ್ಲಿ ಲಘುವಾಗಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಇಂದಿನಿಂದ ಡಿಸೆಂಬರ್ 25ರವರೆಗೆ ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ಮತ್ತು ಡಿಸೆಂಬರ್ 24 ಮತ್ತು 25ರಂದು ಪಶ್ಚಿಮ ರಾಜಸ್ಥಾನದ ಮೇಲೆ ದಟ್ಟವಾದ ಮಂಜು ಇರುತ್ತದೆ. ಭಾರತೀಯ ಹವಾಮಾನ ಇಲಾಖೆ (IMD) ಡಿ. 25ರವರೆಗೆ ಪಶ್ಚಿಮ ಹಿಮಾಲಯದ ಪ್ರದೇಶದಲ್ಲಿ ಲಘುವಾಗಿ ಮಧ್ಯಮ ಮಳೆ ಮತ್ತು ಹಿಮಪಾತವಾಗುವ ಮುನ್ಸೂಚನೆ ನೀಡಲಾಗಿದೆ. ಡಿಸೆಂಬರ್ 24ರಂದು ಪಂಜಾಬ್‌ನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Karnataka Dams Water Level: ಮಳೆ ಕಡಿಮೆಯಾಗಿ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟವೂ ಇಳಿಕೆ
ಚಳಿಗಾಲದಲ್ಲಿ ಕಾಡುವ ಮಂಡಿನೋವಿನಿಂದ ಮುಕ್ತಿ ಪಡೆಯಲು ಈ ಕ್ರಮಗಳನ್ನು ಅನುಸರಿಸಿ