ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪದ ಬಳಸಿ ಪೋಸ್ಟ್: ಯೂಥ್ ಕಾಂಗ್ರೆಸ್ ದೂರು
2023ರ ವಿಧಾನಸಭೆ ಚುನಾವಣೆ ನನ್ನ ಕೊನೆ ಚುನಾವಣೆ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ಹೇಳಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸುತ್ತೇನೆ ಎಂದಿದ್ದರು.
ಮೈಸೂರು: ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ (Derogatory) ಪದ ಬಳಸಿ ಪೋಸ್ಟ್ ಹಾಕಿದ ಗೋವಿಂದ ನಾಯಕ ಎಂಬುವವರ ವಿರುದ್ಧ ಯೂಥ್ ಕಾಂಗ್ರೆಸ್ ಹುಣಸೂರು ಪೊಲೀಸ್ ಠಾಣೆಗೆ ದೂರು ನೀಡಿದೆ. ಗೋವಿಂದ್ ನಾಯಕ ಹುಣಸೂರಿನ ಕಲ್ಕುಣಿಕೆಯ ನಿವಾಸಿ. ಇದೇ ನನ್ನ ಕೊನೆ ಚುನಾವಣೆ ಅಂತಾ ಸಿದ್ದರಾಮಯ್ಯ ಹೇಳಿದ್ದ, ಸಾಮಾಜಿಕ ಜಾಲತಾಣದಲ್ಲಿದ್ದ ಸಿದ್ದು ಹೇಳಿಕೆ ಬಗ್ಗೆ ಕಾಮೆಂಟ್ ಮಾಡಲಾಗಿದೆ. ಅವಹೇಳನಕಾರಿ ಹಾಗೂ ಶಾಂತಿ ಕದಡುವ ರೀತಿಯಲ್ಲಿ ಕಾಮೆಂಟ್ ಆರೋಪ ಮಾಡಲಾಗಿದ್ದು, ನೀನು ಎಲ್ಲೆ ನಿಂತರೂ ಸೋಲು. ನಿನ್ನಂತಹ ದುರಂಹಕಾರಿ ದೇಶದಲ್ಲಿ ಯಾರು ಇಲ್ಲ ಸಿದ್ರಾಮುಲ್ಲಾ ಅಂತ ಅವಹೇಳನಕಾರಿಯಲ್ಲಿ ಕಮೆಂಟ್ ಮಾಡಲಾಗಿದೆ ಎಂದು ದೂರಿನಲ್ಲಿ ಕಮೆಂಟ್ ಉಲ್ಲೇಖಿಸಿ ಯೂಥ್ ಕಾಂಗ್ರೆಸ್ ದೂರು ನೀಡಿದೆ.
ಇದನ್ನೂ ಓದಿ: ಸತ್ಯಕ್ಕೂ ಆರ್ಎಸ್ಎಸ್ಗೂ ದೂರ, ನಿಜ ಹೇಳಿದರೆ ಅವರಿಗೆ ಸಿಟ್ಟು ಬರುತ್ತೆ: ಸಿದ್ದರಾಮಯ್ಯ
2023ರ ವಿಧಾನಸಭೆ ಚುನಾವಣೆ ನನ್ನ ಕೊನೆ ಚುನಾವಣೆ:
2023ರ ವಿಧಾನಸಭೆ ಚುನಾವಣೆ ನನ್ನ ಕೊನೆ ಚುನಾವಣೆ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ಹೇಳಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸುತ್ತೇನೆ. ನಂತರ ಯಾವುದೇ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ. ರಾಜ್ಯಸಭೆ ಸೇರಿ ಯಾವುದೇ ಸದಸ್ಯತ್ವ ನೀಡಿದರೂ ಸ್ವೀಕರಿಸುವುದಿಲ್ಲ. 2023ರ ವಿಧಾನಸಭೆಯ ಚುನಾವಣೆಯಲ್ಲಿ ಬಾದಾಮಿ, ಕೊಪ್ಪಳ, ಕೋಲಾರ, ಹುಣಸೂರು ಮತ್ತು ವರುಣದಲ್ಲಿ ಸ್ಪರ್ಧಿಸಲು ಆಹ್ವಾನಿಸಿದ್ದಾರೆ ಎಂದು ಹೇಳಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದ್ದಾರೆ ಮತ್ತು ಗೆಲ್ಲಿಸಿದ್ದಾರೆ. ನಾನು ಸೋಲು, ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿದ್ದೇನೆ. ಸೋಲಿಸಿದ್ದಾರೆ ಅಂತಾ ವ್ಯಥೆ ಪಡಲ್ಲ, ಅಳಲು ಹೋಗುವುದಿಲ್ಲ. 2018ರ ಎಲೆಕ್ಷನ್‌ನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸೋತೆ. ಆಗ ಅನೇಕ ಬೂತ್ ಕಮಿಟಿಗಳಿರಲಿಲ್ಲ, ಅದರಿಂದ ನಾನು ಸೋತೆ.
ಬಾದಾಮಿ ಕ್ಷೇತ್ರಕ್ಕೆ ನಾನು ಎರಡೇ ದಿನ ಹೋಗಿದ್ದು, ಅಲ್ಲಿ ಗೆಲ್ಲಿಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏನೇ ಕೆಲಸ ಆಗಿದ್ದರೂ ನನ್ನಿಂದಲೆ. ಬೇರೆ ಯಾರೂ ಮಾಡಿಲ್ಲ, ಇದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ. ಮತದಾರರು ಕೆಲಸ ನೋಡಿ ಮತ ಹಾಕುವುದು ಕಡಿಮೆಯಾಗಿದೆ. ಮೈಸೂರಿಗೆ ನಾನು ಮಾಡಿದಷ್ಟು ಕೆಲಸ ಬೇರೆ ಯಾರೂ ಮಾಡಿಲ್ಲ. ಜಾತಿ, ದುಡ್ಡಿನ ಮೇಲೆ ಜನ ಮತ ಹಾಕುತ್ತಿದ್ದಾರೆ. ಮೈಸೂರು ನಗರಕ್ಕೆ ಕೋಟ್ಯಂತರ ರೂ. ಅನುದಾನ ಕೊಟ್ಟಿದ್ದೇನೆ. ಆದರೂ ಚಾಮುಂಡೇಶ್ವರಿ ಕ್ಷೇತ್ರದ ಜನರು ನನ್ನನ್ನು ಸೋಲಿಸಿದರು. ಹಿಂದೆ ಕಾಂಗ್ರೆಸ್ ಬಿ ಫಾರಂ ತಂದರೆ ಗೆಲ್ಲುತ್ತಿದ್ದರು. ಈಗ ಆ ರೀತಿ ಪರಿಸ್ಥಿತಿ ಇಲ್ಲ. ಚಾಮುಂಡೇಶ್ವರಿಯಲ್ಲಿ 5 ಸಲ ಗೆದ್ದಿದ್ದೇನೆ, 3 ಸಲ ಸೋತಿದ್ದೇನೆ. ನನಗೆ ಚಾಮುಂಡೇಶ್ವರಿ ಕ್ಷೇತ್ರದ ಮತದಾರರ ಮೇಲೆ ಕೋಪ ಇಲ್ಲ. ನನಗೆ ಪಕ್ಷದ ಕಾರ್ಯಕರ್ತರ ಮೇಲೆ ಕೋಪ ಇದೆ ಎಂದು ಹೇಳಿದ್ದಾರೆ.
Published On - 7:28 am, Mon, 18 July 22