ಕೊಡಗು: ಶಾಲೆಯ ಹಿಂಬದಿ ಬೆಟ್ಟ ಕುಸಿಯುವ ಆತಂಕ, ಭಯದಲ್ಲಿಯೇ ಪಾಠ ಕೇಳುತ್ತಿರುವ ಕೊಯನಾಡು ಸರ್ಕಾರಿ ಶಾಲೆಯ ಮಕ್ಕಳು
ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪದಲ್ಲಿ ಬಹಳಷ್ಟು ಆಸ್ತಿಗಳಿಗೆ ಹಾನಿಯಾಗಿವೆ. ಅದರಲ್ಲಿ ಶಾಲಾ ಕಾಲೇಜು ಕಟ್ಟಡಗಳಿಗೂ ಗಂಭೀರ ಹಾನಿಯಾಗಿವೆ. ಮಳೆ ಇಲ್ಲದಿದ್ದಾಗ ಎಲ್ಲರೂ ನೆಮ್ಮದಿಯಿಂದ ಪಾಠ ಕೇಳುತ್ತಾರೆ. ಆದರೆ ಮಳೆಗಾಲ ಬಂದಾಗ ಮಾತ್ರ ಜೀವ ಬಾಯಿಗೆ ಬರುತ್ತದೆ. ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
ಕೊಡಗು: ಅಲ್ಲಲ್ಲಿ ಬಿರುಕು ಬಿಟ್ಟು ಕುಸಿಯಲು ಸಿದ್ಧವಾಗಿ ನಿಂತಿರುವ ಶಾಲಾ ಕಟ್ಟಡ. ಅದೇ ಕಟ್ಟಡದ ಮತ್ತೊಂದು ಪಾರ್ಶ್ವ ಭೂ ಕುಸಿತದಲ್ಲಿ ಘಾಸಿಗೊಂಡಿರುವ ಬೃಹತ್ ದಿಣ್ಣೆ, ಇಂತಹ ವಾತಾವರಣದಲ್ಲಿ ವಿದ್ಯಾರ್ಥಿಗಳು ಪಾಠವನ್ನ ಕೇಳುವಂತಾಗಿದೆ. ಹೌದು ಜಿಲ್ಲೆಯ ಮಡಿಕೇರಿ ತಾಲೂಕಿನ ಕೊಯನಾಡು ಗ್ರಾಮದ ಸರ್ಕಾರಿ ಶಾಲೆಯ ದುಸ್ಥಿತಿಯಿದು. 2022ರಲ್ಲಿ ಭೂ ಕುಸಿತ ಸಂಭವಿಸಿ ಶಾಲಾ ಕಟ್ಟಡಕ್ಕೆ ಭಾರೀ ಹಾನಿಯಾಗಿದೆ. ಆ ಸಂದರ್ಭ ಶಾಲೆಯನ್ನ ಮೂರು ತಿಂಗಳು ಕಾಲ ಬೇರೆ ಸ್ಥಳದಲ್ಲಿ ನಡೆಸಲಾಗಿತ್ತು. ಮಳೆ ಕಡಿಮೆಯಾದ ಬಳಿಕ ಇದೀಗ ಮರಳಿ ಅಲ್ಲಿಯೇ ತರಗತಿ ಮಾಡಲಾಗುತ್ತಿದೆ. ಶಾಲೆಯ ಹಿಂಬದಿ ಭೂ ಕುಸಿತದಲ್ಲಿ ಕೊಚ್ಚಿ ಬಂದ ಈ ಮಣ್ಣಿನ ರಾಶಿಯನ್ನ ಈಗಾಗಲೇ ತೆರವು ಮಾಡಲಾಗುತ್ತಿದೆ. ಆದರೂ ಶಾಲೆಯ ಹಿಂಬದಿ ಬೆಟ್ಟ ಮಳೆಗಾಲದಲ್ಲಿ ಮತ್ತೆ ಕೊಚ್ಚಿ ಬಂದರೆ ಏನು ಗತಿ ಎಂದು ಪೋಷಕರು ಚಿಂತೆಗೀಡಾಗಿದ್ದಾರೆ. ಹಾಗಾಗಿ ಮಕ್ಕಳು ಪ್ರಾಣ ಭಯದಲ್ಲೇ ಪಾಠ ಕೇಳುವಂತಾಗಿದೆ.
ಇನ್ನು ಶಾಲೆಯನ್ನ ಸುಧಾರಿಸುವಂತೆ ಶಾಲಾಭಿವೃದ್ಧಿ ಸಮಿತಿ ಈಗಾಗಲೇ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಗೆ ಬಹಳಷ್ಟು ಬಾರಿ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿರುವ ಶಿಕ್ಷಣ ಇಲಾಖೆ ಹೆಚ್ಚುವರಿಯಾಗಿ ಒಂದು ಕಟ್ಟಡ ಕಟ್ಟಿದೆ. ಮತ್ತೊಂದು ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಅನುಮತಿ ನೀಡಿದೆ. ಆದರೆ ಡ್ಯಾಮೇಜ್ ಆಗಿರುವ ಕಟ್ಟಡವನ್ನ ದುರಸ್ಥಿ ಮಾಡಿ, ಶಾಲೆಯ ಹಿಂಬದಿ ತಡೆ ಗೋಡೆ ಯಾಕೆ ಕಟ್ಟಿಲ್ಲ ಎಂಬುದು ಜನರ ಪ್ರಶ್ನೆ. ಯಾಕಂದರೆ ಈಗ ತಡೆಗೋಡೆ ಕಟ್ಟಲಿಲ್ಲವೆಂದರೆ ಮುಂದಿನ ಮಳೆಗಾಲದಲ್ಲಿ ಮತ್ತಷ್ಟು ಅನಾಹುತ ಕಟ್ಟಿಟ್ಟ ಬುತ್ತಿ ಎಂಬುದು ಇವರ ಆತಂಕವಾಗಿದೆ.
ಇದನ್ನೂ ಓದಿ:ಮಡಿಕೇರಿ: ಸಾಲದ ಚೆಕ್ ನೀಡಲು ಲಂಚ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಶಾಸಕ ಕೆ.ಜಿ ಬೋಪಯ್ಯ, ಸಧ್ಯದ ವಾತಾವರಣದಲ್ಲಿ ಶಾಲೆ ಸುರಕ್ಷಿತವಾಗಿಲ್ಲ. ಹಾಗಾಗಿ ಅಲ್ಲಿ ಶಾಲೆ ಮುಂದುವರಿಸುವುದು ಸೂಕ್ತ ಅಲ್ಲ. ಶಾಲೆಯನ್ನ ದುರಸ್ಥಿ ಬದಲು ಹೊಸ ಕಟ್ಟಡ ಕಟ್ಟಲಾಗುವುದು ಎಂದು ಹೇಳಿದ್ದಾರೆ. ಒಟ್ಟಾರೆ ಇವರೆಲ್ಲರ ಭಿನ್ನಾಭಿಪ್ರಾಯದ ಮಧ್ಯೆ ಮಕ್ಕಳು ಮಾತ್ರ ಅತಂತ್ರವಾಗಿ ಆತಂಕದಿಂದಲೇ ಪಾಠ ಕೇಳುವಂತಾಗಿದೆ.
ವರದಿ: ಗೋಪಾಲ್ ಸೋಮಯ್ಯ ಟಿವಿ9 ಕೊಡಗು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:24 am, Sun, 26 March 23