ಕರ್ನಾಟಕದಲ್ಲಿ ಮತ್ತೊಂದು ಹುಲಿ ಹತ್ಯೆ: ಉರುಳು ಹಾಕಿದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ

ಕರ್ನಾಟಕದಲ್ಲಿ ಮತ್ತೊಂದು ಹುಲಿ ಹತ್ಯೆ ಆಗಿದೆ. ಕಾಡು ಹಂದಿ ಸೆರೆಗೆ ಹಾಕಲಾಗಿದ್ದ ಉರುಳಿಗೆ ಸಿಲುಕಿ ಹುಲಿ ಸಾವನ್ನಪ್ಪಿರಿವಂತಹ ಘಟನೆ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಸಮೀಪದ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಉರುಳಿಗೆ ಬಿದ್ದ ಸ್ಥಳ ಮತ್ತು ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ.

ಕರ್ನಾಟಕದಲ್ಲಿ ಮತ್ತೊಂದು ಹುಲಿ ಹತ್ಯೆ: ಉರುಳು ಹಾಕಿದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ
ಹುಲಿ ಸಾವು
Edited By:

Updated on: Dec 17, 2025 | 9:00 PM

ಕೊಡಗು, ಡಿಸೆಂಬರ್​ 17: ಕಾಡು ಹಂದಿ ಸೆರೆಗೆ ಹಾಕಲಾಗಿದ್ದ ಉರುಳು ರಾಷ್ಟ್ರ ಮೃಗದ ಪ್ರಾಣಕ್ಕೆ ಉರುಳಾಗಿದೆ. ಹಾಗಾಗಿ ಹುಲಿ (tiger) ಬೇಟೆ ಆಡಿದವನನ್ನ ಅರಣ್ಯ ಇಲಾಖೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ತೀವ್ರ ಶೋಧ ನಡೆಸಿದೆ. ಕೊಡಗು (Kodagu) ಜಿಲ್ಲೆಯಲ್ಲಿ ನಡೆದ ಹುಲಿ ಹತ್ಯೆ ಪ್ರಕರಣ ವನ್ಯಜೀವಿಗಳ ಸುರಕ್ಷತೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ರಾಷ್ಟ್ರ ಮೃಗ ದಾರುಣವಾಗಿ ಸಾವನ್ನಪ್ಪಿದೆ. ಕಾಡಲ್ಲಿ ಜಿಂಕೆ ಬೇಟೆ ಮಾಡಿ ಹೊಟ್ಟೆ ತುಂಬಾ ತಿಂದು ಮತ್ತೊಂದು ಕಾಡಿನತ್ತ ಹುಲಿ ಹೊರಟಿತ್ತು. ಆದರೆ ದುಷ್ಕರ್ಮಿಗಳು ಹಾಕಿದ ಉರುಳಿಗೆ ಹುಲಿ ಅನ್ಯಾಯವಾಗಿ ಪ್ರಾಣ ಬಿಟ್ಟಿದೆ. ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಸಮೀಪದ ಶ್ರೀಮಂಗಲ ಗ್ರಾಮದಲ್ಲಿ ಮಂಗಳವಾರ ಎಸ್ಟೇಟ್ ರಸ್ತೆ ಬದಿಯಲ್ಲಿ ಹುಲಿ ಹೆಣವಾಗಿ ಪತ್ತೆಯಾಗಿದೆ.

ಇದನ್ನೂ ಓದಿ: ಹುಲಿ ದಾಳಿ ಭೀತಿ: ಬಂಡೀಪುರ, ನಾಗರಹೊಳೆ ಸಫಾರಿಗೆ ತಾತ್ಕಾಲಿಕ ನಿಷೇಧ

ಎಲ್ಲೋ ಉರುಳಿಗೆ ಸಿಲುಕಿದ್ದ ಹುಲಿ ನರಳುತ್ತಾ ಇಲ್ಲಿಗೆ ಬಂದು ಪ್ರಾಣ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ನಾಗರಹೊಳೆಯಿಂದ ಸ್ಟೆಲ್ಲಾ ಹೆಸರಿನ ಸ್ನಿಪ್ಪರ್ ನಾಯಿಯನ್ನ ಕರೆತಂದು ಉರುಳು ಹಾಕಿದ ಸ್ಥಳ ಹುಡುಕಾಟಕ್ಕಾಗಿ ಕಾರ್ಯಾಚರಣೆ ನಡೆಸಲಾಗಿದೆ. ಎಸಿಎಫ್ ಗೋಪಾಲ್ ಸ್ಥಳದಲ್ಲೇ ಬೀಡು ಬಿಟ್ಟು ಹುಲಿ ಉರುಳಿಗೆ ಬಿದ್ಧ ಸ್ಥಳವನ್ನ ಜಾಲಾಡಿದ್ದು, ಸಂಜೆಯಾದರೂ ಸ್ಥಳ ಪತ್ತೆಯಾಗದೆ ಕಾರ್ಯಚರಣೆಗೆ ಹಿನ್ನಡೆ ಉಂಟಾಗಿದೆ. ಉರುಳು ಹಾಕಿದ ಸ್ಥಳ ಪತ್ತೆಯಾದರೆ ಮಾತ್ರ ಉರುಳು ಹಾಕಿದ ದುಷ್ಕರ್ಮಿಗಳು ಪತ್ತೆಯಾಗುತ್ತಾರೆ.

ಇನ್ನು ಈ ಹುಲಿ ಇಲ್ಲಿಂದ ಆರು ಕಿಮಿ ದೂರವಿರುವ ಮೀನುಕೊಲ್ಲಿ ಅರಣ್ಯದಿಂದ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಏಳರಿಂದ ಎಂಟು ವಯಸ್ಸಿನ ಗಂಡು ಹುಲಿಗೆ ಇನ್ನೂ ಐಡಿ ಆಗಿರಲಿಲ್ಲ. ಹಾಗಾಗಿ ಇದು ಯಾವ ಅರಣ್ಯದ ಹುಲಿ ಎಂಬುದು ಖಚಿತವಾಗಿಲ್ಲ. ಬಹುಶಃ ಮೀನುಕೊಲ್ಲಿ ಅರಣ್ಯದಿಂದ ದುಬಾರೆ ಅರಣ್ಯಕ್ಕೆ ತೆರಳುತ್ತಿತ್ತು ಎನ್ನಲಾಗುತ್ತಿದೆ.

ಇದನ್ನೂ ಓದಿ: ಹುಲಿ ಹತ್ಯೆಯ ಪ್ರಮುಖ ಆರೋಪಿ ಅರೆಸ್ಟ್​; ಹಸು ಕೊಂದಿದ್ದಕ್ಕೆ ಸಿಟ್ಟಲ್ಲಿ ಹೀನ ಕೃತ್ಯ

ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ಅದರ ಹೊಟ್ಟೆಯಲ್ಲಿ ಜಿಂಕೆಯ ಹಸಿ ಮಾಂಸ ಪತ್ತೆಯಾಗಿದೆ. ಅಂದರೆ ಸಾಯುವ ಒಂದು ದಿನದ ಮೊದಲು ಅದು ಜಿಂಕೆ ಬೇಟೆಯಾಡಿದೆ. ಚೇರಳ ಶ್ರೀಮಂಗಲ ಗ್ರಾಮದ ಬೆಟ್ಟ ಪ್ರದೇಶ ಹುಲಿ ಕಾರಿಡಾರ್ ಅಂತ ಸ್ಥಳೀಯರು ಹೇಳ್ತಾರೆ. ಕಳೆದ 10 ದಿನಗಳಿಂದ ಈ ಹುಲಿ ಇಲ್ಲೇ ಅಡ್ಡಾಡುತ್ತಿದ್ದು, ಇದರ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನಿಡಲಾಗಿತ್ತು. ಆದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ರಾಜ್ಯದಲ್ಲಿ ಸಾಲು ಸಾಲು ಹುಲಿಗಳು ಸಾವನ್ನಪ್ಪುತ್ತಿರುವುದು ಪ್ರಾಣಿ ಪ್ರಿಯರಲ್ಲಿ ಆತಂಕ ಹೆಚ್ಚಿಸಿದೆ, ರಾಷ್ಟ್ರ ಮೃಗದ ರಕ್ಷಣಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.