AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಡ್ನಿ ಬೇಕು ಕಿಡ್ನಿ! ಕರ್ನಾಟಕದಲ್ಲಿ ಮೂತ್ರಪಿಂಡಕ್ಕೆ ಹೆಚ್ಚಿದ ಬೇಡಿಕೆ, ಆಘಾತಕಾರಿ ಅಂಕಿಅಂಶ ಬಯಲು

ಕರ್ನಾಟಕದಲ್ಲಿ ಕಿಡ್ನಿ ಕಸಿಗಾಗಿ ಬೇಡಿಕೆ ವಿಪರೀತ ಹೆಚ್ಚಾಗಿದ್ದು, 4,000ಕ್ಕೂ ಹೆಚ್ಚು ಮಂದಿ ಕಾಯುತ್ತಿದ್ದಾರೆ. ಸಾಂಕ್ರಾಮಿಕವಲ್ಲದ ಕಾಯಿಲೆಗಳ (NCDs) ಹೆಚ್ಚಳವು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಮುಖ್ಯ ಕಾರಣವಾಗಿದೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ದಾನಿಗಳ ಲಭ್ಯತೆ ಮತ್ತು ಹೊಂದಾಣಿಕೆ ದೊಡ್ಡ ಸವಾಲಾಗಿದೆ. ಬೇಕಿದ್ದವರು ಎರಡರಿಂದ ಮೂರು ವರ್ಷಗಳಷ್ಟು ಕಾಯಬೇಕಾದ ಸ್ಥಿತಿ ಎದುರಾಗಿದೆ.

ಕಿಡ್ನಿ ಬೇಕು ಕಿಡ್ನಿ! ಕರ್ನಾಟಕದಲ್ಲಿ ಮೂತ್ರಪಿಂಡಕ್ಕೆ ಹೆಚ್ಚಿದ ಬೇಡಿಕೆ, ಆಘಾತಕಾರಿ ಅಂಕಿಅಂಶ ಬಯಲು
ಸಾಂದರ್ಭಿಕ ಚಿತ್ರ
Ganapathi Sharma
|

Updated on: Dec 29, 2025 | 7:57 AM

Share

ಬೆಂಗಳೂರು, ಡಿಸೆಂಬರ್ 29: ಕರ್ನಾಟಕದಲ್ಲಿ ಕಿಡ್ನಿ (Kidney) ಬೇಡಿಕೆ ಗಣನೀಯವಾಗಿ ಹೆಚ್ಚಿರುವ ಬಗ್ಗೆ ವರದಿಯಾಗಿದೆ. 4 ಸಾವಿರಕ್ಕೂ ಹೆಚ್ಚು ಮಂದಿ ಕಿಡ್ನಿಗಾಗಿ ಕಾಯುತ್ತಿದ್ದಾರೆ. 2025ರ ಡಿಸೆಂಬರ್ ವರೆಗಿನ ಅಂಕಿಅಂಶಗಳ ಪ್ರಕಾರ, ಈ ವರ್ಷ ಸುಮಾರು 300 ಜನರು ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದಾರೆ. ಆದಾಗ್ಯೂ, ಇನ್ನೂ ಅನೇಕರಿಗೆ ಕಿಡ್ನಿ ಲಭ್ಯವಾಗುತ್ತಿಲ್ಲ. ಸಾಂಕ್ರಾಮಿಕವಲ್ಲದ ಕಾಯಿಲೆಗಳ (NCDs) ಗಣನೀಯ ಏರಿಕೆಯೇ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಕಾರಣ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ಇತರ ಅಂಗಗಳಿಗಾಗಿ ಕಾಯುತ್ತಿರುವ ನೋಂದಾಯಿತ ರೋಗಿಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಯಕೃತ್ತಿಗೆ 698, ಹೃದಯಕ್ಕೆ 118 ಮತ್ತು ಶ್ವಾಸಕೋಶಕ್ಕೆ 44 ಮಂದಿ ಕಾಯುತ್ತಿದ್ದಾರೆ. 2025 ರಲ್ಲಿ, ಸುಮಾರು 150 ಜನರು ಮೂತ್ರಪಿಂಡಗಳನ್ನು ದಾನ ಮಾಡಿದ್ದಾರೆ. ಇದರಿಂದ 300 ಮಂದಿಗೆ ಪ್ರಯೋಜನವಾಗಿದೆ. 161 ಯಕೃತ್ತು ದಾನ, 49 ಹೃದಯಗಳು ಮತ್ತು 29 ಶ್ವಾಸಕೋಶಗಳನ್ನು ದಾನ ಮಾಡಲಾಗಿದೆ. ಪ್ರಸ್ತುತ, ಕಿಡ್ನಿ ಕಸಿಗಾಗಿ ಕಾಯುವ ಅವಧಿ ಎರಡರಿಂದ ಮೂರು ವರ್ಷಗಳಾಗಿವೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೆಚ್ಚಳ ಕಿಡ್ನಿ ಸ್ವೀಕರಿಸುವವರು ಮತ್ತು ದಾನಿಗಳ ಮೇಲೆ ಪರಿಣಾಮ ಬೀರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಬರುವ ‘ಜೀವಸಾರ್ಥಕತೆ’ ಅಥವಾ ‘ಕರ್ನಾಟಕ ಅಂಗಾಂಗ ಅಂಗಾಂಶ ಮತ್ತು ಕಸಿ ಸಂಸ್ಥೆ’ಯ ಯೋಜನಾ ಅಧಿಕಾರಿ ಡಾ. ಡಿಪಿ ಅರುಣ್ ಕುಮಾರ್ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೆಚ್ಚಳದಿಂದಾಗಿ ಮೂತ್ರಪಿಂಡಗಳಿಗೆ ಬೇಡಿಕೆ ಹೆಚ್ಚಾಗಿದೆ ಮತ್ತು ಕೆಲವು ದಾನಿಗಳು ಸಹ ಸಮಸ್ಯೆಯಿಂದ ಬಾಧಿತರಾಗಿದ್ದಾರೆ. ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಲ್ಲದಿದ್ದರೆ ಅಥವಾ ಮೂತ್ರಪಿಂಡವು ಈಗಾಗಲೇ ಸಮಸ್ಯೆಗೊಳಗಾಗಿದ್ದರೆ, ನಾವು ಅಂತಹ ದಾನಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವೈದ್ಯರ ಪ್ರಕಾರ ಈ ಪಾನೀಯ ಮದ್ಯಕ್ಕಿಂತ ಅಪಾಯಕಾರಿ! ಕುಡಿದರೆ ನಿಮ್ಮ ಕಿಡ್ನಿ ಡಮಾರ್

ದಾನಿಯ ಕಿಡ್ನಿ ಹೊಂದಾಣಿಯಾಗುತ್ತದೆಯೇ ಎಂಬುದನ್ನು ನಿರ್ಧರಿಸಲು, ರಕ್ತದ ಗುಂಪು ಮತ್ತು HLA (ಹ್ಯೂಮನ್ ಲ್ಯುಕೋಸೈಟ್ ಆ್ಯಂಟಿಜೆನ್) ಹೊಂದಾಣಿಕೆ ಕಡ್ಡಾಯವಾಗಿದೆ. ಪೋಷಕರು ಅಥವಾ ಒಡಹುಟ್ಟಿದವರು ದಾನ ಮಾಡದ ಹೊರತು, ಹ್ಯೂಮನ್ ಲ್ಯುಕೋಸೈಟ್ ಆ್ಯಂಟಿಜೆನ್ ಸಂಪೂರ್ಣವಾಗಿ ಹೊಂದಾಣಿಕೆಯಾಗುವುದಿಲ್ಲ ಎಂದು ಅರುಣ್ ಕುಮಾರ್ ಹೇಳಿರುವುದಾಗಿಯೂ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

ಯಾರಿಗೆ ಮೊದಲು ಕಿಡ್ನಿ ನೀಡಿಕೆ?

ರೋಗದ ತೀವ್ರತೆಯ ಆಧಾರದ ಮೇಲೆ ಕಿಡ್ನಿ ಸ್ವೀಕರಿಸುವವರಿಗೆ ಆದ್ಯತೆ ನೀಡಲಾಗುತ್ತದೆ. ಮೂತ್ರಪಿಂಡ ಕಸಿಗಳನ್ನು ನೋಂದಣಿಯ ಹಿರಿತನದ ಆಧಾರದ ಮೇಲೆ ಹಂಚಲಾಗುತ್ತದೆ. ಕಿಡ್ನಿ ಲಭ್ಯವಾಗುವವರೆಗೆ ಡಯಾಲಿಸಿಸ್ ರೋಗಿಗಳನ್ನು ಉಳಿಸಿಕೊಳ್ಳಬಹುದಾದ್ದರಿಂದ, ನಾವು ಹಿರಿತನವನ್ನು ಅನುಸರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ