ಕೊಡಗಿನಲ್ಲಿ ಗೃಹಿಣಿ ಆತ್ಮಹತ್ಯೆ ಪ್ರಕರಣ; ಸಾವಿಗೆ ಹೊಸ ತಿರುವು ನೀಡಿದ ವಾಟ್ಯಾಪ್​ ಚಾಟಿಂಗ್

Kodagu News: ನೇಣು ಬಿಗಿದುಕೊಂಡು ಅಮೀರ(20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಅಮೀರ ಪೋಷಕರಿಂದ ವರದಕ್ಷಿಣೆ ಕಿರುಕುಳದ ಆರೋಪ ಕೇಳಿ ಬಂದಿದೆ. 11 ತಿಂಗಳ ಹಿಂದೆ ರುವೈಸ್ ಎಂಬಾತನನ್ನು ಅಮೀರ ವಿವಾಹವಾಗಿದ್ದರು. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಕೊಡಗಿನಲ್ಲಿ ಗೃಹಿಣಿ ಆತ್ಮಹತ್ಯೆ ಪ್ರಕರಣ; ಸಾವಿಗೆ ಹೊಸ ತಿರುವು ನೀಡಿದ ವಾಟ್ಯಾಪ್​ ಚಾಟಿಂಗ್
ಅಮೀರ(20)

ಕೊಡಗು: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಅ್ಯಂಗೇರಿ ಗ್ರಾಮದಲ್ಲಿ ನಡೆದಿದೆ. ನೇಣು ಬಿಗಿದುಕೊಂಡು ಅಮೀರ(20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಅಮೀರ ಪೋಷಕರಿಂದ ವರದಕ್ಷಿಣೆ ಕಿರುಕುಳದ ಆರೋಪ ಕೇಳಿ ಬಂದಿದೆ.11 ತಿಂಗಳ ಹಿಂದೆ ರುವೈಸ್ ಎಂಬಾತನನ್ನು ಅಮೀರ ವಿವಾಹವಾಗಿದ್ದರು. ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

 ವಾಟ್ಯಾಪ್​ ಚಾಟಿಂಗ್ ವಾಯ್ಸ್
ಸಾವಿಗೆ ಕೆಲವೇ ನಿಮಿಷಗಳ ಮೊದಲು ವಾಟ್ಯಾಪ್ ವಾಯ್ಸ್ ಮೆಸೇಜ್ ಮೂಲಕ ಅಮೀರಾ ಪತಿ ತಲಾಖ್ ನೀಡಿದ್ದಾನೆ. ಎರಡು ಬಾರಿ ಪತಿ ರುಬೈಸ್ ತಲಾಖ್ ಹೇಳಿದ್ದಾನೆ. ವಾಟ್ಯಾಪ್ ವಾಯ್ಸ್​ನಲ್ಲಿ ತಲಾಖ್ ಬಂದ ಬೆನ್ನಿಗೇ ಅಮೀರ ನೇಣು ಹಾಕಿಕೊಂಡಿದ್ದಾರೆ. ಈಗ ಭಾರತದಲ್ಲಿ ತ್ರಿವಳಿ ತಲಾಖ್​ ಸಿಂಧು ಅಲ್ಲ. ಆದರೂ ಗಂಡನ ತಲಾಖ್​ ಎಂಬ ವಾಯ್ಸ್​ ನೋಟ್​ನಿಂದ ನೊಂದ ಅಮೀರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಮೀರಾ ಮತ್ತು ಕುಂಜಿಲ ಗ್ರಾಮದ ರುಬೈಸ್​ ಕಾಲೇಜು ದಿನಗಳಲ್ಲೇ ಪ್ರೀತಿಸಿದ್ದರು. ಪಿಯುಸಿ ಮುಗಿಯುತ್ತಿದ್ದಂತೆ ಇಬ್ಬರೂ ಹಠಕ್ಕೆ ಬಿದ್ದು ಪೋಷಕರನ್ನು ಒಪ್ಪಿಸಿ ವಿವಾಹವಾಗಿದ್ದರು. ಕಳೆದ ನವೆಂಬರ್​ ತಿಂಗಳಲ್ಲಿ ಇಬ್ಬರ ವಿವಾಹ ನೆರವೇರಿತ್ತು. ವಿವಾಹದ ಸಂದರ್ಭ 25 ತೊಲ ಚಿನ್ನ ಕೊಡುವಂತೆ ಪತಿ ರುಬೈಸ್​ ಕುಟುಂಬ ಬೇಡಿಕೆ ಇಟ್ಟಿತ್ತು . ಆದರೆ ಬಡತನದಲ್ಲಿದ್ದ ಅಮೀರಾಳ ತಂದೆ ಮೊಹಮ್ಮದ್​ 12 ತೊಲ ಬಂಗಾರ ಹಾಕಿ ಚೆನ್ನಾಗಿಯೇ ವಿವಾಹ ಮಾಡಿಕೊಟ್ಟಿದ್ದರು. ಆದರೆ ವಿವಾಹದ ಬಳಿಕ ಕುಂಜಿಲ ಗ್ರಾಮದ ಪತಿ ಮನೆಯಲ್ಲಿ ಅಮೀರಾಳಿಗೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು. ಪ್ರತಿದಿನ ಬಂಗಾರ ಮತ್ತು ಒಡವೆ ತರುವಂತೆ ಪತಿಮನೆಯವರು ಪೀಡಿಸುತ್ತಿದ್ದರು. ಹಾಗಾಗಿ ಹಿಂಸೆ ತಾಳಲಾರದೆ, ಹಲವು ಬಾರಿ ತಂದೆ-ತಾಯಿಗೆ ದೂರವಾಣಿ ಕರೆ ಮಾಡಿ ಅಮೀರಾ ಅತ್ತಿದ್ದಳು. ಕೊನೆಗೆ ಯಾವಾಗ ಹಿಂಸೆ ಜಾಸ್ತಿಯಾಯಿತೋ ತಂದೆ ಮೊಹಮ್ಮದ್​ ಸ್ವತಃ ಹೋಗಿ ಮಗಳನ್ನು
ತನ್ನ ಮನೆಗೆ ಕರೆದುಕೊಂಡು ಬಂದಿದ್ದರು. ಕಳೆದೊಂದು ತಿಂಗಳಿನಿಂದ ಅಮೀರಾ ತನ್ನ ತವರು ಮನೆಯಲ್ಲೇ ಉಳಿದಿದ್ದಳು.

ಮೊಬೈಲ್​ ಫೋನ್​ನಲ್ಲೇ ಟಾರ್ಚರ್​ ಕೊಡುತ್ತಿದ್ದ ಪತಿ ರುಬೈಸ್​
ಪತಿ ರುಬೈಸ್​ ಕಳೆದ ಕೆಲವು ತಿಂಗಳಿನಿಂದ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾನೆ. ಚಿನ್ನ ಅಥವಾ ಹಣ ತಾರದೆ ತನ್ನ ಮನೆಗೆ ಹೋಗದಂತೆ ಆತ ಪತ್ನಿ ಅಮೀರಾಗೆ ತಾಕೀತು ಮಾಡುತ್ತಿದ್ದ. ಮಾತ್ರವಲ್ಲದೆ ಇತ್ತೀಚೆಗೆ ಕೆಲವು ದಿನಗಳಿಂದ ನೀನು ಸಾಯಿ, ನಾನು ಬೇರೆ ಹುಡುಗಿಯನ್ನು ನೋಡಿದ್ದೇನೆ. ಅವಳನ್ನೇ ಮದುವೆಯಾಗುತ್ತೇನೆ ಎಂದು ಮಾನಸಿಕ ಹಿಂಸೆ ನೀಡುತ್ತಿದ್ದ. ಇವೆಲ್ಲವನ್ನೂ ತಂದೆ -ತಾಯಿ ಜೊತೆ ಮುಕ್ತವಾಗಿ ಅಮೀರಾ ಹೇಳಿಕೊಂಡಿರಲಿಲ್ಲ. ಯಾಕಂದರೆ ತಾನಾಗಿ ಇಷ್ಟಪಟ್ಟು ಆತನ್ನನ್ನು ವಿವಾಹವಾಗಿದ್ದಳು. ಇದೀಗ ತನ್ನಿಂದಾಗಿ ಬಡತನದಲ್ಲಿರುವ ತನ್ನ ತಂದೆಗೆ ಹಿಂಸೆಯಾಗುತ್ತಿದೆ ಎಂದು ನೊಂದುಕೊಳ್ಳುತ್ತಿದ್ದಳು. ಹಾಗಾಗಿ ತಾನೇ ನೋವನ್ನು ನುಂಗಿಕೊಳ್ಳುತ್ತಿದ್ದಳು ಎಂದು ತಂದೆ ಮುಹಮ್ಮದ್ ಬೇಸರ ವ್ಯಕ್ತಪಡಿಸುತ್ತಾರೆ.

ವಾಟ್ಸಾಪ್​ನಲ್ಲೇ ತಲಾಖ್ ನೀಡಿದ ಪತಿ – ಮನನೊಂದು ನೇಣಿಗೆ ಶರಣಾದ ಪತ್ನಿ
ಮೊನ್ನೆ ಅಕ್ಟೋಬರ್​ 4ಕ್ಕೆ ಮಧ್ಯಾಹ್ನ 2.30ರ ಸುಮಾರಿಗೆ ಪತಿ ರುಬೈಸ್​ ವಾಟ್ಸಾಪ್​​ ಆಡಿಯೋ ಮೆಸೇಜ್ ಒಂದನ್ನು ಕಳುಹಿಸಿದ್ದಾನೆ. ಅದನ್ನು ಕೇಳಿದ ಅಮೀರಾಳಿಗೆ ಜಂಘಾಬಲವೇ ಉಡಿದುಹೋಗಿದೆ. ಅದರಲ್ಲಿ ಆತ ಎರಡು ಬಾರಿ ತಲಾಖ್ ಹೇಳಿದ್ದ. ತಾನು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಇಷ್ಟಪಟ್ಟು ವಿವಾಹವಾಗಿದ್ದ ಅಮೀರಾಳಿಗೆ ಪತಿಯಿಂದ ತಲಾಖ್ ಪದವನ್ನು ಕೇಳಿ ಅರಗಿಸಿಕೊಳ್ಳಲಾಗಿಲ್ಲ. ಈ ವಾಯ್ಸ್​ ಮೆಸೇಜ್ ಬಂದ ಐದು ನಿಮಿಷದಲ್ಲೇ ಆಕೆ ನೇಣು ಹಾಕಿಕೊಂಡಿದ್ದಾಳೆ. 20 ವರ್ಷ ಸಾಕಿ ಸಲಹಿದ್ದ ತಮ್ಮ ಮುದ್ದಿನ ಮಗಳು ಕ್ಷಣಮಾತ್ರದಲ್ಲಿ ಹೆಣವಾಗಿ ಹೋಗಿದ್ದು, ಅಮೀರಾಳ ಕುಟುಂಬಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಅಮೀರಾಳ ಮೊಬೈಲ್​ ಲಾಕ್​ ಆಗಿದ್ದು ಹಲವು ಮಾಹಿತಿಗಳು ಅದರಲ್ಲಿರುವ ಸಾಧ್ಯತೆ ಇದೆ ಎನ್ನುತ್ತಾರೆ ಪೋಷಕರು

ಪೊಲೀಸರ ವಿರುದ್ಧ ಆಕ್ರೋಶ
ಪತಿ ರುಬೈಸ್​, ಆತನ ತಂದೆ ಅಬ್ದುಲ್ಲಾ, ತಾಯಿ ಜಮೀಲಾಳ ವಿರುದ್ಧ ಅಮೀರಾಳ ತಂದೆ ಮೊಹಮ್ಮದ್ ಭಾಗಮಂಡಲ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು  ನೀಡಿದ್ದಾರೆ. ಆದರೆ ಪೊಲೀಸರು ಕೇವಲ ರುಬೈಸ್ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿಕೊಂಡಿದ್ದು, ತಂದೆ -ತಾಯಿಯನ್ನು ಎಫ್​ಐಆರ್​ನಿಂದ ಕೈಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ಅಸಮಾಧಾನ ವ್ಯಜಕ್ತಪಡಿಸಿದ್ದಾರೆ. ಹಾಗಾಗಿ ಮಹಮ್ಮದ್​ ಮತ್ತು ಕುಟುಂಬ ಇದೀಗ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ.

ಕಲಬುರಗಿ: ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ಕಲಬುರಗಿ ನಗರದ ಪ್ರಗತಿ ಕಾಲೋನಿಯಲ್ಲಿ ನಡೆದಿದೆ. ಪತಿಯೇ ಪತ್ನಿ ಕೊಲೆ ಮಾಡಿ ಫ್ಯಾನಿಗೆ ನೇಣು ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಜೋತಿ (22) ಮೃತ ದುರ್ದೈವಿ. ಏಳು ತಿಂಗಳ ಹಿಂದಷ್ಟೇ ಲೋಕೇಶ್ ಅನ್ನೋ ವ್ಯಕ್ತಿ ಜೊತೆ ಜೋತಿ ಮದುವೆಯಾಗಿತ್ತು.

ಕೆಕೆಆರ್ ಟಿ ಸಿ ಯ ಸೇಡಂ‌ ಡಿಪೋ ದಲ್ಲಿ ಚಾಲಕ ನಾಗಿರೋ ಲೋಕೇಶ್, ಕಲಬುರಗಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ರಾತ್ರಿ ಲೋಕೇಶ್ ಮತ್ತು ಅವರ ಕುಟುಂಬವರು ಜೊತಿಯ್ನನು ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ.

ಕತ್ತು ಹಿಸುಕಿ ಕೊಲೆ ಮಾಡಿ ನಂತರ ಫ್ಯಾನಿಗೆ ಶವ ನೇತು ಹಾಕಿದ್ದಾರೆ. ಹಣಕ್ಕಾಗಿ‌ ಲೋಕೆಶ್ ಪ್ರತಿದಿನ ಜೋತಿಗೆ ಪೀಡಿಸುತ್ತಿದ್ದ. ಮದುವೆ ಸಮಯದಲ್ಲಿ 120 ಗ್ರಾಂ ಬಂಗಾರ, ಐದು ಲಕ್ಷ ವರದಕ್ಷಿಣೆ ನೀಡಿದ್ದೇವು ಎಂದು ಜೊತಿ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪತಿ ಲೋಕೇಶ್ ಮತ್ತು ಅವರ ಕುಟುಂಬದ ವಿರುದ್ಧ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು; ಉದಯ ನರ್ಸಿಂಗ್ ಹೋಂ ವಿರುದ್ಧ ಆರೋಪ
ಚಿತ್ರದುರ್ಗ ಜಿಲ್ಲೆಯ ಜೆಸಿಆರ್ ಬಡಾವಣೆಯಲ್ಲಿರುವ ಉದಯ ನರ್ಸಿಂಗ್ ಹೋಂನಲ್ಲಿ ಪರಶುರಾಂಪುರ ಗ್ರಾಮದ ಬಾಣಂತಿ ಮಾನಸಾ(27) ಸಾವನಪ್ಪಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಸಾವನ್ನಪ್ಪಿದ್ದಾರೆ. ಮಾನಸಾ ಸಾವಿನ ಬಳಿಕ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ.

ಉದಯ ನರ್ಸಿಂಗ್ ಹೋಂನಲ್ಲಿ ಸೀರಿಯಸ್ ಎಂದು ಹೇಳಿ ಸಾಗು ಹಾಕಿದ್ದಾರೆ. ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ತೆರಳಿದಾಗ ಸಾವಿನ ಬಗ್ಗೆ ಖಚಿತವಾಗಿದೆ. ಹೀಗಾಗಿ ಮೃತಳ ಸಂಬಂಧಿಕರು ಉದಯ ನರ್ಸಿಂಗ್ ಹೋಂ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಉದಯ ನರ್ಸಿಂಗ್ ಹೋಂ ಬಳಿ ಧರಣಿ ನಡೆಸುತ್ತಿದ್ದಾರೆ.

ಇದನ್ನೂ ಓದಿ:
ಕೊವಿಡ್ ಬಳಿಕ ಕುಟುಂಬಗಳ ಸಾಮೂಹಿಕ ಆತ್ಮಹತ್ಯೆ ವಿಚಾರ: ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳುತ್ತೇವೆ ಎಂದ ಸಿಎಂ ಬೊಮ್ಮಾಯಿ

ಕೊವಿಡ್‌ಗೆ ಪತಿ ಬಲಿ: ಮಗಳಿಗೆ ನೇಣು ಬಿಗಿದು ಪತ್ನಿಯೂ ಆತ್ಮಹತ್ಯೆಗೆ ಯತ್ನ, 12 ವರ್ಷದ ಮಗಳು ಸಾವು

Read Full Article

Click on your DTH Provider to Add TV9 Kannada