
ಮಡಿಕೇರಿ, ಆಗಸ್ಟ್ 1: ಮಡಿಕೇರಿ ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ (Madikeri Mangaluru National Highway) 2018ರ ವೇಳೆ ಭಾರೀ ಭೂಕುಸಿತ ಸಂಭವಿಸಿ ಸಂಚಾರವೇ ಬಂದ್ ಆಗಿತ್ತು. ಅದಾದ ಬಳಿಕ ನಾಲ್ಕೈದು ವರ್ಷ ಕಾಮಗಾರಿ ಮಾಡಿ ಮೂರು ಕೋಟಿ ರೂ. ವೆಚ್ಚದಲ್ಲಿ ಬೃಹತ್ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಆದರೆ, ಈ ತಡೆಗೋಡೆ ನಿರ್ಮಾಣವಾಗಿ ಒಂದು ಮಳೆಗಾಲ ಕಳೆಯುವುದರ ಒಳಗೆಯೇ ಬಿರುಕು ಬಿಟ್ಟು ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಾಗಿದೆ. ಮಡಿಕೇರಿ (Madikeri) ನಗರದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಈ ಹೆದ್ದಾರಿ ತಡೆಗೋಡೆ ಬಾಯ್ಬಿಟ್ಟು ಕುಳಿತಿದೆ. ಸುಮಾರು ನಾಲ್ಕು ಹಂತಗಳಲ್ಲಿ 80 ಮೀಟರ್ ಎತ್ತರದಲ್ಲಿ ಈ ತಡೆಗೋಡೆಯನ್ನು ಬಲಿಷ್ಠವಾಗಿ ಕಟ್ಟಲಾಗಿದೆ. ಆದರೆ, ನೀರು ಮತ್ತು ಮಣ್ಣಿನ ವಿಪರೀತ ಒತ್ತಡದಿಂದ ಈ ತಡೆಗೋಡೆ ಬಿರುಕು ಬಿಟ್ಟಿದೆ. ಸದ್ಯಕ್ಕೆ ಹೆದ್ದಾರಿಗೆ ಯಾವುದೇ ಅಪಾಯ ಇಲ್ಲ ಅಂತ ಜಿಲ್ಲಾಧಿಕಾರಿ ಹೇಳಿದ್ದಾರೆ.
ತಡೆಗೋಡೆಯ ಕೆಳಗೆ ಹಲವು ಮನೆಗಳಿದ್ದು ಎಲ್ಲಾ ಮನೆಗಳೂ ಅಪಾಯಕ್ಕೆ ಸಿಲುಕಿವೆ. ತಡೆಗೋಡೆ ಕುಸಿದು ಹೋದರೆ ಮನೆಗಳು ಮತ್ತು ಅವುಗಳಲ್ಲಿರುವ ನಿವಾಸಿಗಳೂ ಅಪಾಯಕ್ಕೆ ಸಿಲುಕಲಿದ್ದಾರೆ. ಹಾಗಾಗಿ ಈ ನಿವಾಸಿಗಳ ಸ್ಥಳಾಂತರ ಮಾಡುವಂತೆ ಸೂಚನೆ ನೀಡಲಾಗಿದೆ. ತಡೆಗೋಡೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ಗಳು ಸ್ಥಳ ಪರಿಶೀಲನೆ ಮಾಡಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ಸದ್ಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ನಿಯಂತ್ರಣ ಮಾಡಿದ್ದಾರೆ. ಇದರಿಂದ ಸಂಚಾರಕ್ಕೆ ಅಡಚಣೆ ಯಾಗಿದೆ.
ಇದನ್ನೂ ಓದಿ: ಕಾರ್ಮಿಕರಿಗೆ ಒತ್ತಡ ಹೇರಿ 10 ಗಂಟೆ ಕೆಲಸ ಮಾಡಿಸ್ಬೇಡಿ: ಕಂಪನಿಗಳಿಗೆ ಸರ್ಕಾರ ಖಡಕ್ ಎಚ್ಚರಿಕೆ
ಒಟ್ಟಿನಲ್ಲಿ ಈ ಹೆದ್ದಾರಿ ಸದ್ಯದ ಮಟ್ಟಿಗೆ ಟೈಂ ಬಾಂಬ್ನಂತಾಗಿದ್ದು, ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸಬಹುದು. 3 ಕೋಟಿ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿರುವ ಈ ತಡೆಗೋಡೆ ಒಂದು ಮಳೆಗಾಲ ಕಳೆಯುವದರೊಳಗೆಯೇ ಹೀಗೆ ಬಾಯ್ಬಿಟ್ಟು ನಿಂತಿರುವುದು ಕಾಮಗಾರಿ ಬಗ್ಗೆಯೂ ಅನುಮಾನ ಮೂಡವಂತಾಗಿದೆ.
Published On - 10:17 am, Fri, 1 August 25