
ಕೊಡಗು, ಡಿಸೆಂಬರ್ 09: ಸರ್ಕಾರಿ ಇಲಾಖೆಗಳು ಇಲ್ಲ ಎಂದರೆ ಜನರ ದೈನಂದಿನ ಜೀವನ ನಡೆಯೋದೇ ಇಲ್ಲ. ಸರ್ಕಾರಿ ಇಲಾಖೆಗಳು ಅಷ್ಟೊಂದು ಅನಿವಾರ್ಯವಾಗಿ ಹೋಗಿವೆ. ಆದ್ರೆ ಕೊಡಗು ಜಿಲ್ಲೆಯ ಸರ್ಕಾರಿ ಇಲಾಖೆಗಳ ಕಚೇರಿಗಳು ನೌಕರರಿಲ್ಲದೆ ಭಣಗುಟ್ಟುತ್ತಿವೆ. ಕೆಲ ಕಚೇರಿಗಲಲ್ಲಿ ಒಂದೆರಡಲ್ಲ ಬರೋಬ್ಬರಿ ಶೇಕಡಾ 80ರಷ್ಟು ನೌಕರರ ಕೊರತೆ ಇದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಇರುವ ಅಧಿಕಾರಿಗಳ ತಲೆ ಮೇಲೂ ಹೆಚ್ಚುವರಿ ಭಾರ ಬಿದ್ದಿದೆ.
ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳಿಗೆ ಸೇರಿ ಹಿಂದುಳಿದ ವರ್ಗಗಳ ಇಲಾಖೆಗೆ ಒಟ್ಟು 259 ಸರ್ಕಾರಿ ನೌಕರರು ಬೇಕು. ಆದ್ರೆ ಇರುವುದು ಕೇವಲ 72 ಮಾತ್ರ. ಉಳಿದ 187 ಹುದ್ದೆಗಳಿಗೆ ನೇಮಕವಾಗಿಲ್ಲ. ಅಂದ್ರೆ ಶೇಕಡಾ 80ರಷ್ಟು ಹುದ್ದೆಗಳು ಖಾಲಿ ಬಿದ್ದಿವೆ. ಜಿಲ್ಲೆಯಲ್ಲಿ 42 ಹಿಂದುಳಿದ ವರ್ಗಗಳ ಹಾಸ್ಟೆಟ್ ಇದ್ದು 42 ವಾರ್ಡನ್ಗಳಿರಬೇಕು. ಆದ್ರೆ ಲಭ್ಯ ಇರೋದು ಕೇವಲ 8 ವಾರ್ಡನ್ಗಳು. ಹಾಗಾಗಿ ಕಚೇರಿಯಲ್ಲಿ ಕೆಲಸದಲ್ಲಿರುವ ಎಫ್ಡಿಸಿ, ಎಸ್ಡಿಸಿ ನೌಕರರಿಗೆ ಒಬ್ಬೊಬ್ಬರಿಗೆ ನಾಲ್ಕೈದು ಹಾಸ್ಟೆಲ್ಗಳ ಜವಾಬ್ದಾರಿ ಹಂಚಲಾಗಿದೆ. ಹಾಗಾಗಿ ಹಗಲಿಡಿ ಕಚೇರಿಯಲ್ಲಿ ದುಡಿಯುವ ನೌಕರರು ಸಂಜೆ ಬಳಿಕ ವಿವಿಧ ಹಾಸ್ಟೆಲ್ಗಳಲ್ಲಿ ದುಡಿಯಬೇಕು ಎನ್ನುವ ಸ್ಥಿತಿ ಉದ್ಭವಿಸಿದೆ. ಇದರಿಂದ ಮನೆ ಮತ್ತು ಸಂಸಾರಕ್ಕೆ ಸಮಯ ಕೊಡಲಾಗದೆ ನೌಕರರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
ಇದನ್ನೂ ಓದಿ: ಕೊಡಗಿನಲ್ಲೊಂದು ವಿಶೇಷ ಮ್ಯಾರಥಾನ್; ಶೂ ಇಲ್ಲದೇ ಓಡಿದ ನೂರಾರು ಮಂದಿ
ಇದು ಕೇವಲ ಹಿಂದುಳಿದ ವರ್ಗಗಳ ಇಲಾಖೆ ಸಮಸ್ಯೆಯಲ್ಲ. ಮಡಿಕೇರಿ ನಗರಸಭೆಯಲ್ಲೂ ಶೇಕಡಾ 80ರಷ್ಟು ಹುದ್ದೆಗಳು ಖಾಲಿ ಇವೆ. ಜಿಲ್ಲಾ ಪಂಚಾಯತ್, ಜಿಲ್ಲಾಧಿಕಾರಿ ಕಚೇರಿಯಲ್ಲೂ ಹುದ್ದೆಗಳು ಭರ್ತಿಯಾಗದ ಪರಿಣಾಮ, ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಯಾವುದೇ ಕೆಲಸ ಕಾರ್ಯಗಳಾಗುತ್ತಿಲ್ಲ. ಇನ್ನು, ಖಾಲಿ ಇರುವ ಈ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನ ನೇಮಕ ಮಾಡಿಕೊಳ್ಳುವಂತಿಲ್ಲ. ಅವರನ್ನ ಡಿ ಗ್ರೂಪ್ ಹುದ್ದೆಗಳಿಗೆ ಮಾತ್ರ ಆಯ್ಕೆ ಮಾಡಿಕೊಳ್ಳಬಹುದು. ಹಾಗಾಗಿ ಕೊಡಗಿನಲ್ಲಿ ಸರ್ಕಾರಿ ಉದ್ಯೋಗಗಳ ಅಲಭ್ಯತೆ ಗಂಭಿರ ಸಮಸ್ಯೆಯಾಗಿ ಪರಿಣಮಿಸಿದೆ.
ಸದ್ಯ ಈ ಹುದ್ದೆಗಳ ಭರ್ತಿಯಾಗದ ಹೊರತು ಇಲ್ಲಿನ ನೌಕರರಿಗೆ ನೆಮ್ಮದಿ ಇಲ್ಲ. ಅಲ್ಲದೆ ಜನ ಸಾಮಾನ್ಯರಿಗೂ ಸಾರ್ವಜನಿಕ ಸೇವೆಗಳು ನಿಗದಿತ ಸಮಯಕ್ಕೆ ಲಭ್ಯವಾಗುವುದಿಲ್ಲ. ಹೀಗಾಗಿ ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತು ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:40 pm, Tue, 9 December 25