ಕೊಡಗು, ಜು.03: ಈ ಕೊಡಗು(Kodagu) ಜಿಲ್ಲೆಯೂ ಭೀಕರ ಪ್ರವಾಹ, ಭೂಕುಸಿತದಿಂದ ತತ್ತರಿಸಿತ್ತು. ಊರಿಗೆ ಊರೇ ಕೊಚ್ಚಿ ಹೋಗಿದ್ದವು. ಸೇತುವೆಗಳು ರಸ್ತೆಗಳು ಎಲ್ಲೆಂದರಲ್ಲಿ ನಾಶವಾಗಿದ್ದವು. ಇದಾದ ಬಳಿಕ ಈ ನಷ್ಟದಿಂದ ಹೊರ ಬರಲು ಸ್ಥಳೀಯ ಜನರು ಇಂದಿಗೂ ಹರ ಸಾಹಸ ಪಡುತ್ತಲೇ ಇದ್ದಾರೆ. ಇಂದಿಗೂ ಒಳ್ಳೆಯ ಸೇತುವೆ, ರಸ್ತೆ ಇಲ್ಲದ ಅದೆಷ್ಟೋ ಊರುಗಳಿವೆ. ಅದರಂತೆ ಸೋಮವಾರಪೇಟೆ ತಾಲ್ಲೂಕಿನ ಮುಕ್ಕೋಡ್ಲು ಗ್ರಾಮ ಕೂಡ ಅಂತಹದ್ದೇ ಒಂದು ನತದೃಷ್ಟ ಗ್ರಾಮ.
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು, ಹೆಮ್ಮತ್ತಾಳು, ಮೇಘತ್ತಾಳು ಅಟ್ಟಿಹೊಳೆ ಹಾಗೂ ತಂತಿಪಾಲ ಗ್ರಾಮಗಳನ್ನ ಸಂಪರ್ಕಿಸುವ ಏಕೈಕ ಸೇತುವೆ ಇದೆ. ಮಳೆಗಾಲ ಬಂದಾಗ ಅಟ್ಟಿಹೊಳೆ ನದಿ ಉಕ್ಕಿ ಹರಿದು ಈ ಸೇತುವೆ ಮುಳುಗಡೆಯಾಗುತ್ತದೆ. ಸುಮಾರು 20 ವರ್ಷದ ಹಿಂದೆ ನಿರ್ಮಾಣವಾಗಿದ್ದ ಈ ಸೇತುವೆ, ಇದೀಗ ದುಸ್ಥಿತಿಯಲ್ಲಿದೆ. ಸೇತುವೆಯ ಸ್ಲ್ಯಾಬ್ ಅಲ್ಲಲ್ಲಿ ಒಡೆದು ಶಿಥಿಲವಾಗಿದೆ. ಸೇತುವೆಯ ಎರಡೂ ಬದಿ ತಡೆಗೋಡೆಗಳೂ ಇಲ್ಲ. ಆದರೂ ಈ ಗ್ರಾಮದ ಜನತೆ ಇದೊಂದೇ ಸೇತುವೆಯನ್ನ ಅವಲಂಭಿಸಿದ್ದಾರೆ.
ಇದನ್ನೂ ಓದಿ:ಶೇ 100ರಷ್ಟು ಮತದಾನ: ನಗರ ಪ್ರದೇಶಗಳಿಗೆ ಮಾದರಿಯಾದ ಕರ್ನಾಟಕದ ಈ ಕುಗ್ರಾಮ
ಈ ಗ್ರಾಮಕ್ಕೆ 2 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಮಂಜೂರು ಮಾಡಲಾಗಿದೆ. ಕಾವೇರಿ ನೀರಾವರಿ ನಿಗಮ ಕಳೆದ ವರ್ಷ ಇಲ್ಲಿ ಸೇತುವೆ ಕೆಲಸವನ್ನೂ ಆರಂಭಿಸಿದೆ. ಜನರೂ ಖುಷಿ ಪಡುತ್ತಾರೆ. ಆದ್ರೆ, ಆ ಖುಷಿ ಇದೀಗ ತುಂಬಾ ದಿನ ಉಳಿದಿಲ್ಲ. ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಹಾಗಾಗಿ ಈ ವರ್ಷ ಮಳೆಗಾಲಕ್ಕೂ ಮೊದಲು ಸೇತುವೆ ನಿರ್ಮಾಣವಾಗುವ
ಸಾಧ್ಯತೆ ಇಲ್ಲ. ಹೀಗಾಗಿ ಇಲ್ಲಿನ ಜನರು ಈ ವರ್ಷವೂ ಪ್ರವಾಹದಲ್ಲಿ ಮುಳುಗುವುದು ಅನಿವಾರ್ಯವಾಗಿದೆ.
ಕಳೆದ ಐದು ವರ್ಷಗಳಿಂದ ಮಳೆಗಾಲದ ಮೂರು ತಿಂಗಳು ಈ ಗ್ರಾಮಸ್ಥರು ನರಕ ಪಡುತ್ತಾರೆ. ಶಾಲಾ-ಕಾಲೇಜು ಮಕ್ಕಳು ಜೀವ ಭಯದಲ್ಲೇ ಬದುಕುತ್ತಾರೆ. ಏನೇ ಆದ್ರೂ ಹೆಮ್ಮತ್ತಾಳು ಗ್ರಾಮ ಮಾತ್ರ ಸಧ್ಯ ಈ ವರ್ಷ ಪ್ರವಾಹದಿಂದ ಪಾರಾಗುವ ಅವಕಾಶ ಇಲ್ಲದಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ