ಅಪಹರಣ ಪ್ರಕರಣ: ಭವಾನಿ ರೇವಣ್ಣ ಕಾರು ಚಾಲಕ ಅಜಿತ್ ಕೊನೆಗೂ ಅರೆಸ್ಟ್
ಕಿಡ್ನ್ಯಾಪ್ ಬಗ್ಗೆ ಕೆಆರ್ ನಗರ ಠಾಣೆಯಲ್ಲಿ ಸಂತ್ರಸ್ತೆಯ ಮಗ ದೂರು ನೀಡಿದ್ದ. ಇದರ ಅನ್ವಯ ಭವಾನಿ ಕಾರು ಚಾಲಕ ಅಜಿತ್ ವಿರುದ್ಧ ಎಸ್ಐಟಿ ಎಫ್ಐಆರ್ ದಾಖಲಿಸಿತ್ತು. ಮತ್ತೊಂದೆಡೆ, ಪ್ರಕರಣದಲ್ಲಿ 20ಕ್ಕೂ ಹೆಚ್ಚು ದಿನಗಳಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಶುಕ್ರವಾರ ವಿಚಾರಣೆಗೆ ಹಾಜರಾದರು.
ಬೆಂಗಳೂರು, ಜೂನ್ 7: ಮೈಸೂರು ಜಿಲ್ಲೆ ಕೆಆರ್ ನಗರ ಮಹಿಳೆಯ ಅಪಹರಣ (Kidnap Case) ಆರೋಪ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಭವಾನಿ ರೇವಣ್ಣ (Bhavani Revanna) ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಅವರ ಕಾರು ಚಾಲಕ ಅಜಿತ್ನನ್ನೂ ಎಸ್ಐಟಿ (SIT) ಬಂಧಿಸಿರುವ ವಿಚಾರ ಬೆಳಕಿಗೆ ಬಂದಿದೆ. ಬುಧವಾರ ರಾತ್ರಿಯೇ ಚಿಕ್ಕಮಗಳೂರಿನಲ್ಲಿ ಅಜಿತ್ನನ್ನು ಎಸ್ಐಟಿ ಬಂಧಿಸಿತ್ತು. ಚಾಲಕ ಅಜಿತ್ ಚಿಕ್ಕಮಗಳೂರಿನ ಸಂಬಂಧಿಕರ ಮನೆಯಲ್ಲಿ ಇದ್ದ. ಈ ಮಾಹಿತಿ ಆಧರಿಸಿ ಚಿಕ್ಕಮಗಳೂರಿನಲ್ಲಿ ಎಸ್ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಈ ಹಿಂದೆ ಅಜಿತ್ ಮಾವನ ಮನೆಯಲ್ಲಿ ಕೂಡ ಶೋಧ ನಡೆಸಿದ್ದರು.
ಸಂತ್ರಸ್ತೆಯ ವಿಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿರುವ ಆರೋಪ ಅಜಿತ್ ಮೇಲಿದೆ. ಸಂತ್ರಸ್ತೆಯನ್ನು ಮನೆಯಿಂದ ಕಾರಿನಲ್ಲಿ ಕರೆದೊಯ್ದ ಆರೋಪ ಕೂಡ ಇದೆ. ಭವಾನಿ ಸೂಚನೆ ಮೇರೆಗೆ ಅಜಿತ್ ಸಂತ್ರಸ್ತೆಯನ್ನು ಮನೆಯಿಂದ ಕರೆದೊಯ್ದ ಎನ್ನಲಾಗಿತ್ತು.
ಕಿಡ್ನ್ಯಾಪ್ ಬಗ್ಗೆ ಕೆಆರ್ ನಗರ ಠಾಣೆಯಲ್ಲಿ ಸಂತ್ರಸ್ತೆಯ ಮಗ ದೂರು ನೀಡಿದ್ದ. ಇದರ ಅನ್ವಯ ಭವಾನಿ ಕಾರು ಚಾಲಕ ಅಜಿತ್ ವಿರುದ್ಧ ಎಸ್ಐಟಿ ಎಫ್ಐಆರ್ ದಾಖಲಿಸಿತ್ತು.
ಮತ್ತೊಂದೆಡೆ, ಪ್ರಕರಣದಲ್ಲಿ 20ಕ್ಕೂ ಹೆಚ್ಚು ದಿನಗಳಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಶುಕ್ರವಾರ ವಿಚಾರಣೆಗೆ ಹಾಜರಾದರು. ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕ ಬೆನ್ನಲ್ಲೇ ಅವರು ಎಸ್ಐಟಿ ವಿಚಾರಣೆಗೆ ಹಾಜರಾದರು.
ಇದನ್ನೂ ಓದಿ: ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕ ಬೆನ್ನಲ್ಲೇ ಎಸ್ಐಟಿ ಮುಂದೆ ಹಾಜರಾದ ಭವಾನಿ ರೇವಣ್ಣ!
ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವಿಡಿಯೋದಲ್ಲಿ ನನ್ನ ತಾಯಿಯ ಚಿತ್ರವೂ ಇದ್ದು, ಇದೀಗ ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ಸಂತ್ರಸ್ತೆ ಪುತ್ರ ದೂರು ನೀಡಿದ್ದರು. ಪ್ರಕರಣ ಸಂಬಂಧ ರೇವಣ್ಣ ಪತ್ನಿ ಭವಾನಿಯವರ ಸಂಬಂಧಿಯೂ ಆಗಿರುವ ಸತೀಶ್ ಬಾಬು ಎಂಬವರನ್ನು ಎಸ್ಐಟಿ ಬಂಧಿಸಿತ್ತು. ಪ್ರಕರಣದಲ್ಲಿ ಹೆಚ್ಡಿ ರೇವಣ್ಣ ಮೊದಲ ಆರೋಪಿಯಾಗಿದ್ದಾರೆ. ರೇವಣ್ಣ ಅವರನ್ನು ಈಗಾಗಲೇ ಎಸ್ಐಟಿ ಬಂಧಿಸಿ ವಿಚಾರಣೆ ನಡೆಸಿದೆ. ಇದೀಗ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ