
ಕೊಡಗು, ಜನವರಿ 30: ಊರಿನ ಜನರು ಶಾಲೆಗೆ ಉದಾರವಾಗಿ ನೀಡಿದ್ದ ಜಾಗದಲ್ಲಿ ಇದೀಗ ಅಕ್ರಮವಾಗಿ ಶಾದಿ ಮಹಲ್ (Shadi Mahal) ನಿರ್ಮಿಸುತ್ತಿರುವ ಆರೋಪ ಮಡಿಕೇರಿಯಲ್ಲಿ (Madikeri) ಕೇಳಿಬಂದಿದೆ. ಈ ವಿಚಾರ ಸದ್ಯ ಊರಿನ ಜನರ ನೆಮ್ಮದಿ ಕೆಡಿಸಿದೆ. ಶಾದಿ ಮಹಲ್ ಪರ-ವಿರೋಧ ಹೋರಾಟ ಜೋರಾಗಿದ್ದು, ಜಿಲ್ಲಾಧಿಕಾರಿ ಶಾದಿ ಮಹಲ್ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯ ಪರಂಬು ಎಂಬ ಗ್ರಾಮ ಇದೀಗ ವಿವಾದದ ಕೇಂದ್ರವಾಗಿದೆ. ಊರಿನಲ್ಲಿ ನಡೆಯುತ್ತಿರುವ ಕಾಮಗಾರಿಯೊಂದು ಭಾರೀ ವಿವಾದ ಸೃಷ್ಟಿಸಿದೆ. ಈ ಊರಿನಲ್ಲಿ ನಾಪೋಕ್ಲು ಪಟ್ಟಣ ಮುಸ್ಲಿಂ ಜಮಾಅತ್ನಿಂದ ದೊಡ್ಡದಾದ ಶಾದಿ ಮಹಲ್ ಕಾಮಗಾರಿ ನಡೆಯುತ್ತಿದೆ. ಕಳೆದ ತಿಂಗಳಷ್ಟೇ ಶಾಸಕ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದ್ದರು.
ಇದನ್ನೂ ಓದಿ: ಮನೆ ಹೆಸರಲ್ಲಿ ಮಸೀದಿ ನಿರ್ಮಾಣ: ರೊಚ್ಚಿಗೆದ್ದ ಹಿಂದೂ ಸಂಘಟನೆಗಳು
ಇದೀಗ ತಳಪಾಯ ಮುಗಿದು ಕಟ್ಟಡ ಕಾಮಗಾರಿ ಶುರು ಮಾಡುವಷ್ಟರಲ್ಲಿ ಈ ಜಾಗದ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಈ ಶಾದಿ ಮಹಲ್ ನಿರ್ಮಾಣವಾಗುತ್ತಿರುವ ಜಾಗ ಇದೇ ಊರಿನ ಕೆಪಿಎಸ್ ಶಾಲೆಗೆ ಸೇರಿದ್ದು ಎಂದು ಊರಿನ ಹಲವರು ತಗಾದೆ ತೆಗೆದಿದ್ದಾರೆ. ದಶಕಗಳ ಹಿಂದೆ ಶಾಲೆಗೆ ಉದಾರವಾಗಿ ನೀಡಿದ್ದ ಜಾಗವನ್ನ ಅತಿಕ್ರಮಿಸಿ ಶಾದಿ ಮಹಲ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಈಗಾಗಲೇ ಶಾಸಕ ಎಎಸ್ ಪೊನ್ನಣ್ಣ ಮತ್ತು ಜಿಲ್ಲಾಧಿಕಾರಿಗೆ ಅಂಬಿ ಕಾರ್ಯಪ್ಪ ಎಂಬುವವರು ದೂರು ನೀಡಿದ್ದಾರೆ.
ಊರಿನವರ ಆರೋಪವನ್ನ ನಾಪೋಕ್ಲು ಜಮಾಅತ್ ನಿರಾಕರಿಸಿದೆ. ಹತ್ತಾರು ವರ್ಷಗಳಿಂದ ಇದು ಜಮಾಅತ್ನದ್ದೇ ಆಗಿದ್ದು, ಪಕ್ಕಾ ದಾಖಲೆಗಳಿವೆ ಎಂದು ಪ್ರತಿಪಾದಿಸಿದೆ. ರಾಜಕೀಯಕ್ಕಾಗಿ ಬಿಜೆಪಿಯ ಕೆಲವರು ಈ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಕಳೆದ 30 ವರ್ಷಗಳಿಂದ ಈ ಊರಿನಲ್ಲಿ ಶಾದಿ ಮಹಲ್ ಇರಲಿಲ್ಲ. ಇದೀಗ ಶಾಸಕ ಪೊನ್ನಣ್ಣ ಅವರ ಪ್ರತ್ನದಿಂದ ಸರ್ಕಾರದಿಂದ 1 ಕೋಟಿ ರೂ ಬಿಡುಗಡೆಯಾಗಿದ್ದು ಶಾದಿ ಮಹಲ್ ನಿರ್ಮಾಣವಾಗುತ್ತಿದೆ. ಇದನ್ನ ಸಹಿಸದ ಕೆಲವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಭಾಗಿಗೆ ವಿರೋಧ: ಕೃಷಿ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಂಘದ ಪದಗ್ರಹಣ ರದ್ದು
ಸದ್ಯ ವಿವಾದ ಬೆನ್ನಲ್ಲೇ ಶಾಸಕ ಪೊನ್ನಣ್ಣ ಜಿಲ್ಲಾಡಳಿತಕ್ಕೆ ತಕ್ಷಣವೇ ಸರ್ವೆ ನಡೆಸಿ ಸತ್ಯಾಂಶ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತಾಧಿಕಾರಿ ಇದೀಗ ಸರ್ವೆ ಮಾಡಲು ಮುಂದಾಗಿದ್ದು, ಇದಾದ ಬಳಿಕವಷ್ಟೇ ಈ ಭೂಮಿ ಯಾರಿಗೆ ಸೇರಿದ್ದು ಎಂದು ತಿಳಿಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.