ICSE Results 2022: ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ; ಬೆಂಗಳೂರಿನ 5 ವಿದ್ಯಾರ್ಥಿಗಳಿಗೆ 2ನೇ ರ‍್ಯಾಂಕ್
ಶೇ 99.8ರಷ್ಟು ಅಂಕ ಪಡೆದಿರುವ ನಾಲ್ವರು ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಹಂಚಿಕೊಂಡಿದ್ದಾರೆ. 34 ವಿದ್ಯಾರ್ಥಿಗಳು ಎರಡನೇ ರ‍್ಯಾಂಕ್ ಗಳಿಸಿದ್ದಾರೆ. ಈ ಪೈಕಿ ಐವರು ಬೆಂಗಳೂರಿನ ವಿದ್ಯಾರ್ಥಿಗಳು.
ದೆಹಲಿ: ಬಹುನಿರೀಕ್ಷಿತ ಐಸಿಎಸ್‌ಇ (Indian Certificate of Secondary Education – ICSE) ನಡೆಸಿದ್ದ 10ನೇ ತರಗತಿ ಪರೀಕ್ಷೆಗಳ ಫಲಿತಾಂಶವು ಭಾನುವಾರ (ಜುಲೈ 17) ಪ್ರಕಟವಾಗಿದೆ. ಶೇ 99.8ರಷ್ಟು ಅಂಕ ಪಡೆದಿರುವ ನಾಲ್ವರು ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಹಂಚಿಕೊಂಡಿದ್ದಾರೆ. 34 ವಿದ್ಯಾರ್ಥಿಗಳು ಎರಡನೇ ರ‍್ಯಾಂಕ್ ಗಳಿಸಿದ್ದಾರೆ. ಈ ವರ್ಷದ ಒಟ್ಟಾರೆ ಫಲಿತಾಂಶ ಶೇ 99.97ರಷ್ಟು ಬಂದಿದೆ. ಪ್ರತಿ ವರ್ಷದಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರ ಉತ್ತೀರ್ಣತೆಯ ಸರಾಸರಿ ಶೇ 99.98 ಇದ್ದರೆ, ಬಾಲಕರ ಉತ್ತೀರ್ಣತೆಯ ಸರಾಸರಿ ಶೇ 99.97ರಷ್ಟು ಇದೆ. ಈ ವರ್ಷ ಮೊದಲ ಮತ್ತು ಎರಡನೇ ಸೆಮಿಸ್ಟರ್ನ ಅಂಕಗಳಿಗೆ ಸಮಾನ ಪ್ರಾಮುಖ್ಯತೆ ನೀಡುವ ಮೂಲಕ ಅಂತಿಮ ಅಂಕಗಳನ್ನು ಲೆಕ್ಕಹಾಕಲಾಗಿದೆ.
ಪುಣೆಯ ಹರ್ಗುನ್ ಕೌರ್ ಮಥಾರು, ಕಾನ್ಪುರದ ಅನಿಕಾ ಗುಪ್ತಾ, ಉತ್ತರ ಪ್ರದೇಶ ಬಲರಾಂಪುರದ ಪುಷ್ಕರ್ ತ್ರಿಪಾಠಿ ಹಾಗೂ ಲಖನೌ ನಗರದ ಕನಿಷ್ಕಾ ಮಿತ್ತಲ್ ಮೊದಲ ರ‍್ಯಾಂಕ್ ಹಂಚಿಕೊಂಡಿದ್ದಾರೆ. ಈ ಬಾರಿ ಒಟ್ಟು 34 ವಿದ್ಯಾರ್ಥಿಗಳು ಎರಡನೇ ರ‍್ಯಾಂಕ್ ಹಂಚಿಕೊಂಡಿದ್ದು, ಶೇ 99.6ರಷ್ಟು ಅಂಕ ಗಳಿಸಿದ್ದಾರೆ. ಶೇ 99.4ರಷ್ಟು ಅಂಕ ಗಳಿಸಿರುವ 72 ವಿದ್ಯಾರ್ಥಿಗಳು ಮೂರನೇ ರ‍್ಯಾಂಕ್ ಪಡೆದಿದ್ದಾರೆ.
ಮಹತ್ವದ ಸಾಧನೆ ಮಾಡಿದ ಬೆಂಗಳೂರು ವಿದ್ಯಾರ್ಥಿಗಳು
ಅಖಿಲ ಭಾರತ ಮಟ್ಟದಲ್ಲಿ 5ನೇ ರ‍್ಯಾಂಕ್ ಪಡೆದ 34 ವಿದ್ಯಾರ್ಥಿಗಳ ಪೈಕಿ ಬೆಂಗಳೂರಿನ ಐವರು ಇದ್ದಾರೆ. ಇವರೆಲ್ಲರೂ ಇಂಗ್ಲಿಷ್ ಮತ್ತು ಇತರ ನಾಲ್ಕು ವಿಷಯಗಳಲ್ಲಿ ಒಟ್ಟು 498 ಅಂಕಗಳನ್ನು ಪಡೆದಿದ್ದಾರೆ. ಕರ್ನಾಟಕದ ಒಟ್ಟಾರೆ ಐಸಿಎಸ್‌ಇ ಫಲಿತಾಂಶವು ಶೇ 99.99 ಇದೆ. 23,293 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಎಂಇಎಸ್ ಕಿಶೋರ ಕೇಂದ್ರ ಪಬ್ಲಿಕ್ ಸ್ಕೂಲ್ನ ಬಿ.ಎನ್.ವಿಭೂತಿ, ನ್ಯೂ ಹೊರೈಜಾನ್ ಪಬ್ಲಿಕ್ ಸ್ಕೂಲ್ನ ಎಸ್.ಸಂಧ್ಯಾ, ಕ್ಲಾರೆನ್ಸ್ ಪಬ್ಲಿಕ್ ಸ್ಕೂಲ್ನ ರಾಹುಲ್ ದತ್ತಾ, ಟ್ರಿಯೊ ವರ್ಲ್ಡ್ ಸ್ಕೂಲ್ನ ಆದಿ ಕೃಷ್ಣ, ಬೆಥನಿ ಹೈಸ್ಕೂಲ್ನ ನಿಹಾರ ಮರಿಯಮ್ ಓಮನ್ ರಾಷ್ಟ್ರಮಟ್ಟದಲ್ಲಿ 2ನೇ ರ‍್ಯಾಂಕ್ ಪಡೆದಿದ್ದಾರೆ.
ಬೆಂಗಳೂರಿನ ನ್ಯೂ ಹೊರೈಜಾನ್ ಪಬ್ಲಿಕ್ ಶಾಲೆಯ ಎಸ್.ಸಂಧ್ಯಾ 498 (ಶೇ 99.60) ಅಂಕಪಡೆದು ಅಖಿಲ ಭಾರತ ಮಟ್ಟದಲ್ಲಿ 5ನೇ ರ‍್ಯಾಂಕ್ ಪಡೆದಿದ್ದಾರೆ. ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅವರು, ‘ನನ್ನ ನೋಟ್ಸ್ ನಾನೇ ಮಾಡಿಕೊಳ್ಳುತ್ತಿದ್ದೆ. ಅತಿಮುಖ್ಯ ಅಂಶಗಳನ್ನು ಪ್ರತ್ಯೇಕವಾಗಿ ಬರೆದುಕೊಂಡಿದ್ದೆ. ಇಂಗ್ಲಿಷ್ ಸಾಹಿತ್ಯ ನನಗೆ ದೊಡ್ಡ ಸವಾಲಾಗಿತ್ತು. ಆನ್ಲೈನ್ನಲ್ಲಿ ಕಥೆ ಪುಸ್ತಕಗಳನ್ನು ಓದುವ ಮೂಲಕ ನನ್ನ ಪದಸಂಪತ್ತು ಮತ್ತು ಬರಹದ ಕೌಶಲ ಸುಧಾರಿಸಿಕೊಂಡೆ. ನನಗೆ ಫಿಸಿಕ್ಸ್ ತುಂಬಾ ಇಷ್ಟ. ಮುಂದೆ ಫಿಸಿಕ್ಸ್ ಪ್ರೊಫೆಸರ್ ಆಗಬೇಕು ಎನ್ನುವ ಆಸೆಯಿದೆ’ ಎಂದರು.
ಫಲಿತಾಂಶ ಹೀಗೆ ನೋಡಿ
ಐಸಿಎಸ್‌ಇ ಪರೀಕ್ಷೆ ಫಲಿತಾಂಶ www.cisce.org ಮತ್ತು www.results.cisce.org ಜಾಲತಾಣಗಳಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳು ಈ ವೆಬ್ಸೈಟ್ಗೆ ಹೋಗುವ ಮೂಲಕ ಅಥವಾ ಎಸ್ಎಂಎಸ್ ಮೂಲಕವೂ ಫಲಿತಾಂಶ ಪಡೆಯಬಹುದು. ಅಂಕ ವಿವರಗಳನ್ನು ಶಾಲೆಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು. ಪ್ರಿನ್ಸಿಪಲ್ಗಳ ಲಾಗಿನ್ ಐಡಿ, ಪಾಸ್ವರ್ಡ್ ಬಳಸಿ ವಿವರ ಪಡೆಯಬಹುದಾಗಿದೆ ಎಂದೂ ಅವರು ಹೇಳಿದ್ದರು.
ಫಲಿತಾಂಶ ತಿಳಿಯುವ ವಿಧಾನ ಇಲ್ಲಿದೆ..
- ಮೊದಲು results.cisce.org ಗೆ ಭೇಟಿ ನೀಡಿ
- ಅಲ್ಲಿ ಕಾಣಿಸುವ Results 2022 ಲಿಂಕ್ ಮೇಲೆ ಕ್ಲಿಕ್ ಮಾಡಿ
- ICSE (Class X) ಎಂಬಲ್ಲಿ ಕ್ಲಿಕ್ ಮಾಡಿ
- ಅಲ್ಲಿ ನಿಮ್ಮ ತರಗತಿ, ಐಡಿ, ಇಂಡೆಕ್ಸ್ ನಂಬರ್ ಹಾಗೂ ಅಟೋ ಜನರೇಟೆಡ್ ಕೋಡ್ಗಳನ್ನು ನಮೂದಿಸಿ..ಸಬ್ಮಿಟ್ ಮಾಡಿದರೆ ಫಲಿತಾಂಶ ಕಾಣಿಸುತ್ತದೆ.
- ಮೊಬೈಲ್ಗೆ ಎಸ್ಎಂಎಸ್ ಮೂಲಕ ಫಲಿತಾಂಶ ಪಡೆದುಕೊಳ್ಳಲು ಈ ವಿಧಾನದಲ್ಲಿ 09248082883 ಸಂಖ್ಯೆಗೆ ಎಸ್ಎಂಎಸ್ ಮಾಡಿ. ICSE<Space><Unique Id>
Published On - 7:37 am, Mon, 18 July 22