ಮಡಿಕೇರಿ: ಹಣ ಅಂದ್ರೆ ಯಾರ ಕಿವಿ ನೆಟ್ಟಗಾಗೋದಿಲ್ಲ ಹೇಳಿ. ಹಣ ಕಂಡ್ರೆ ಹೆಣನೂ ಬಾಯ್ಬಿಡುತ್ತೆ ಅನ್ನೋ ಗಾದೆ ಮಾತೇ ಇದೆ. ಈಗೀಗ ಇದನ್ನೇ ಬಂಡವಾಳ ಮಾಡ್ಕೊಳ್ತಿರುವ ಕೆಲವರು ಜನರಿಗೆ ಸರಿಯಾಗೇ ಚಳ್ಳೆಹಣ್ಣು ತಿನ್ನಿಸ್ತಿದ್ದಾರೆ. ಜನ ಮರುಳೋ, ಜಾತ್ರೆ ಮರುಳೋ ಅನ್ನೋ ಜನರನ್ನ ನಂಬಿಸಿ ಮೋಸ ಮಾಡುತ್ತಿದ್ದಾರೆ. ಅಲ್ಲಿ ಆಗಿದ್ದು ಇದೆ.
ಶಶಿಕಾಂತ್, ಜಾನ್ಸನ್ ಮತ್ತೆ ಆ್ಯಂಟೋನಿ ಈ ಮೂವರೂ ಕೊಡಗು ಜಿಲ್ಲೆಯ ಕುಶಾಲನಗರದವ್ರು. ಮೈ ಬಗ್ಗಿಸಿ ದುಡಿದು ಜೀವನ ನಡೆಸೋ ವಯಸ್ಸಲ್ಲಿ ಕಂಡವ್ರ ಕಾಸಿಗೆ ಕಣ್ಣು ಹಾಕಿ ಈಗ ಕಂಬಿ ಹಿಂದೆ ಸೇರಿದ್ದಾರೆ. ಇವ್ರು ಆನ್ ಲೈನ್ ನಲ್ಲಿ ಹಣ ಡಬ್ಬಲ್ ಮಾಡ್ತೇವೆ ಅಂತ ನಂಬಿಸಿ ಸಾವಿರಾರು ಜನರಿಂದ ದುಡ್ಡು ಪೀಕುವುದನ್ನ ಕಾಯಕ ಮಾಡ್ಕೊಂಡಿದ್ರು.ಅದರಂತೆ ಪಕ್ಕಾ ಪ್ಲ್ಯಾನ್ ಮಾಡಿ ಮೋಸದ ಜಾಲಕ್ಕಿಳಿದು ಕೋಟಿ ಕೋಟಿ ಹಣ ದೋಚಿದ್ರು.
ಆನ್‌ಲೈನ್‌ನಲ್ಲಿ ಜನರನ್ನು ವಂಚಿದಸ್ಬೋದು ಅಂತ ತಲೆ ಓಡಿಸಿದ ಶಶಿಕಾಂತ್ ತನ್ನ ಸ್ನೇಹಿತರನ್ನ ಸೇರಿಸ್ಕೊಂಡು ಒಂದು ವೆಬ್ ಸೈಟ್ ಅನ್ನು ಕಳೆದ ಅಕ್ಟೋಬರ್‌ನಲ್ಲಿ ಆರಂಭಿಸಿದ್ದ. ಇದರಲ್ಲಿ ಹಣ ಹೂಡಿಕೆ ಮಾಡುವವರು ಇಲ್ಲಿನ ಸದಸ್ಯರಾಗ್ಬೇಕು. ಅದಕ್ಕಾಗಿ ಯೂಸರ್ ಐಡಿ, ಪಾಸ್ವರ್ಡ್, ಇ-ಪಿನ್ ಖರೀದಿ ಮಾಡ್ಬೇಕು. ಇದಕ್ಕಾಗಿ ಮೂರು ಸಾವಿರ ರೂ. ಅನ್ನು ಕಡ್ಡಾಯವಾಗಿ ಪಾವತಿಸ್ಬೇಕು ಅನ್ನೋದು ಇದರ ರೂಲ್ಸ್ ಆಗಿತ್ತು. ಹಾಗೇ ಹೂಡಿಕೆ ಮಾಡಿದ ಹಣ ಒಂದು ವಾರದಲ್ಲಿ ಡಬಲ್ ಆಗುತ್ತೆ ಅಂತ ಹೇಳಿ ಆರಂಭದಲ್ಲಿ ಒಂದಷ್ಟು ಜನರಿಗೆ ಡಬಲ್ ಹಣ ಹಾಕ್ತಾರೆ.
ಅತಿಯಾಸೆಗೆ ಬಿದ್ದ ಜನ ಬೇರೆ ಬೇರೆ ಹೆಸರಲ್ಲಿ ಐಡಿ ಕ್ರಿಯೇಟ್ ಮಾಡಿ ಹಣ ಹೂಡ್ತಾರೆ. ತಮ್ಮ ಸ್ನೇಹಿತರಿಗೂ ಹೇಳಿ ಖಾತೆ ಆರಂಭಿಸಿ ಹಣ ಹೂಡೋದಕ್ಕೆ ಹೇಳ್ತಾರೆ. 1 ತಿಂಗಳ ಅವಧಿಯಲ್ಲೇ ಸುಮಾರು ಮೂರು ಸಾವಿರ ಮಂದಿ ತಲಾ 3000 ರೂ. ಕೊಟ್ಟು ಖಾತೆ ತೆರದು ಹಣ ಹೂಡ್ತಾರೆ. ಆದ್ರೆ ಎರಡ್ಮೂರು ತಿಂಗಳು ಕಳೆದ್ರೂ ಹಣ ಬಾರದ ಹಿನ್ನೆಲೆ ಅನುಮಾನಗೊಂಡು ಪೊಲೀಸರಿಗೆ ದೂರು ಕೊಡ್ತಾರೆ.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಈ ಮೂವರನ್ನ ಬಂಧಿಸಿದ್ದು, ತಲೆಮರೆಸಿಕೊಂಡ ನಾಲ್ವರಿಗಾಗಿ ಬಲೆ ಬಿಸಿದ್ದಾರೆ. 15 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆಯಾಗಿದೆ ಅಂತ ಪೊಲೀಸ್ರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಒಟ್ನಲ್ಲಿ ಹಣ ಡಬ್ಬಲ್ ಆಗುತ್ತೆ ಅನ್ನೋ ಆಸೆ ಬಿದ್ದು ಸಾಕಷ್ಟು ಜನ ಹಣ ಕಳೆದು ಕೊಂಡಿದ್ದಾರೆ. ಈಗೀನ್ ಕಾಲದಲ್ಲಿ ಬೆವರು ಸುರಿಸಿ ದುಡಿದವನಿಗೇ ಸರಿಯಾಗಿ ಹಣ ಸಿಗಲ್ಲ. ಇನ್ನು ಯಾವನಾದ್ರೂ ಸುಖಾಸುಮ್ನೆ ಹಣ ಡಬ್ಬಲ್ ಮಾಡ್ತಾನಾ. ಜನರಿಗೆ ಅದ್ಯಾವಾಗ ಬುದ್ಧಿ ಬರುತ್ತೋ ದೇವರಿಗೆ ಗೊತ್ತು.
Published On - 3:04 pm, Wed, 4 March 20