ಬರದಿಂದಾಗಿ ಈ ವರ್ಷ ಇಡೀ ನಾಡಿಗೆ ನಾಡೇ ತತ್ತರಿಸುತ್ತಿರೋದು ಎಲ್ಲರಿಗೂ ಗೊತ್ತಿರೊ ವಿಚಾರ. ಅದ್ರಲ್ಲೂ ಸದಾ ಮಳೆಯಿಂದ ತೊಯ್ದು ತೊಪ್ಪೆಯಾಗೋ ಕೊಡಗು ಜಿಲ್ಲೆಯಲ್ಲೂ ಬರದ ಛಾಯೆ ಆವರಿಸಿದೆ! ಹಾಗಾಗಿ ಜಿಲ್ಲೆಯ ಜಲಾಶಯಗಳು ಬತ್ತಿ ಬರಿದಾಗುತ್ತಿವೆ. ಇದೇ ಸಂದರ್ಭದಲ್ಲಿ ಜಲಾಶಯದ ಹಿನ್ನಿರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ಶಿವನ ದೇವಾಲಯವೊಂದು ಗೋಚರವಾಗಿದ್ದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.
ಒಂದ್ಕಡೆ ಬತ್ತಿ ಬರಿದಾಗಿರೋ ಜಲಾಶಯ. ಮತ್ತೊಂದ್ಕಡೆ ಬರಿದಾಗಿರೋ ಜಲಾಶಯದಲ್ಲಿ ತಲೆ ಎತ್ತಿ ನಿಂತಿರೋ ಪುರಾತನ ದೇವಾಲಯ.. ಇದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಚಿಕ್ಲಿಹೊಳೆ ಜಲಾಶಯದ ಹಿನ್ನೀರಿನಲ್ಲಿ ಕಂಡು ಬಂದಿರೋ ದೃಶ್ಯ. ಜಲಾಶಯ ನಿರ್ಮಾಣವಾಗಿದ್ದಾಗ ಹಿನ್ನೀರಲ್ಲಿ ಈ ಶಿವನ ದೇವಾಲಯ ಮುಳುಗಡೆಯಾಗಿತ್ತು. ಸುಮಾರು 50 ವರ್ಷಗಳ ಹಿಂದೆ ಈ ಜಲಾಶಯ ನಿರ್ಮಾಣವಾಗಿತ್ತು.
ಈ ಸಂದರ್ಭ ಈ ಊರಿನ ದೇವಲಾಯವಾಗಿದ್ದ ಇದು ಮುಳುಗಡೆಯಾಗಿತ್ತು. ಆದರೆ ಸಾಮಾನ್ಯವಾಗಿ ಬೇಸಗೆಯಲ್ಲಿ ಎಷ್ಟೋ ವರ್ಷಗಳಿಗೊಮ್ಮೆ ಮಾತ್ರ ಈ ದೇವಾಲಯ ಗೋಚರವಾಗುತ್ತಿತ್ತು. ಆದ್ರೆ ಈ ವರ್ಷ ಮಳೆಯ ತೀವ್ರ ಕೊರತೆಯಿಂದಾಗಿ ನವೆಂಬರ್ ತಿಂಗಳಿನಲ್ಲೇ ದೇವಾಲಯ ಗೋಚರವಾಗಿದೆ ಎಂದು ಗ್ರಾಮಸ್ಥ ರವಿ ಮಾಹಿತಿ ನೀಡಿದರು.
ಇದನ್ನೂ ಓದಿ: ಕೊಡಗು: ಆನಂದಪುರ ಗ್ರಾಮದ ಪುರಾತನ ಈಶ್ವರ ದೇವಸ್ಥಾನದ ಆವರಣದಲ್ಲಿ ನಿಧಿ ಪತ್ತೆ
ತಮ್ಮೂರಿನ ದೇವಸ್ಥಾನ ಎಷ್ಟೋ ವರ್ಷಗಳ ಬಳಿಕ ಗೋಚರವಾಗುತ್ತಿರುವುದು ಇಲ್ಲಿನ ಜನರ ಸಂತಸ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಹಾಗಾಗಿ ಜನರು ದೇವಸ್ಥಾನಕ್ಕೆ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ. ಗರ್ಭಗುಡಿ ಮುಖಮಂಟಪ ಮತ್ತು ಬಾವಿ ಇದ್ದು ಎಲ್ಲರನ್ನು ಆಕರ್ಷಿಸುತ್ತಿದೆ. ಒಂದು ಕಡೆ ಕುತೂಹಲವಾದ್ರೆ ಮತ್ತೊಂದ್ಕಡೆ ಇದು ಭೀಕರ ಬರಗಾಲದ ಸ್ಪಷ್ಟ ಮುನ್ಚೂಚನೆಯೂ ಆಗಿದೆ. ಏಕೆಂದರೆ ನವೆಂಬರ್ ತಿಂಗಳಿನಲ್ಲೇ ನದಿ ತೊರೆ ಜಲಾಶಯಗಳು ಬತ್ತಿ ಹೋಗಿದ್ದು ಇನ್ನು ಜನವರಿ ನಂತರದ ಪಾಡೇನು ಎಂದು ಸ್ಥಳೀಯರು ಆತಂಕಪಡುವಂತಾಗಿದೆ.
ಒಟ್ಟಾರೆ ಸಾರ್ವಜನಿಕರಿಗೆ ಒಂದು ಕಡೆ ದೇವಾಲಯ ಗೋಚರವಾಗಿರುವುದು ಖುಷಿ ಒಂದಾದರೆ ಮತ್ತೊಂದ್ಕಡೆ ಮುಂದಿನ ದಿನಗಳಲ್ಲಿ ಭೀಕರ ಬರ ಎದುರಿಸಬೇಕಲ್ಲ ಎಂಬ ಆತಂಕವೂ ಕಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ