
ಕರ್ನಾಟಕ ಸರ್ಕಾರದ ಕೊಡಗು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಜಿಲ್ಲಾ ಆಯುಷ್ ಅಧಿಕಾರಿಗಳ ಕಾರ್ಯಾಲಯ (ಮಡಿಕೇರಿ) ರಾಷ್ಟ್ರೀಯ ಆಯುಷ್ ಅಭಿಯಾನ ಯೋಜನೆಯಡಿ ಕಾರ್ಯನಿರ್ವಹಿಸಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಯಸುವ ಕೊಡಗು ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಅರ್ಹ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಶ್ರೀಮಂಗಲದ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ 01 ಕಮ್ಯುನಿಟಿ ಹೆಲ್ತ್ ಆಫೀಸರ್ (CHO) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಬಿಎಎಂಎಸ್ (BAMS) ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ ವೇತನವಾಗಿ 25,000 ರೂ. ಸಂಚಿತ ವೇತನ ಹಾಗೂ 15,000ರೂ. ಪಿಎಲ್‌ಪಿ (PLP) ಸೇರಿದಂತೆ ಒಟ್ಟು 40,000ರೂ. ರವರೆಗೆ ಗೌರವಧನ ಲಭ್ಯವಿರುತ್ತದೆ. ಈ ಹುದ್ದೆಯು ಸಾಮಾನ್ಯ ಅಭ್ಯರ್ಥಿಗಳಿಗೆ ಮೀಸಲಾಗಿದೆ.
ಇದನ್ನೂ ಓದಿ: ಎಸ್‌ಬಿಐ ನೇಮಕಾತಿ: ವಾರ್ಷಿಕ 97 ಲಕ್ಷ ರೂ.ವರೆಗೆ ವೇತನ; 207 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ವಿರಾಜಪೇಟೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಖಾಲಿ ಇರುವ 01 ಮಲ್ಟಿಪರ್ಪಸ್ ವರ್ಕರ್ (Multipurpose Worker) ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗೆ ಕನಿಷ್ಠ 10ನೇ ತರಗತಿ (SSLC) ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಮಾಸಿಕ ಸಂಚಿತ ವೇತನವಾಗಿ 16,900ರೂ. ನಿಗದಿಪಡಿಸಲಾಗಿದೆ. ಈ ಹುದ್ದೆಯು ಸಾಮಾನ್ಯ ಅಭ್ಯರ್ಥಿ / ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ ಮೀಸಲಾಗಿರುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ (ವಿದ್ಯಾರ್ಹತೆ, ಮೀಸಲಾತಿ ಪ್ರಮಾಣಪತ್ರ ಇತ್ಯಾದಿ) ಮಡಿಕೇರಿಯ ಜಿಲ್ಲಾ ಆಯುಷ್ ಕಚೇರಿಗೆ ನೇರವಾಗಿ ಅಥವಾ ಅಂಚೆ ಮೂಲಕ ತಲುಪಿಸಬೇಕಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 12-10-2026 ಆಗಿದೆ. ಈ ನೇಮಕಾತಿಯು ರಾಷ್ಟ್ರೀಯ ಆಯುಷ್ ಅಭಿಯಾನದ ಸುತ್ತೋಲೆ ಮತ್ತು ಪ್ರಚಲಿತ ಮಾರ್ಗದರ್ಶನ ಸೂತ್ರಗಳಿಗೆ ಒಳಪಟ್ಟಿರುತ್ತದೆ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ