ಕಾರವಾರ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಪಾದಯಾತ್ರೆ, ಉತ್ತರ ಕನ್ನಡದಲ್ಲಿ ರಾಜಕೀಯ ಸಂಚಲನ ಮೂಡಿಸುವ ನಿರೀಕ್ಷೆ
ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿರುವಾಗಲೇ ಉತ್ತರಕನ್ನಡದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯನ್ನ ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಯತ್ನ ಆರೋಪ ಸರ್ಕಾರದ ಮೇಲಿದೆ.

ಉತ್ತರ ಕನ್ನಡ: ಜಿಲ್ಲೆಯ ಬಹುಬೇಡಿಕೆಯ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕನಸು ಈವರೆಗೂ ಈಡೆರಿಲ್ಲ. ಪ್ರತಿ ಬಾರಿಯೂ ಹೋರಾಟ ನಡೆಸಿದಾಗ ಮೂಗಿಗೆ ತುಪ್ಪ ಸವರಿದ ರೀತಿ ವರ್ತಿಸುತ್ತಿರುವ ಸರ್ಕಾರ ಸದ್ಯ ಕುಮಟಾದ ಮಿರ್ಜಾನ್ ಬಳಿ ಜಾಗ ಪರಿಶೀಲನೆ ನಡೆಸಿದೆಯಾದರೂ ಈವರೆಗೂ ಆಸ್ಪತ್ರೆ ಮಂಜೂರು ಮಾಡುವ ಕೆಲಸ ಮಾಡಿಲ್ಲ. ಇನ್ನೇನು ಕೆಲ ತಿಂಗಳುಗಳಲ್ಲಿಯೇ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ಮತ್ತೆ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಚುನಾವಣೆ ಭರವಸೆಯಾಗುವ ಲಕ್ಷಣ ಗೋಚರವಾಗಿದೆ. ಇದೇ ಕಾರಣಕ್ಕೆ ಜೆಡಿಎಸ್ ನಾಯಕ ಸೂರಜ್ ನಾಯಕ ಸೋನಿ ನೇತೃತ್ವದಲ್ಲಿ ಹೊನ್ನಾವರದ ಶರಾವತಿ ಸರ್ಕಲ್ ಬಳಿಯಿಂದ ಕುಮಟಾವರೆಗೆ ಸುಮಾರು 25 ಕಿ.ಮೀ ಜನಪರ ಯಾತ್ರೆ ನಡೆಸಲಾಗಿದೆ.
ಸುಡು ಬಿಸಿಲ ನಡುವೆಯೂ ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಗೆ ಅತಿ ಅಗತ್ಯವಿರುವ ಸೂಪರ್ ಸ್ಪೇಷಾಲಿ ಆಸ್ಪತ್ರೆ ಮಂಜೂರಿಸಲು ಸರ್ಕಾರ ವಿಳಂಭ ಮಾಡುವ ಮೂಲಕ ಬೇಡಿಕೆಯನ್ನು ಚುನಾವಣೆವರೆಗೂ ಕೊಂಡೊಯ್ಯುವ ತಂತ್ರ ನಡೆಸಿದೆ. ಪರೇಶ ಮೇಸ್ತಾ ಸಾವಿನ ಪ್ರಕರಣದಂತೆ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಸೂರಜ್ ನಾಯಕ ಆರೋಪಿಸಿದ್ದಾರೆ.
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಟಿಕೇಟ್ ಆಕಾಂಕ್ಷಿಗಳ ರಾಜಕೀಯ ಚಟುವಟಿಕೆಗಳು ಕೂಡ ಆರಂಭವಾಗಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಜನರ ಎದುರು ಇಟ್ಟು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಅದರಂತೆ ಕುಮಟಾ ಹೊನ್ನಾವರ ಕ್ಷೇತ್ರದಲ್ಲಿನ ಸಮಸ್ಯೆಗಳು ಹಾಗೂ ಜನಪ್ರತಿನಿಧಿಗಳ ಆಡಳಿತ ವೈಕರಿ ಟೀಕಿಸಿರುವ ಸೂರಜ್ ಕೂಡ ಚುನಾವಣಾ ತಯಾರಿ ನಡೆಸಲು ಆರಂಭಿಸಿದ್ದಾರೆ. ನಾಯಕರಾದವರು ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳ ಬಗೆಗೆ ಗಮನ ಹರಿಸಬೇಕು. ಜಿಲ್ಲೆಗೆ ಅಗತ್ಯವಿರುವ ಆಸ್ಪತ್ರೆ ನಮ್ಮ ಪ್ರಮುಖ ಬೇಡಿಕೆಯಾಗಿದ್ದು ಕೂಡಲೇ ಈಡೇರಿಸಬೇಕು. ಈ ಕಾರಣದಿಂದಲೇ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ 25 ಕಿ.ಮೀ ಪಾದಯಾತ್ರೆ ನಡೆಸಿದ್ದಾರೆ ಎಂದು ಪಾದಯಾತ್ರೆಯಲ್ಲಿ ಪಾಲ್ಗೊಂಡ ಹಿರಿಯ ಮುಖಂಡರು ಹೇಳುತ್ತಾರೆ.
ಒಟ್ಟಾರೆ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಮಂಜೂರು ಮಾಡುವ ಭರವಸೆ ನೀಡಿದ್ದ ಸರ್ಕಾರ ಸ್ಥಳ ಪರಿಶೀಲನೆಯ ನಂತರವೂ ಮೌನವಹಿಸಿದೆ. ಇತ್ತ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಗಾಗಿ ಮತ್ತೆ ಹೋರಾಟವೂ ಆರಂಭಗೊಂಡಿದೆ. ಸರ್ಕಾರ ಆಸ್ಪತ್ರೆ ಮಂಜೂರು ಮಾಡದೇ ಇದ್ದರೆ ಚುನಾವಣೆಗೂ ಇದೇ ವಿಷಯ ಅಸ್ತ್ರವಾಗುವ ಎಲ್ಲ ಲಕ್ಷಣ ಗೋಚರವಾಗಿದೆ.
ವರದಿ: ವಿನಾಯಕ ಬಡಿಗೇರ, ಟಿವಿ 9 ಕಾರವಾರ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




