2023ರ ವಿಧಾನಸಭೆ ಚುನಾವಣೆ ನನ್ನ ಕೊನೆ ಚುನಾವಣೆ: ವಿಪಕ್ಷ ನಾಯಕ ಸಿದ್ದರಾಮಯ್ಯ
2023ರ ವಿಧಾನಸಭೆ ಚುನಾವಣೆಯೇ ನನ್ನ ಕೊನೆ ಚುನಾವಣೆ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು: 2023ರ ವಿಧಾನಸಭೆ ಚುನಾವಣೆ ನನ್ನ ಕೊನೆ ಚುನಾವಣೆ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸುತ್ತೇನೆ. ನಂತರ ಯಾವುದೇ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ. ರಾಜ್ಯಸಭೆ ಸೇರಿ ಯಾವುದೇ ಸದಸ್ಯತ್ವ ನೀಡಿದರೂ ಸ್ವೀಕರಿಸುವುದಿಲ್ಲ. 2023ರ ವಿಧಾನಸಭೆಯ ಚುನಾವಣೆಯಲ್ಲಿ ಬಾದಾಮಿ, ಕೊಪ್ಪಳ, ಕೋಲಾರ, ಹುಣಸೂರು ಮತ್ತು ವರುಣದಲ್ಲಿ ಸ್ಪರ್ಧಿಸಲು ಆಹ್ವಾನಿಸಿದ್ದಾರೆ ಎಂದು ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದ್ದಾರೆ ಮತ್ತು ಗೆಲ್ಲಿಸಿದ್ದಾರೆ. ನಾನು ಸೋಲು, ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿದ್ದೇನೆ. ಸೋಲಿಸಿದ್ದಾರೆ ಅಂತಾ ವ್ಯಥೆ ಪಡಲ್ಲ, ಅಳಲು ಹೋಗುವುದಿಲ್ಲ. 2018ರ ಎಲೆಕ್ಷನ್‌ನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸೋತೆ. ಆಗ ಅನೇಕ ಬೂತ್ ಕಮಿಟಿಗಳಿರಲಿಲ್ಲ, ಅದರಿಂದ ನಾನು ಸೋತೆ.
ಬಾದಾಮಿ ಕ್ಷೇತ್ರಕ್ಕೆ ನಾನು ಎರಡೇ ದಿನ ಹೋಗಿದ್ದು, ಅಲ್ಲಿ ಗೆಲ್ಲಿಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏನೇ ಕೆಲಸ ಆಗಿದ್ದರೂ ನನ್ನಿಂದಲೆ. ಬೇರೆ ಯಾರೂ ಮಾಡಿಲ್ಲ, ಇದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ. ಮತದಾರರು ಕೆಲಸ ನೋಡಿ ಮತ ಹಾಕುವುದು ಕಡಿಮೆಯಾಗಿದೆ. ಮೈಸೂರಿಗೆ ನಾನು ಮಾಡಿದಷ್ಟು ಕೆಲಸ ಬೇರೆ ಯಾರೂ ಮಾಡಿಲ್ಲ. ಜಾತಿ, ದುಡ್ಡಿನ ಮೇಲೆ ಜನ ಮತ ಹಾಕುತ್ತಿದ್ದಾರೆ.
ಮೈಸೂರು ನಗರಕ್ಕೆ ಕೋಟ್ಯಂತರ ರೂ. ಅನುದಾನ ಕೊಟ್ಟಿದ್ದೇನೆ. ಆದರೂ ಚಾಮುಂಡೇಶ್ವರಿ ಕ್ಷೇತ್ರದ ಜನರು ನನ್ನನ್ನು ಸೋಲಿಸಿದರು. ಹಿಂದೆ ಕಾಂಗ್ರೆಸ್ ಬಿ ಫಾರಂ ತಂದರೆ ಗೆಲ್ಲುತ್ತಿದ್ದರು. ಈಗ ಆ ರೀತಿ ಪರಿಸ್ಥಿತಿ ಇಲ್ಲ. ಚಾಮುಂಡೇಶ್ವರಿಯಲ್ಲಿ 5 ಸಲ ಗೆದ್ದಿದ್ದೇನೆ, 3 ಸಲ ಸೋತಿದ್ದೇನೆ. ನನಗೆ ಚಾಮುಂಡೇಶ್ವರಿ ಕ್ಷೇತ್ರದ ಮತದಾರರ ಮೇಲೆ ಕೋಪ ಇಲ್ಲ. ನನಗೆ ಪಕ್ಷದ ಕಾರ್ಯಕರ್ತರ ಮೇಲೆ ಕೋಪ ಇದೆ ಎಂದು ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ 338 ಬೂತ್ ಆ್ಯಕ್ಟೀವ್ ಆಗಿರಬೇಕು. 1983ರಲ್ಲಿ ಮೊದಲು ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೆ. ಮರಿಗೌಡ 83ರಲ್ಲಿ ಇದ್ದ ಈಗಲೂ ಇದ್ದಾನೆ. ಆಗ ಹೇಗಿತ್ತು ಈಗ ಯಾವ ರೀತಿ ಇದೆ ನೋಡಿ. ಈಗ ಜಿ ಟಿ ದೇವೇಗೌಡ ಇದ್ದಾನೆ. ನಾನು 165 ಭರವಸೆ ನೀಡಿದ್ದೆ 158 ಭರವಸೆ ಈಡೇರಿಸಿದೆ. ಬೇರೆ ಯಾರ ಸರ್ಕಾರ ಯಾವ ಸಿಎಂ ಕೊಟ್ಟಿದ್ದರು ತೋರಿಸಲಿ ಎಂದು ಪ್ರಶ್ನಿಸಿದರು.
ಲಿಂಗಾಯತ ಧರ್ಮ ಒಡೆದ ಸಿದ್ದರಾಮಯ್ಯ ಮೇಜರ್ ಕಮಿಟಿ ವಿರೋಧಿ ಅಂತಾ ಬಿಂಬಿಸಿದರು. ನಮ್ಮವರೇ ಅಪಪ್ರಚಾರ ಮಾಡಿದರು. ರಾಮುಲು ಮೀಸಲಾತಿ ಬಗ್ಗೆ ರಕ್ತದಲ್ಲಿ ಬರೆದು ಕೊಡುತ್ತೇನೆ ಅಂದರು. ಸಚಿವ ಬಿ.ಶ್ರೀರಾಮುಲು ಎಸ್‌ಟಿಗೆ ಮೀಸಲಾತಿ ಕೊಡಿಸಿದರಾ? ವಾಲ್ಮೀಕಿ ಸ್ವಾಮಿಜಿ ಧರಣಿ ಕುಳಿತು 155 ದಿನ ಆಯ್ತು. ಏಕೆ ಎಲ್ಲರು ಸುಮ್ಮನೆ ಕುಳಿತಿದ್ದಾರೆ. ಶ್ರೀರಾಮುಲು ಡಿಸಿಎಂ ಆಗುತ್ತಾನೆ ಮೀಸಲಾತಿ ಕೊಡ್ತಾರೆ ಅಂದರು ಆಯ್ತಾ ? ಇದೆಲ್ಲವೂ ಸತ್ಯ ಆದರೆ ಏಕೆ ಎಲ್ಲಾ ಸುಮ್ಮನಿದ್ದೀರಾ ? ಎಂದರು.
ರಾಜ್ಯ ಉಳಿಸಬೇಕು ಬಿಜೆಪಿ ಕಪಿಮುಷ್ಠಿಯಿಂದ ಪಾರುಮಾಡಬೇಕು. ಭ್ರಷ್ಟಾಚಾರ ರಹಿತ ಸರ್ಕಾರಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನನಗೆ ಅಧಿಕಾರ ಬೇಕು ಅಂತಾ ಅಲ್ಲ. ಯಾವುದೇ ಕೆಲಸ ಜನರಿಗೆ ಆಗುತ್ತಿಲ್ಲ. ವಿಪಕ್ಷ ನಾಯಕನಾಗಿ ನನಗೆ ಒಂದು ಮನೆ ಕೊಡಿಸಲು ಆಗಿಲ್ಲ. ಕುಮಾರಸ್ವಾಮಿ ತಾಜ್ ಹೋಟೆಲ್‌ನಲ್ಲಿ ಕುಳಿತುಕೊಳ್ಳದೆ. ಮಂತ್ರಿಗಳ ಶಾಸಕರ ಮಾತು ಕೇಳಿದ್ದರೆ ಸಿಎಂ ಆಗಿಯೇ ಇರುತ್ತಿದ್ದರು ಎಂದು ನುಡಿದರು.
ಕುಮಾರಸ್ವಾಮಿ ಶಾಸಕರ ಮಾತು ಕೇಳಲಿಲ್ಲ. ಒಬ್ಬೊಬ್ಬ ಅಭ್ಯರ್ಥಿಗೆ 25 ರಿಂದ 30 ಕೋಟಿ ಚುನಾವಣೆಗೆ ಹಣ ನೀಡಿದರು. ಬಿ ಎಸ್ ಯಡಿಯೂರಪ್ಪ ನೀಡಿದರು. ಶಾಸಕರು ಶೇ 10 ಕೊಟ್ಟು ಅನುದಾನ ತರುತ್ತಿದ್ದಾರೆ. ನನ್ನ ಅವಧಿಯಲ್ಲಿ ಎನ್ ಓ ಸಿಗೆ ಹಣ ತೆಗೆದುಕೊಂಡಿದ್ದರೆ. ನನ್ನ ಅವಧಿಯಲ್ಲಿ ಈ ರೀತಿ ಆಗಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತಿದ್ದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರತಾಪಸಿಂಹ ಬರೀ ಸುಳ್ಳು ಹೇಳುತ್ತಾನೆ. ಬೆಂಗಳೂರು ಮೈಸೂರು ರಸ್ತೆ ನಾನು ಮಾಡಿಸಿದೆ ಅಂತಾನೆ. ನೀವು ಸುಮ್ಮನೆ ಇರುತ್ತೀರಾ ಪಾಪ ಆ ಲಕ್ಷ್ಮಣ ಮಾತ್ರ ಹೇಳುತ್ತಾನೆ. ಸುಳ್ಳು ಹೇಳಲು ಇತಿ ಮಿತಿ ಇರಬೇಕು. ಪ್ರತಾಪಸಿಂಹ ಮೈಸೂರು ನಗರಕ್ಕೆ ಏನು ಮಾಡಿದ್ದಾನೆ ಹೇಳಲಿ ? 8 ವರ್ಷದಲ್ಲಿ ಏನು ಮಾಡಿದ್ದಾನೆ ?ಬರೀ ಸುಳ್ಳು ಹೇಳುತ್ತಾನೆ. ಖಾಲಿ ಡಬ್ಬ ಹೊಡೆದು ಸದ್ದು ಮಾಡುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಚಾಮುಂಡೇಶ್ವರಿಯಿಂದ ನಾನು ಚುನಾವಣೆಗೆ ನಿಲ್ಲಲ್ಲ. ನಾನು ನಿಲ್ಲಲ್ಲ ನಿಮ್ಮ ತಲೆಯಿಂದ ತೆಗೆದು ಹಾಕಿ. ನಾನು ಚಾಮುಂಡೇಶ್ವರಿಯಿಂದ ಮತ್ತೆ ಸ್ಪರ್ಧೆ ಮಾಡಲ್ಲ ಎಂದು ಹೇಳಿದರು
Published On - 5:37 pm, Sun, 17 July 22