ಕೊಡಗು: ಕಾವೇರಿ ಮಾತೆ (Kaveri Mathe) ಹಾಗೂ ಕೊಡವ ಮಹಿಳೆಯರ (Kodava Women) ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸರ ಕಾರ್ಯಚರಣೆಯಲ್ಲಿ ಆರೋಪಿ ದಿವಿನ್ ದೇವಯ್ಯ ಎಂಬುವವನು ಅರೆಸ್ಟ್ ಆಗಿದ್ದಾನೆ. ದಿವಿನ್ ದೇವಯ್ಯ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ನಿವಾಸಿ. ಈತ ಮುಸ್ಲಿಂ ಯುವಕನ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಕೊಡವ ಜನತೆಯ ಕುಲ ದೇವರಾಗಿರುವ ಕಾವೇರಿ ಮಾತೆ ಹಾಗೂ ಕೊಡವ ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ.
ಅವಹೇಳನಕಾರಿ ಪೋಸ್ಟ್ ವಿರುದ್ಧ ಹಲವು ಸಂಘಟನೆಗಳು ಇಂದು (ಜುಲೈ 18) ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದವು. ಆರೋಪಿ ಬಂಧನವಾಗಿರುವ ಹಿನ್ನೆಲೆ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ. ಆರೋಪಿ ಪತ್ತೆಗೆ ಕೊಡಗು ಪೊಲೀಸರು ಮುಂಬೈ ಪೊಲೀಸರ ನೆರವು ಪಡೆದಿದ್ದರು. ಮುಂಬೈ ಪೊಲೀಸರು ಕ್ಯಾಲಿಫೋರ್ನಿಯಾದಿಂದ ಖಾತೆ ವಿವರ ಪಡೆದಿದ್ದರು.
ಇದೊಂದು ದುರದೃಷ್ಟಕರ ಸಂಗತಿ. ಈ ಘಟನೆ ನಡೆಯಬಾರದಿತ್ತು. ಇದರಿಂದ ಬಹುಸಂಖ್ಯಾತ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ್ದನ್ನ ಪ್ರಚಾರ ಮಾಡುವವರು ಇದನ್ನು ಯೋಚಿಸಬೇಕು. ಈ ಘಟನೆ ಸಾಮಾಜಿಕ ಜಾಲತಾಣ ಬಳಸುವವರಿಗೆಲ್ಲರಿಗೂ ಒಂದು ಪಾಠವಾಗಲಿ ಎಂದು ಅಖಿಲ ಕೊಡವ ಸಮಾಜಗಳ ಒಕ್ಕೂಟ ಅಧ್ಯಕ್ಷ ಮಾತಂಡಮೊಣ್ಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಕೊಡಗು ಎಸ್ಪಿ ಮಾತನಾಡಿ, ಇತ್ತೀಚೆಗೆ ಸಾಮಾಜಿಕ ಜಾಲತಾಣವನ್ನು ತಮಾಷೆಗೆ, ದುರುದ್ದೇಶಕ್ಕೆ ಬಳಸುವುದು ಸಾಮಾನ್ಯವಾಗಿದೆ. ಈ ರೀತಿ ಮಾಡುವುದರಿಂದ ಸಮಾಜದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿಲ್ಲ. ಸಾಮಾಜಿಕ ಜಾಲತಾಣವನ್ನು ಸದುದ್ದೇಶಕ್ಕೆ ಬಳಸಿ ಎಂದರು.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಕ್ರಮ! ಎಂಡಿ ವಿರುದ್ಧ ಲೋಕಾಯುಕ್ತಕ್ಕೆ ದೂರು
Published On - 8:33 am, Mon, 18 July 22