ಮಿಸೆಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಕೊಡಗಿನ ಕಾವ್ಯಾ ಸಂಜು

TV9 Digital Desk

| Edited By: ganapathi bhat

Updated on:Oct 07, 2021 | 10:13 PM

ಎರಡು ಮಕ್ಕಳ ತಾಯಿಯಾದ್ರೇನು, ಇನ್ನೂ ಕೂಡ ನಾನು ಸಾಧಿಸಬಹುದು ಅಂತ ಯೋಚಿಸಿದ್ದೇ ತಡ, ತಮ್ಮ ಯೋಜನೆಯನ್ನ ಕಾರ್ಯರೂಪಕ್ಕೆ ತಂದೇ ಬಿಟ್ಟರು. ಪರಿಣಾಮ ಇಂದು ಕಾವ್ಯಾ ಸಂಜು ಇಡೀ ವಿಶ್ವವೇ ಗುರುತಿಸುವಂತಹ ಸಾಧನೆ ಮಾಡಿ ಹಸನ್ಮುಖಿಯಾಗಿದ್ದಾರೆ.

ಮಿಸೆಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಕೊಡಗಿನ ಕಾವ್ಯಾ ಸಂಜು
ಕಾವ್ಯಾ ಸಂಜು

Follow us on

ಮಡಿಕೇರಿ: ಅವರು ಎರಡು ಮಕ್ಕಳ ತಾಯಿಯಾಗಿ ಗೃಹಿಣಿಯಾಗಿ ಜೀವನ ಮಾಡ್ತಾ ಇದ್ದವರು. ಎಲ್ಲಾ ಮಹಿಳೆಯರಂತೆ ಅವರೂ ಯೋಚನೆ ಮಾಡಿದ್ದಿದ್ದರೆ, ಬಹುಶಃ ಅವರ ಜೀವನ ಇಷ್ಟನ್ನು ದಾಟಿ ಮುಂದೆ ಹೋಗ್ತಾ ಇರ್ಲಿಲ್ಲ. ಆದ್ರೆ ಎರಡು ಮಕ್ಕಳ ತಾಯಿಯಾದ್ರೇನು, ಇನ್ನೂ ಕೂಡ ನಾನು ಸಾಧಿಸಬಹುದು ಅಂತ ಯೋಚಿಸಿದ್ದೇ ತಡ, ತಮ್ಮ ಯೋಜನೆಯನ್ನ ಕಾರ್ಯರೂಪಕ್ಕೆ ತಂದೇ ಬಿಟ್ಟರು. ಪರಿಣಾಮ ಇಂದು ಅವರು ಇಡೀ ವಿಶ್ವವೇ ಗುರುತಿಸುವಂತಹ ಸಾಧನೆ ಮಾಡಿ ಹಸನ್ಮುಖಿಯಾಗಿದ್ದಾರೆ.

ಇಲ್ಲಿ ಹೇಳುತ್ತಿರುವುದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಸಮೀಪದ ಬಾಳಜಿ ಗ್ರಾಮದ ಕೊಣಿಯಂಡ ಕಾವ್ಯಾ ಸಂಜು ಎಂಬ ಮಹಿಳೆಯ ಬಗ್ಗೆ. ಅವರ ವಯಸ್ಸು 37. ಅವರು ಎದೆಯೆತ್ತರ ಬೆಳೆದು ನಿಂತಿರೋ ಎರಡು ಮಕ್ಕಳ ತಾಯಿ. ಕಾಲೇಜು ದಿನಗಳಲ್ಲಿ ಫ್ಯಾಶನ್​ ಷೋ, ಡಾನ್ಸ್​ ಎಂದು ಆಸಕ್ತಿಯಿಂದ ಸ್ಟೇಜ್​ ಷೋ ಕೊಟ್ಟವರು ಅವರು. ಆದ್ರೆ ಸಾಂಸಾರಿಕ ಜವಾಬ್ದಾರಿ ಬಂದಾಗ ಇವೆಲ್ಲವನ್ನೂ ಕೈ ಬಿಟ್ಟಿದ್ದರು. ಹೀಗೆ ಸರಿ ಸುಮಾರು 15 ವರ್ಷಗಳ ಕಾಲ ಗೃಹಿಣಿಯಾಗಿ ಜೀವನ ಮಾಡಿದ್ದರು. ಆದರೆ, ತಮ್ಮೊಳಗಿನ ಪ್ರತಿಭೆ, ಕನಸುಗಳನ್ನು ಹಾಗೇ ಕಾಪಾಡಿ ಇಟ್ಟುಕೊಂಡಿದ್ದರು. ಅವರ ಉತ್ಸಾಹ ಕುಗ್ಗಿರಲಿಲ್ಲ.

ಈ ನಡುವೆ ಅವರನ್ನು ಹುಡುಕಿ ಬಂದಿದ್ದು ಮಿಸೆಸ್​ ಕರ್ನಾಟಕ ಸ್ಪರ್ಧೆ. ಸದಾ ತಮಗೆ ಪ್ರೋತ್ಸಾಹ ನೀಡುವ ಪತಿ, ಮಕ್ಕಳ ಒತ್ತಾಯಕ್ಕೆ ಮಣಿದ ಇವರು ಸ್ಪರ್ಧೆಗೆ ಆಡಿಷನ್ ಕೊಟ್ಟು ಆಯ್ಕೆ​ ಕೂಡ ಆದರು. ಮೊದಲ ಸ್ಪರ್ಧೆಯಲ್ಲೇ ಮಿಸೆಸ್​ ಕರ್ನಾಟಕ ಆಗಿಯೂ ಹೊರ ಹೊಮ್ಮಿದರು. ಇದು ಆರಂಭಿಕ ಹೆಜ್ಜೆ. ಅಲ್ಲಿಂದ ಮಿಸೆಸ್​ ಸೌತ್ ಇಂಡಿಯಾ ಕಿರೀಟ ಕೂಡ ಇವರ ಮುಡಿಗೇರಿತು. ನಂತರದ ಸ್ಪರ್ಧೆಯೇ ಮಿಸೆಸ್​ ಇಂಡಿಯಾ ಬ್ಯೂಟಿ ಕ್ವೀನ್. ರಾಜಸ್ಥಾನದ ಜೈಪುರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳ 60ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಆದರೆ, ಬಹಳ ಆತ್ಮವಿಶ್ವಾಸ ಮತ್ತು ಬುದ್ಧಿವಂತಿಕೆಯಿಂದ ಸ್ಪರ್ಧೆ ಎದುರಿಸಿದ ಕಾವ್ಯಾರಿಗೆ ಮಿಸೆಸ್​ ಇಂಡಿಯಾ ಪ್ರಶಸ್ತಿ ಒಲಿದುಬಂತು. ಅಲ್ಲಿಯೂ ಕೂಡ ಗೆದ್ದು ಹೊಸ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಈಗ ಇಂಡೋನೇಷ್ಯಾದಲ್ಲಿ ನಡೆಯಲಿರುವ ಮಿಸೆಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಇವರನ್ನು ಬೆಂಬಲಿಸಿ ಸ್ಪರ್ಧೆಗೆ ತಯಾರು ಮಾಡಿದ್ದೇ ಮಕ್ಕಳು ಮತ್ತು ಪತಿ ಸಂಜು. ಕಳೆದ 10, 15 ವರ್ಷಗಳಿಂದ ಕುಟುಂಬಕ್ಕಾಗಿ ಬಹಳಷ್ಟು ತ್ಯಾಗ ಮಾಡಿದ್ದ ನೀನು ಇನ್ನಾದ್ರೂ ನಿನ್ನ ಪ್ರತಿಭೆಗೆ ಶ್ರಮಿಸು ಎಂದು ಅವರೆಲ್ಲರೂ ಬೆಂಬಲಿಸಿದ್ದಾರೆ. ಪತಿ ಮಕ್ಕಳ ಪ್ರೋತ್ಸಾಹದಿಂದಾಗಿ ಇದೀಗ ಅವರು ಇಂಡೋನೇಷ್ಯಾದಲ್ಲಿ ನಡೆಯಲಿರುವ ಮಿಸೆಸ್​ ವರ್ಲ್ಡ್​ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಕೇವಲ ದೇಹ ಸೌಂದರ್ಯ ಮಾತ್ರವಲ್ಲದೆ, ಸ್ಪರ್ಧಿಗಳ ಬುದ್ಧಿಮತ್ತೆ, ಸಾಮಾನ್ಯ ಜ್ಞಾನ, ವ್ಯಕ್ತಿತ್ವ, ನಾಯಕತ್ವ ಗುಣಗಳನ್ನ ಪರೀಕ್ಷೆಗೆ ಒಡ್ಡಲಾಗುತ್ತೆ. ಇದೆಲ್ಲದರಲ್ಲೂ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ ಕಾವ್ಯಾ ಸಂಜು.

ಈ ವರ್ಷಾಂತ್ಯಕ್ಕೆ ಇಂಡೋನೇಷ್ಯಾದಲ್ಲಿ ನಡೆಯಲಿರೋ ಮಿಸೆಸ್​ ವರ್ಲ್ಡ್​ ಚಾಂಪಿಯನ್​ಶಿಪ್​ಗೆ ಕಾವ್ಯಾ ಅವರು ಈಗಾಗಲೇ ತಯಾರಿಯಲ್ಲಿ ತೊಡಗಿದ್ದಾರೆ. ತಮ್ಮ ದೇಶದ ಹೆಸರನ್ನೂ ಹೀಗೂ ಪ್ರಸಿದ್ಧಿಗೆ ತರಬಹುದು ಎಂಬುದನ್ನ ಯೋಚಿಸಿ ಪುಳಕಿತರಾಗಿದ್ದಾರೆ. ಗೃಹಿಣಿಯಾದ್ರೆ ಜೀವನದಲ್ಲಿ ಸಾಧನೆಗಳು ಮುಗೀದೇ ಹೋಯಿತು ಎಂದು ಭಾವಿಸುವವರಿಗೆ ಕಾವ್ಯ ಅವರು ಒಂದು ಭರವಸೆಯಾಗಿದ್ದಾರೆ ಎಂದು ಅವರ ಪತಿ ಸಂಜು ತಿಳಿಸಿದ್ದಾರೆ.

ವಿಶೇಷ ವರದಿ: ಗೋಪಾಲ್ ಐಮಂಡ, ಟಿವಿ9 ಕೊಡಗು

ಇದನ್ನೂ ಓದಿ: Tala kaveri: ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು ತೀರ್ಥೋದ್ಭವ; ಭಕ್ತರ ಪ್ರವೇಶಕ್ಕಿದ್ದ ನಿರ್ಬಂಧ ತೆರವು

ಇದನ್ನೂ ಓದಿ: ಕೊಡಗು: ಕೋಳಿ ಮೊಟ್ಟೆಯಲ್ಲಿ ಕಬ್ಬಿಣದ ಚೂರು ಪತ್ತೆ; ಗ್ರಾಹಕನಿಂದ ಆಹಾರ ಇಲಾಖೆಗೆ ದೂರು

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada