ಫಲವತ್ತಾದ ಕೊಡುಗೆ ಕೊಡುವ ಕೊಡಗು ಅಬಕಾರಿ ಇಲಾಖೆಗೆ ಸೇರಿದ 2 ಕೋಟಿ ವೆಚ್ಚದ ಕಚೇರಿ 14 ವರ್ಷದಿಂದ ಪಾಳುಬಿದ್ದಿದೆ!
2004-05ರಲ್ಲಿ ಸರ್ಕಾರದಿಂದ ಜಿಲ್ಲೆಯ ಕೊಡಗು ಅಬಕಾರಿ ಇಲಾಖೆಗೆ ಅನುದಾನ ಮಂಜೂರಾಗಿತ್ತು. ಅದರಂತೆ 2 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಈ ಭವನ ನಿರ್ಮಾಣ ಮಾಡಿದೆ. ಆದ್ರೆ ಅನುದಾನದ ಕೊರತೆಯಿಂದಾಗಿ ಕಟ್ಟಡ ಕಾಮಗಾರಿ ಪೂರ್ಣವಾಗದೆ ಪಾಳು ಬಿದ್ದಿದೆ.
ಸರ್ಕಾರಕ್ಕೆ ಅತ್ಯಧಿಕ ಅಬಕಾರಿ ಆದಾಯ ನೀಡುವ ಜಿಲ್ಲೆಗಳಲ್ಲಿ ಕೊಡಗು ಜಿಲ್ಲೆಯೂ ಒಂದು. ಆದ್ರೆ ವೈಚಿತ್ರ್ಯ ಅಂದ್ರೆ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗೆ ಒಂದು ಸ್ವಂತ ಕಚೇರಿಯೇ ಇಲ್ಲ. 14 ವರ್ಷಗಳ ಹಿಂದೆ ನಿರ್ಮಾಣ ವಾಗಿರೋ 2 ಕೋಟಿ ರೂ ವೆಚ್ಚದ ಕಚೇರಿಯನ್ನ ಪಾಳು ಬಿಟ್ಟು ತಿಂಗಳಿಗೆ 86 ಸಾವಿರ ರೂ ಬಾಡಿಗೆ ಕಟ್ಟಡದಲ್ಲಿ ಕಚೇರಿ ನಿರ್ವಹಿಸುತ್ತಿರುವ ವಿಪರ್ಯಾಸ ಈ ಇಲಾಖೆಯದ್ದು. ನೋಡ್ಲಿಕ್ಕೆ ಎಷ್ಟೊಂದು ಬೃಹತ್ತಾದ ಮತ್ತು ವಿಶಾಲವಾದ ಕಟ್ಟಡ… ಕಟ್ಟಡದ ತುಂಬೆಲ್ಲಾ ಗಿಡಗಂಟಿಗಳು.. ತುಕ್ಕು ಹಿಡಿದಿರುವ ಬಾಗಿಲುಗಳು ಒಡೆದು ಹೋಗಿರುವ ಕಿಟಕಿ ಗ್ಲಾಸುಗಳು.. ಯಾವುದೋ ಪಾಳು ಬಿದ್ದ ಕಲ್ಯಾಣಮಂಟಪದಂತೆ ಕಾಣಿಸ್ತಾ ಇರೋ ಈ ಕಟ್ಟಡ ವಾಸ್ತವವಾಗಿ ಇದು ಕೊಡಗು ಜಿಲ್ಲೆಯ ಅಬಕಾರಿ ಭವನ!
2004-05ರಲ್ಲಿ ಸರ್ಕಾರದಿಂದ ಜಿಲ್ಲೆಗೆ ಅನುದಾನ ಮಂಜೂರಾಗಿತ್ತು. ಅದರಂತೆ ಒಟ್ಟು ಎರಡು ಕೋಟಿ ರೂ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಈ ಭವನ ನಿರ್ಮಾಣ ಮಾಡಿದೆ. ಆದ್ರೆ ಅನುದಾನದ ಕೊರತೆಯಿಂದಾಗಿ ಕಟ್ಟಡ ಕಾಮಗಾರಿ ಸಂಪೂರ್ಣವಾಗದೆ ಪಾಳು ಬಿದ್ದಿದೆ. ಕಟ್ಟಡದ ಒಳಗಡೆ ಮಳೆಗಾಲದಲ್ಲಿ ಸೋರುತ್ತದೆ. ಕಬ್ಬಿಣ ತುಕ್ಕು ಹಿಡಿದಿದೆ. ಗೋಡೆಗಳು ಶಿಥಿಲವಾಗಿದೆ. ಈ ಕಟ್ಟಡವನ್ನು ಸಂಪೂರ್ಣಗೊಳಿಸಲು ಏನಿಲ್ಲವೆಂದರೂ ಕನಿಷ್ಟ 5 ಕೋಟಿ ರೂ ಹೆಚ್ಚುವರಿಯಾಗಿ ಬೇಕಾಗಿದೆ. 2019ರಲ್ಲಿ ಈ ಬಗ್ಗೆ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
Also Read: ಶಾಂತಲಾ ಸಿಗ್ನಲ್ನಲ್ಲಿ 2 ಕೆಎಸ್ಆರ್ಟಿಸಿ ಬಸ್ಗಳ ಮೇಲೆ ದೊಣ್ಣೆಯಿಂದ ದಾಳಿ; ಇಬ್ಬರು ವಶ
ಮತ್ತೊಂದು ವಿಪರ್ಯಾಸದ ಸಂಗತಿ ಅಂದ್ರೆ ಪ್ರಸ್ತುತ ಜಿಲ್ಲಾ ಅಬಕಾರಿ ಇಲಾಖೆ ಮಾಸಿಕ 86 ಸಾವಿರ ರೂ ಬಾಡಿಗೆ ಪಾವತಿಸಿ ಖಾಸಗಿ ಕಟ್ಟಡದಲ್ಲಿ ಕಚೇರಿ ನಿರ್ವಹಿಸುತ್ತಿದೆ. ವಾರ್ಷಿಕ ಬಾಡಿಗೆ ವೆಚ್ಚವೇ ಒಂದು ಕೋಟಿ ರೂ ಆಗುತ್ತಿದೆ. ಒಂದೆಡೆ ಅಬಕಾರಿ ಭವನಕ್ಕೆ ಈಗಾಗಲೇ 2 ಕೋಟಿ ರೂ ಗೂ ಅಧಿಕ ತೆರಿಗೆ ಹಣ ಪೋಲಾಗಿದ್ದರೆ, ಇಲ್ಲಿ ಕಳೆದ 15 ವರ್ಷಗಳಿಂದ ವಾರ್ಷಿಕ ಒಂದು ಕೋಟಿ ರೂ ನಂತೆ 15 ಕೋಟಿ ರೂ ಗೂ ಅಧಿಕ ತೆರಿಗೆ ಹಣ ಪೋಲಾಗಿದೆ. ಇದಕ್ಕೆ ಸಾವರ್ಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಕಟ್ಟಡ ವಿಚಾರದಲ್ಲಿ ವ್ಯಾಪಕ ಗೋಲ್ಮಾಲ್ ನಡೆದಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಹಾಗಾಗಿ ಈ ವಿಚಾರವನ್ನು ಸೂಕ್ತ ತನಿಖೆಗೆ ಒಪ್ಪಿಸುವ ಆಗ್ರಹವೂ ಕೇಳಿ ಬಂದಿದೆ. ಇನ್ನಾದ್ರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ಅನುದಾನ ಬಿಡುಗಡೆ ಮಾಡಿ ಜನರ ತೆರಿಗೆ ಹಣ ಪೋಲಾಗುವುದನ್ನು ತಪ್ಪಿಸಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:38 am, Wed, 17 January 24