
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ಕಾಂಟ್ರಾಕ್ಟ್ ಆಧಾರದ ಮೇಲೆ ವಿದ್ಯುಚ್ಛಕ್ತಿ ಲೋಕಪಾಲರು (Electricity Ombudsman) ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ 80,000 ರೂ. ಕ್ರೋಡೀಕೃತ ಸಂಭಾವನೆ ನೀಡಲಾಗುತ್ತದೆ. ಈ ನೇಮಕಾತಿಯು ಆರಂಭಿಕವಾಗಿ ಒಂದು ವರ್ಷದ ಅವಧಿಗೆ ಇರಲಿದ್ದು, ಆಯೋಗದ ವಿವೇಚನೆಗೆ ಅನುಗುಣವಾಗಿ ಸೇವೆಯನ್ನು ವಿಸ್ತರಿಸುವ ಅವಕಾಶವೂ ಇರುತ್ತದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿರಬೇಕು. ವಿದ್ಯುಚ್ಛಕ್ತಿ ಸರಬರಾಜು ಮತ್ತು ವಿತರಣೆ, ಹಣಕಾಸು, ಕಾನೂನು ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಕನಿಷ್ಠ 25 ವರ್ಷಗಳ ಅನುಭವ ಹೊಂದಿರಬೇಕಾದುದು ಕಡ್ಡಾಯವಾಗಿದೆ. ಇದರ ಜೊತೆಗೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹಾಗೂ ಕನ್ನಡ ಭಾಷೆಯಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಜ್ಞಾನವನ್ನು ಅಭ್ಯರ್ಥಿಗಳು ಹೊಂದಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 65 ವರ್ಷಗಳನ್ನು ಮೀರಿರಬಾರದು. ಈ ಹುದ್ದೆಯ ಆಯ್ಕೆ ಪ್ರಕ್ರಿಯೆಯಲ್ಲಿ ಕಾನೂನು ಹಿನ್ನೆಲೆಯನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ ಆಯೋಗವು ಹೆಚ್ಚಿನ ಆದ್ಯತೆಯನ್ನು ನೀಡಲಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅರ್ಜಿ ಶುಲ್ಕ ಮತ್ತು ಡಿಮ್ಯಾಂಡ್ ಡ್ರಾಫ್ಟ್ (DD) ವಿವರಸಾಮಾನ್ಯ ಹಾಗೂ ಇತರೆ ಅಭ್ಯರ್ಥಿಗಳಿಗೆ 1,000 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ 100 ರೂ. ಶುಲ್ಕವಿರುತ್ತದೆ. ಈ ಶುಲ್ಕವನ್ನು “ಕಾರ್ಯದರ್ಶಿ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ, ಬೆಂಗಳೂರು” ಇವರ ಹೆಸರಿಗೆ ಪಡೆದ ಡಿಮ್ಯಾಂಡ್ ಡ್ರಾಫ್ಟ್ (Demand Draft) ಮೂಲಕ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: 68ರ ವಯಸ್ಸಿನಲ್ಲೂ ಕಲಿಕೆಯ ಉತ್ಸಾಹ; ನಿವೃತ್ತ ಅಧಿಕಾರಿ ಈಗ ಸೈಕಾಲಜಿ ಸ್ಟೂಡೆಂಟ್!
ಅರ್ಜಿ ನಮೂನೆಯನ್ನು ಆಯೋಗದ ಕಚೇರಿಯಿಂದ ಅಥವಾ ಆಯೋಗದ ಅಧಿಕೃತ ವೆಬ್‌ಸೈಟ್ ಆದ kerc.karnataka.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಡಿಡಿ ಮತ್ತು ಅರ್ಹತಾ ಪತ್ರಗಳ ನಕಲುಗಳನ್ನು ಲಗತ್ತಿಸಿ ದಿನಾಂಕ 12.11.2026 ರಂದು ಅಥವಾ ಅದಕ್ಕೂ ಮುಂಚಿತವಾಗಿ ಕಾರ್ಯದರ್ಶಿಯವರ ಕಚೇರಿಗೆ ತಲುಪುವಂತೆ ಕಳುಹಿಸಿಕೊಡಬೇಕಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:38 pm, Wed, 28 October 26