Karnataka Weather Today: ಬೆಂಗಳೂರು, ತುಮಕೂರು, ಕೋಲಾರದಲ್ಲಿ ಇಂದು ಭಾರೀ ಮಳೆ; ಕರ್ನಾಟಕಕ್ಕೆ ಅ. 25ಕ್ಕೆ ಹಿಂಗಾರು ಪ್ರವೇಶ
Karnataka Rain: ಹವಾಮಾನ ತಜ್ಞರ ಪ್ರಕಾರ ಅ. 25 ಅಥವಾ 26ರಂದು ಹಿಂಗಾರು ಮಳೆ ಶುರುವಾಗಲಿದೆ. ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಇಂದು ಮಳೆಯ ಪ್ರಮಾಣ ಹೆಚ್ಚಾಗಲಿದೆ.

Karnataka Rain: ಇಂದಿನಿಂದ 3 ದಿನಗಳ ಕಾಲ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ. ಅಕ್ಟೋಬರ್ 25 ಅಥವಾ 26ಕ್ಕೆ ರಾಜ್ಯಕ್ಕೆ ಹಿಂಗಾರು ಪ್ರವೇಶವಾಗಲಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮಳೆಯ ಆರ್ಭಟ ಶುರುವಾಗಲಿದೆ. ನಿನ್ನೆ ರಾತ್ರಿಯೂ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಅ. 23ರವರೆಗೆ ಕರ್ನಾಟಕದಲ್ಲಿ ಮಳೆಯಾಗಲಿದೆ. ಕರ್ನಾಟಕದ 16 ಜಿಲ್ಲೆಗಳಲ್ಲಿ ಇನ್ನು 3 ದಿನ ಹಳದಿ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಇಂದು ಮಳೆಯ ಪ್ರಮಾಣ ಹೆಚ್ಚಾಗಲಿದೆ.
ಕರ್ನಾಟಕದಲ್ಲಿ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲೇ ಮುಂಗಾರು ಮುಕ್ತಾಯವಾಗಿದೆ. ಆದರೆ, ಚಂಡಮಾರುತ ಮತ್ತು ವಾಯುಭಾರ ಕುಸಿತದಿಂದಾಗಿ ಮಳೆ ಮುಂದುವರೆದಿತ್ತು. ಇಂದಿನಿಂದಲೇ ಕರ್ನಾಟಕಕ್ಕೆ ಹಿಂಗಾರು ಪ್ರವೇಶವಾಗಲಿದೆ ಎನ್ನಲಾಗಿತ್ತು. ಆದರೆ, ಹವಾಮಾನ ತಜ್ಞರ ಪ್ರಕಾರ ಅ. 25 ಅಥವಾ 26ರಂದು ಹಿಂಗಾರು ಮಳೆ ಶುರುವಾಗಲಿದೆ. ಇಂದಿನಿಂದ ಅ. 23ರವರೆಗೆ ರಾಜ್ಯದಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಕಡಿಮೆಯಾಗಿದ್ದು, ಇಂದಿನಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ರಾಮನಗರ, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ 3 ದಿನ ಹಳದಿ ಅಲರ್ಟ್ ಘೋಷಿಸಲಾಗಿದೆ. ಹಾಗೇ, ಬಾಗಲಕೋಟೆ, ಬೀದರ್, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಕಲಬುರ್ಗಿ, ಯಾದಗಿರಿಯಲ್ಲಿ ಒಣಹವೆ ಇರಲಿದೆ.
(2/2) isolated to scattered light rainfall with isolated moderate rainfall likely over Coastal Karnataka districts, Isolated light rainfall likely over NIK region.
— KSNDMC (@KarnatakaSNDMC) October 20, 2021
ನೈಋತ್ಯ ಮುಂಗಾರಿನಿಂದ ಎರಡು ವಾರಗಳಿಂದ ರಾಜ್ಯದಲ್ಲಿ ಭಾರೀ ಮಳೆಯಾಗಿತ್ತು. ಬೆಂಗಳೂರಿನಲ್ಲಿ ನಿನ್ನೆ ಕೂಡ ಮಳೆಯಾಗಿದ್ದು, ಹಲವೆಡೆ ಸುಮಾರು 2 ಗಂಟೆ ಮಳೆ ಸುರಿದಿದೆ. ಇಂದು ಕೂಡ ಬೆಂಗಳೂರಿನಲ್ಲಿ ಮಳೆ ಮುಂದುವರೆಯುವ ನಿರೀಕ್ಷೆಯಿದೆ. ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಹಳದಿ ಅಲರ್ಟ್ ಘೋಷಿಸಲಾಗಿದೆ.
ಅತ್ತ ಕೇರಳ, ಪಶ್ಚಿಮ ಬಂಗಾಳ, ಉತ್ತರಾಖಂಡದಲ್ಲಿ ವಿಪರೀತ ಮಳೆಯಾಗಿ ಪ್ರವಾಹ ಉಂಟಾಗಿದೆ. ಉತ್ತರಾಖಂಡದಲ್ಲಿ ಮಳೆಯಿಂದ 46 ಜನರು ಸಾವನ್ನಪ್ಪಿದ್ದು, ಸಿಕ್ಕಿಂ, ಪಶ್ಚಿಮ ಬಂಗಾಳದಲ್ಲೂ ಮಳೆ ಜಾಸ್ತಿಯಾಗಿದೆ. ಕೇರಳದಲ್ಲೂ ಮಳೆಯಿಂದ 39 ಜನರು ಸಾವನ್ನಪ್ಪಿದ್ದಾರೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಇಂದು ಹಿಮಪಾತ ಉಂಟಾಗುವ ಸಾಧ್ಯತೆಯಿದೆ. ಉತ್ತರಾಖಂಡದಲ್ಲಿ ಇನ್ನೆರಡು ದಿನ ಇದೇ ರೀತಿಯ ಪ್ರವಾಹ ಮುಂದುವರೆಯಲಿದೆ.
#WATCH | Uttarakhand: Nainital Lake overflows and floods the streets in Nainital & enters building and houses here. The region is receiving incessant heavy rainfall. pic.twitter.com/G2TLfNqo21
— ANI (@ANI) October 19, 2021
ಉತ್ತರಾಖಂಡ, ಅರುಣಾಚಲ ಪ್ರದೇಶ, ತಮಿಳುನಾಡು, ಬಿಹಾರ, ಅಸ್ಸಾಂ, ಮೇಘಾಲಯ, ಸಿಕ್ಕಿಂ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ, ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳದಲ್ಲಿ ಇಂದು ಕೂಡ ವಿಪರೀತ ಮಳೆಯಾಗಲಿದ್ದು, 11 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಪಥನಾಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಲಕ್ಕಾಡ್, ಮಣಪ್ಪುರಂ, ಕೋಝಿಕೋಡ್, ವಯನಾಡ್, ಕಣ್ಣೂರು ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಕಾಸರಗೋಡು ಮತ್ತು ಕಣ್ಣೂರಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: Kerala rains: ಕೇರಳದಲ್ಲಿ ಭಾರೀ ಮಳೆಯಿಂದಾಗಿ 39 ಸಾವು, ಪುನರ್ವತಿ ಶಿಬಿರಗಳಲ್ಲಿವೆ 3851 ಕುಟುಂಬಗಳು: ಪಿಣರಾಯಿ ವಿಜಯನ್
Uttarakhand Rain: ಉತ್ತರಾಖಂಡದಲ್ಲಿ ಭೀಕರ ಮಳೆ; ಪ್ರವಾಹದಿಂದ 46 ಜನ ಸಾವು, 11 ಮಂದಿ ನಾಪತ್ತೆ




