ಕಾಂಗ್ರೆಸ್-ಬಿಜೆಪಿ ಹಗ್ಗಜಗ್ಗಾಟ: ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ, ಇದು ಸರ್ಕಾರದ ಚಾಳಿ ಎಂದ ಡಿಕೆಶಿ

ನಾವು ಹೋರಾಟ ಮಾಡುವಾಗ ಮಾತ್ರ ಇವರು ನಿಷೇಧಾಜ್ಞೆ ಜಾರಿ ಮಾಡುತ್ತೇರೆ. ನಮ್ಮ ಮೇಲೆ ಕೇಸ್ ಹಾಕುವುದು ಸರ್ಕಾರದ ಒಂದು ಚಾಳಿ ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್-ಬಿಜೆಪಿ ಹಗ್ಗಜಗ್ಗಾಟ: ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ, ಇದು ಸರ್ಕಾರದ ಚಾಳಿ ಎಂದ ಡಿಕೆಶಿ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 23, 2022 | 12:19 PM

ಮಡಿಕೇರಿ: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ, ಮಾಂಸ ಸೇವಿಸಿದ ನಂತರ ಸಿದ್ದರಾಮಯ್ಯ ದೇಗುಲಕ್ಕೆ ಭೇಟಿ ನೀಡಿದ ವಿವಾದ ದೊಡ್ಡಮಟ್ಟದಲ್ಲಿ ಬೆಳೆದಿದ್ದು ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಹಲವು ಪ್ರಮುಖ ನಾಯಕರೇ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದು ವಿವಾದವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಆಗಸ್ಟ್​ 26ಕ್ಕೆ ಮಡಿಕೇರಿಯಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಜಿಲ್ಲಾ ಪೊಲೀಸರು ಅನುಮತಿ ನೀಡಿಲ್ಲ. ಪ್ರತಿಭಟನೆ ಆಯೋಜಿಸಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ನಾಲ್ಕು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಾಳೆ (ಆಗಸ್ಟ್ 24) ಮಧ್ಯರಾತ್ರಿಯಿಂದ ಆಗಸ್ಟ್​ 27ರ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಆದೇಶ ಹೊರಡಿಸಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿರುವ 4 ದಿನ ಯಾವುದೇ ಸಭೆ, ಸಮಾರಂಭ, ಮೆರವಣಿಗೆ, ಪ್ರತಿಭಟನೆ ಹಾಗೂ ಯಾವುದೇ ಱಲಿ ನಡೆಸುವಂತಿಲ್ಲ. ಪೂರ್ವನಿಯೋಜಿತ ಸರ್ಕಾರಿ, ಖಾಸಗಿ ಕಾರ್ಯಕ್ರಮಕ್ಕೆ ಅಡ್ಡಿಯಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಜಿಲ್ಲೆಯಲ್ಲಿ ನಾಳೆ ಮಧ್ಯರಾತ್ರಿಯಿಂದ ಆಗಸ್ಟ್​ 26ರ ಮಧ್ಯರಾತ್ರಿವರೆಗೂ ಮದ್ಯಮಾರಾಟವನ್ನೂ ನಿರ್ಬಂಧಿಸಲಾಗಿದೆ. ಆಗಸ್ಟ್​ 26ರಂದು ಮಡಿಕೇರಿ ಚಲೋಗೆ ವಿಪಕ್ಷ ಕಾಂಗ್ರೆಸ್‌ ಕರೆ ನೀಡಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಜನಜಾಗೃತಿ ಸಮಾವೇಶಕ್ಕೆ ಕರೆ ನೀಡಿದೆ.

ನಮಗೇನೂ ಭಯವಿಲ್ಲ: ಆರಗ ಜ್ಞಾನೇಂದ್ರ

ಕಾಂಗ್ರೆಸ್​​ ಪಕ್ಷದ ಕೊಡಗು ಚಲೋ ವಿಚಾರದಲ್ಲಿ ನನಗೆ ಯಾವ ಭಯವೂ ಇಲ್ಲ ಎಂದು ಕೋಲಾರ ಜಿಲ್ಲೆ ಕೆಜಿಎಫ್​ನಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ನೂತನ ಜಿಲ್ಲಾ ಮೀಸಲು ಪೊಲೀಸ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ನಮಗೆ ಜನರ ಶಾಂತಿ, ನೆಮ್ಮದಿ ಮುಖ್ಯ. ಹಾಗಾಗಿ ಸೆಕ್ಷನ್ 144 ಜಾರಿಗೊಳಿಸಿದ್ದೇವೆ. ಎರಡು ಪಕ್ಷಗಳ ಜಗಳದಿಂದಾಗಿ ಕೊಡಗಿನ ಶಾಂತಿ ಕದಡಬಾರದು. ಕೊಡಗು ಚಲೋ ಮಾಡಲು ಆಗುವುದಿಲ್ಲ. ಯಾವ ಪಕ್ಷಕ್ಕೂ ಅಲ್ಲಿ ಪ್ರತಿಭಟನೆ ಮಾಡಲು ಅವಕಾಶವಿಲ್ಲ ಎಂದು ಎಚ್ಚರಿಸಿದರು.

ಸಾವರ್ಕರ್ ಫೋಟೋ ಮುಸ್ಲಿಂ ಕೇರಿಯಲ್ಲಿ ಯಾಕೆ ಎಂದು ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಸಾರ್ವರ್ಕರ್ ಓರ್ವ ಗೌರವಾನ್ವಿತ ಸ್ವಾತಂತ್ರ್ಯ ಹೋರಾಟಗಾರ. ಬ್ರಿಟಿಷರ ಬೂಟ್ ನೆಕ್ಕಿದವನು ಅಂತ ಓರ್ವ ವ್ಯಕ್ತಿ ಶುರು ಮಾಡಿದ್ದಾನೆ. ಆಗಾಗಿ ಇಷ್ಟೊಂದು ಗಲಾಟೆ ಶುರುವಾಗಿದೆ. ಈಗ ಎಲ್ಲೆಡೆ ಶಾಂತಿ ಸುವ್ಯವಸ್ಥೆ ನೆಲೆಸಿದೆ ಎಂದು ಹೇಳಿದರು. ರಾಜ್ಯದಲ್ಲಿ ಗಣೇಶನ ಹಬ್ಬ ಶಾಂತಿಯುತವಾಗಿ ನಡೆಯಬೇಕು. ಸೂಕ್ಷ್ಮ ಪ್ರದೇಶಗಳಲ್ಲೂ ಗಣೇಶನ ಹಬ್ಬ ಮಾಡಲು ನಿರ್ಧಾರ ಮಾಡಿದ್ದೇವೆ. ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು. ನಾವು ಅಲ್ಲಿ ಭದ್ರತೆ ಕೊಡುತ್ತೇವೆ ಎಂದರು.

ನಿಷೇಧಾಜ್ಞೆಗೆ ಶಾಸಕ ಅಪ್ಪಚ್ಚು ರಂಜನ್ ವಿರೋಧ

ಕೊಡಗು ಜಿಲ್ಲೆಯಲ್ಲಿ 4 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸುವ ಜಿಲ್ಲಾಧಿಕಾರಿ ಆದೇಶವನ್ನು ನಾನು ಒಪ್ಪುವುದಿಲ್ಲ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದರು. ‘ಸರ್ಕಾರ ಯಾಕೆ ಹೀಗೆ ಮಾಡಿತೋ ಗೊತ್ತಿಲ್ಲ. ನಾವು ಎಲ್ಲದಕ್ಕೂ ರೆಡಿ ಇದ್ದೆವು. ನಿಷೇಧಾಜ್ಞೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡುತ್ತೇವೆ. ಸರ್ಕಾರ ನಮ್ಮದೇ ಇದೆ, ಹಾಗಾಗಿ ಸಿಎಂ ಬಳಿ ಮಾತಾಡುತ್ತೇನೆ. ನಮಗೆ ಕೊಡಗಿನಲ್ಲಿ ಅಪಾರ ಜನ ಬೆಂಬಲ ವ್ಯಕ್ತವಾಗಿದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಬಗ್ಗೆ ಕೊಡಗಿನವರಿಗೆ ಆಕ್ರೋಶವಿದೆ. ನಿಷೇಧಾಜ್ಞೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡುತ್ತೇನೆ. ಕಾಂಗ್ರೆಸ್​ನವರು ಹೊರಗಿನಿಂದ ಜನರನ್ನು ಕರೆಸಬೇಕು. ನಮಗೆ ಕೊಡಗಿನಲ್ಲೇ ಜನರಿದ್ದಾರೆ. ಕೊಡಗಿನ ಜನರು ಅಷ್ಟು ಸುಲಭದಲ್ಲಿ ಹೆದರುವವರಲ್ಲ. ಇಬ್ಬರು ಜನರಲ್​ಗಳು ಮತ್ತು 28 ಲೆಫ್ಟಿನೆಂಟ್ ಜನರಲ್​ಗಳನ್ನು ಕೊಟ್ಟ ಜಿಲ್ಲೆ ಇದು’ ಎಂದು ಪ್ರತಿಕ್ರಿಯಿಸಿದರು.

ಇದು ಸಿದ್ದರಾಮಯ್ಯ ಏಕಚಕ್ರಾಧಿಪತ್ಯವಲ್ಲ: ಬೋಪಯ್ಯ

ಜಿಲ್ಲಾಧಿಕಾರಿಗಳು ವಿಧಿಸಿರುವ ನಿಷೇಧಾಜ್ಞೆಯನ್ನು ಎಲ್ಲರೂ ಪಾಲಿಸಬೇಕಾಗುತ್ತದೆ ಎಂದು ವಿರಾಜಪೇಟೆ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ನಾವು ಸರ್ಕಾರದ ಭಾಗವಾದ್ದರಿಂದ ಈ ಆದೇಶಕ್ಕೆ ಮನ್ನಣೆ ನೀಡುತ್ತೇವೆ. ಆದರೆ ನಮ್ಮ ಜನಜಾಗೃತಿ ಕೆಲಸ‌ ಮುಂದುವರಿಯಲಿದೆ. ನಾವು 5 ತಂಡಗಳಾಗಿ ಜಿಲ್ಲೆಯ ಉದ್ದಗಲಕ್ಕೂ ಸಂಚರಿಸಿ, ಕರಪತ್ರ ಹಂಚಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದರು.

ನಮ್ಮದು ಸಿದ್ದರಾಮಯ್ಯನಂತೆ ಏಕ ಚಕ್ರಾಧಿಪತ್ಯವಲ್ಲ. ನಮಗೆ ಪಕ್ಷದಲ್ಲಿ ಹಿರಿಯರಿದ್ದಾರೆ. ಮುಂದಿನ ನಡೆ ಬಗ್ಗೆ ನಾವು ನಾಯಕರ ಜೊತೆ ಚರ್ಚಿಸ್ತೇವೆ. ಕಾನೂನು ಪಾಲಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ಕೊಡಗು ಜಿಲ್ಲೆಯಾದ್ಯಂತ 4 ದಿನ ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ‘ಮಡಿಕೇರಿ ಚಲೋ’ ಕುರಿತು ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಿ, ಇಂದು ಸಿದ್ದರಾಮಯ್ಯ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆಯಿದೆ. ಕೊಡಗು ನಾಯಕ, ಹಿರಿಯ ವಕೀಲ ಎ.ಎಸ್​.ಪೊನ್ನಣ್ಣ ಅವರನ್ನು ಸಿದ್ದರಾಮಯ್ಯ ಈ ಹಿನ್ನೆಲೆಯಲ್ಲಿ ಭೇಟಿಯಾದರ. ಕಾಂಗ್ರೆಸ್​​ನ ಮಡಿಕೇರಿ ಚಲೋ ರದ್ದಾಗುವ ಸಾಧ್ಯತೆಯಿದ್ದು, ಬೃಹತ್ ಪ್ರತಿಭಟನೆ ಬದಲು ಸಾಂಕೇತಿಕ ಪ್ರತಿಭಟನೆಗೆ ಚಿಂತನೆ ನಡೆಸಲಾಗುತ್ತಿದೆ.

ನಮ್ಮ ಮೇಲೆ ಕೇಸ್ ಹಾಕೋದು ಇವರ ಚಾಳಿ: ಡಿಕೆಶಿ

ಕೊಡಗು ಜಿಲ್ಲೆಯಾದ್ಯಂತ 4 ದಿನ ನಿಷೇಧಾಜ್ಞೆ ಜಾರಿ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾವು ಹೋರಾಟ ಮಾಡುವಾಗ ಮಾತ್ರ ಇವರು ನಿಷೇಧಾಜ್ಞೆ ಜಾರಿ ಮಾಡುತ್ತೇರೆ. ನಮ್ಮ ಮೇಲೆ ಕೇಸ್ ಹಾಕುವುದು ಸರ್ಕಾರದ ಒಂದು ಚಾಳಿ. ನಮ್ಮ ಶಾಸಕಾಂಗ ಪಕ್ಷದ ನಾಯಕರ ಜೊತೆ ಮಾತಾಡುತ್ತೇನೆ. ಬಿಜೆಪಿಯವರು ಏನು ಬೇಕಾದರೂ ಮಾಡಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಡಿಕೇರಿಗೆ ಐಜಿಪಿ ಭೇಟಿ

ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಮಡಿಕೇರಿಗೆ ದಕ್ಷಿಣ ವಲಯ ಐಜಿಪಿ ಮಧುಕರ್ ಪವಾರ್ ಭೇಟಿ ನೀಡಿ ಎಸ್​ಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದರು. ಜಿಲ್ಲೆಯ ಕಾನೂನು ಸುವ್ಯವಸ್ಥೆ, ಭದ್ರತೆ ಕುರಿತು ಸಮಾಲೋಚನೆ ನಡೆಸಿದರು.

ಕೊಡಗು ಜಿಲ್ಲೆಯಲ್ಲಿ ಯಾವುದೇ ಪ್ರತಿಭಟನೆಗಳಿಗೆ ಅವಕಾಶವಿಲ್ಲ. ಚೆಕ್​ಪೋಸ್ಟ್​ಗಳಲ್ಲಿ ಸೂಕ್ತ ತಪಾಸಣೆ, ಭದ್ರತೆ ನೀಡುತ್ತೇವೆ. ಜಿಲ್ಲೆಯ ಗಡಿಯಲ್ಲಿಯೂ ಪ್ರತಿಭಟನೆಗೆ ಅವಕಾಶ ಕೊಡುವುದಿಲ್ಲ. ಕೊಡಗಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜನರು ನೆರವಾಗಬೇಕು. ಕೇರಳದಿಂದ ಪಿಎಫ್​ಐ ಕಾರ್ಯಕರ್ತರನ್ನು ಕರೆತರುವ ಶಂಕೆ ಹಿನ್ನೆಲೆಯಲ್ಲಿ ಗಡಿಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುವುದು ಎಂದು ಹೇಳಿದರು.

ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

ಕೊಡಗು ಜಿಲ್ಲೆಯಾದ್ಯಂತ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ಶಾಲೆಗಳಿಗೆ ತೆರಳಲು ವಿದ್ಯಾರ್ಥಿಗಳ ಪರದಾಡಿದರು.