ಬೆಂಗಳೂರು, ಡಿಸೆಂಬರ್ 13: ವಿಶ್ವ ಒಕ್ಕಲಿಗರ ಮಹಾಸಂಸ್ಥಾನಕ್ಕೆ (Vishwa Okkaliga Mahasamsthan) ನೂತನ ಉತ್ತರಾಧಿಕಾರಿಯಾಗಿ ಹಿರಿಯ ಕೆಎಎಸ್ ಅಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ನೇಮಕಗೊಂಡಿದ್ದಾರೆ. ಕೆಂಗೇರಿ ಬಳಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನಮಠದಲ್ಲಿ ಡಿಸೆಂಬರ್ 14, 15ರಂದು ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಪ್ರಸ್ತುತ ಪೀಠಾಧಿಪತಿಯಾಗಿರುವ ಚಂದ್ರಶೇಖರ ಸ್ವಾಮೀಜಿಗೆ 81 ವಯಸ್ಸು ಆಗಿದೆ. ಹೀಗಾಗಿ ಮಠದ ಟ್ರಸ್ಟಿಗಳು, ಸ್ವಾಮೀಜಿ ತೀರ್ಮಾನದಂತೆ ಪಟ್ಟಾಭಿಷೇಕ ಮಾಡಲಾಗುತ್ತಿದೆ.
ಜನದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.14 ಸಂಜೆ 6 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಚಂದ್ರಶೇಖರನಾಥ ಸ್ವಾಮೀಜಿ ಅವರು ಉತ್ತರಾಧಿಕಾರಿಗೆ ನೆರವೇರಿಸಲಿದ್ದಾರೆ. ಗಂಗೆಪೂಜೆ, ಶಿವಪಾರ್ವತಿಯರ ಪೂಜೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ನಾಂದಿ ಸಮಾರಾಧನೆ, ರಕ್ಷಾ ಬಂಧನ, ಪೋಷಕರಿಂದ ರಕ್ತ ಸಂಬಂಧದ ತ್ಯಾಗ ಮತ್ತು ಸಮಾಜಕ್ಕೆ ಉತ್ತರಾಧಿಕಾರಿಯ ಸಮರ್ಪಣೆ ಇತ್ಯಾದಿ ಕಾರ್ಯಗಳು ನಡೆಯಲಿವೆ.
ಇದನ್ನೂ ಓದಿ: ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್ ಆಗ್ರಹ
ಇನ್ನು ಡಿ. 15ರ ಬೆಳಿಗ್ಗೆ 6 ಗಂಟೆಯಿಂದ ಪಟ್ಟಾಭಿಷೇಕ ನಡೆಯಲಿದ್ದು, ಗೂಳೂರು ಮಹಾ ಸಂಸ್ಥಾನಮಠಥದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ತರಳಬಾಲು ಜಗದ್ಗುರು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ಮತ್ತು ಬೇಲಿಮಠ ಸಂಸ್ಥಾನದ ಶಿವಾನುಭ ಚರಮೂರ್ತಿ ಶಿವರುದ್ರ ಮಹಾಸ್ವಾಮೀಜಿಗಳು ಭಾಗಿಯಾಗಲಿದ್ದಾರೆ.
ಇತ್ತೀಚೆಗೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನಕ್ಕೆ ನೂತನ ಉತ್ತರಾಧಿಕಾರಿಯಾಗಿ ಹಿರಿಯ ಕೆಎಎಸ್ ಅಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಅವರನ್ನು ನೇಮಕ ಮಾಡಲಾಗಿತ್ತು. ಆ ಮೂಲಕ ಅವರು ಆಧ್ಯಾತ್ಮಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಎಎಸ್ ಅಧಿಕಾರಿಯೊಬ್ಬರು ಸನ್ಯಾಸತ್ವ ಸ್ವೀಕರಿಸಲು ನಿರ್ಧರಿಸಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ಡಾ.ಹೆಚ್.ಎಲ್.ನಾಗರಾಜ್ ಅವರು ಸರಿಸುಮಾರು 13 ವರ್ಷಗಳ ಹಿಂದೆ ಅಂದರೆ ತಹಶೀಲ್ದಾರ್ ಆಗಿದ್ದ ವೇಳೆಯಲ್ಲಿ ಅವರು ದೀಕ್ಷೆ ಪಡೆದುಕೊಂಡಿದ್ದರು. ಆದರೆ ಕುಟುಂಬಸ್ಥರು ಮತ್ತು ಜನರ ಒತ್ತಾಯದಿಂದ ಸನ್ಯಾಸತ್ವ ತೊರೆದಿದ್ದರು.
ಇದನ್ನೂ ಓದಿ: ಮುಸ್ಲಿಮರಿಗೆ ಮತದಾನದ ಹಕ್ಕು ರದ್ದುಪಡಿಸಿ ಎಂದಿದ್ದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್ಐಆರ್
ಜುಲೈ 2011 ರಲ್ಲಿ ಮತ್ತೆ ನಾಗರಾಜ್ ಅವರು ಮಠದಲ್ಲಿ ಧಾರ್ಮಿಕ ಪ್ರತಿಜ್ಞೆ ಸ್ವೀಕರಿಸಿದ್ದು, ನಿಶ್ಚಲಾನಂದನಾಥ ಸ್ವಾಮೀಜಿ ಎಂಬ ಹೆಸರನ್ನು ಪಡೆದರು. ದೀಕ್ಷಾ ಸ್ವೀಕರಿಸಿದ 15 ದಿನಗಳಲ್ಲಿ ಅವರು ತಮ್ಮ ಸರ್ಕಾರಿ ಕರ್ತವ್ಯಗಳನ್ನು ಪುನರಾರಂಭಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:34 pm, Fri, 13 December 24