Mekedatu project: ನೀವೇ ಬಗೆಹರಿಸಿಕೊಳ್ಳಿ: ಮೇಕೆದಾಟು ಬಗ್ಗೆ ಡಿಕೆ ಶಿವಕುಮಾರ್​ಗೆ ಮೋದಿ ಸಲಹೆ

|

Updated on: Aug 01, 2024 | 10:05 AM

ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು, ರಾಜ್ಯದ ಅನೇಕ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಜತೆಗೆ, ಮೇಕೆದಾಟು ಯೋಜನೆಯಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡಿದ್ದಾರೆ. ಅದಕ್ಕೆ ಪ್ರಧಾನಿ ಹೇಳಿದ್ದೇನೆಂಬ ವಿವರ ಇಲ್ಲಿದೆ.

Mekedatu project: ನೀವೇ ಬಗೆಹರಿಸಿಕೊಳ್ಳಿ: ಮೇಕೆದಾಟು ಬಗ್ಗೆ ಡಿಕೆ ಶಿವಕುಮಾರ್​ಗೆ ಮೋದಿ ಸಲಹೆ
ಡಿಕೆ ಶಿವಕುಮಾರ್, ಪ್ರಧಾನಿ ಮೋದಿ
Follow us on

ನವದೆಹಲಿ, ಆಗಸ್ಟ್ 1: ಮೇಕೆದಾಟು ಸಮಸ್ಯೆ ಬಗೆಹರಿಸಲು ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ಒಟ್ಟಾಗಿ ಕುಳಿತುಕೊಂಡು ಮಾತುಕತೆ ನಡೆಸಬೇಕು. ಆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಶಿವಕುಮಾರ್ ದೆಹಲಿಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿವಿಧ ಯೋಜನೆಗಳಿಗೆ ಕೇಂದ್ರದ ಅನುದಾನ ಕೋರಿ ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ.

ಸಭೆಯಿಂದ ಹೊರಬಂದ ಬಳಿಕ ಮಾತನಾಡಿದ ಶಿವಕುಮಾರ್, ನಾನು ಮೇಕೆದಾಟು ವಿಷಯವನ್ನು ಪ್ರಸ್ತಾಪಿಸಿದಾಗ, ಅದನ್ನು ನಮ್ಮಲ್ಲಿಯೇ ಬಗೆಹರಿಸಿಕೊಳ್ಳುವಂತೆ ಪ್ರಧಾನಿ ಸೂಚಿಸಿದರು ಎಂದಿದ್ದಾರೆ.

ನಿಗದಿತ ಅವಧಿಗಿಂತ ಜುಲೈನಲ್ಲಿ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಟ್ಟಿರುವ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಲಾಗಿದೆ. ಮೇಕೆದಾಟುವಿನಲ್ಲಿ ಜಲಾಶಯವನ್ನು ನಿರ್ಮಿಸಲು ಕರ್ನಾಟಕಕ್ಕೆ ಅವಕಾಶ ನೀಡುವಂತೆ ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದೆ. ಮೇಕೆದಾಟು ಜಲಾಶಯ ನಿರ್ಮಿಸಿದ್ದರೆ ಹೆಚ್ಚುವರಿ ನೀರು ಸಂಗ್ರಹವಾಗುತ್ತಿತ್ತು ಎಂಬುದನ್ನೂ ತಿಳಿಸಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ತಮಿಳುನಾಡಿಗೆ ಭರ್ಜರಿ 2.25 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಇದು ತಮಿಳುನಾಡಿಗೆ ಬಿಡುಗಡೆಯಾದ ಅತಿ ಹೆಚ್ಚು ಪ್ರಮಾಣದ ನೀರು ಎಂದು ಅವರು ಮಾಹಿತಿ ನೀಡಿದ್ದಾರೆ.

ಮಹದಾಯಿ ಯೋಜನೆಗೆ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದೂ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಅದನ್ನು ಕೈಗೆತ್ತಿಕೊಳ್ಳುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ.

ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ: ಡಿಕೆ ಶಿವಕುಮಾರ್

ಕೇಂದ್ರದ ಬೊಕ್ಕಸಕ್ಕೆ ಬೆಂಗಳೂರು ಎರಡನೇ ಅತಿ ಹೆಚ್ಚು ತೆರಿಗೆಯನ್ನು ನೀಡುತ್ತದೆ. ಆದರೆ ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿಗೆ ಏನೂ ಸಿಕ್ಕಿಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ರಾಜ್ಯವು ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಾಳ ಮತ್ತು ನೆಲಮಂಗಲದಲ್ಲಿ ಮೇಲ್ಸೇತುವೆಗಳ ನಿರ್ಮಾಣಕ್ಕೆ ಹಣವನ್ನು ಪಡೆದುಕೊಂಡಿತ್ತು ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಡಿಕೆ ಶಿವಕುಮಾರ್: ಏನೇನು ಚರ್ಚೆ ನಡೆಯಿತು? ಡಿಸಿಎಂ ಹೇಳಿದ್ದಿಷ್ಟು

‘ಗಿಫ್ಟ್​​ ಸಿಟಿ’ ಬಗ್ಗೆ ಮಾತನಾಡಿದ್ದಾಗ ಅದನ್ನು ನೀಡಲ್ಲ ಎಂದಿದ್ದರು. ದೇಶದಲ್ಲಿ ಒಂದೇ ಗಿಫ್ಟ್ ಸಿಟಿ ನಿರ್ಮಾಣಕ್ಕೆ ಅವಕಾಶವಿದೆ ಎಂದು ಅನುಮತಿ ನಿರಾಕರಿಸಿದ್ದರು. ಹೀಗಾಗಿ ಬೇರೆ ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡುವಂತೆ ಪ್ರಧಾನಿ ಬಳಿ ಮನವಿ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಡಿಸಿಎಂ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಬೆಂಗಳೂರಿನ ವಿವಿಧ ನಗರಾಭಿವೃದ್ಧಿ ಯೋಜನೆಗಳಿಗೆ ಕೇಂದ್ರದ ಅನುದಾನವನ್ನೂ ಕೋರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ