ಕೊಡಗು: ಬೇರೆ ಬೇರೆ ವಾಹನ ತಯಾರಿಕಾ ಕಂಪೆನಿಗಳಲ್ಲಿ ಕೆಲಸ ಮಾಡಿದ್ದ ಯುವಕ(Young man) ಕೊನೆಗೆ ತಾನೇ ಏಕೆ ವಾಹನಗಳನ್ನು ತಯಾರು ಮಾಡಬಾರದು ಎಂದು ಯೋಚಿಸಿದ್ದು, ಇಂದು ಮನೆಯಲ್ಲಿಯೇ(Home) ವಿವಿಧ ಮಾದರಿಯ ವಾಹನ ತಯಾರಿಸುತ್ತಿದ್ದಾನೆ. ತನ್ನದೇ ಬುದ್ಧಿಶಕ್ತಿಯಲ್ಲಿ ಮನೆಯಲ್ಲಿ ವಾಹನಗಳ ತಯಾರಿಕೆಯಲ್ಲಿ ತೊಡಗಿರುವ ಯುವಕ ಈಗಾಗಲೇ ಅನೇಕ ಬೈಕ್(Bike), ಕಾರು ಮತ್ತು ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿದ್ದಾನೆ. ಹಾಗಾದರೆ ಆ ಯುವಕ ಮಾಡಿರುವ ವಾಹನಗಳೆಷ್ಟು? ಆತನ ಪ್ರತಿಭೆ ಹೇಗಿದೆ ಎಂಬುವುದರ ಕುರಿತ ವಿವರ ಇಲ್ಲಿದೆ ನೋಡಿ.
ವಾಹನಗಳನ್ನು ತಯಾರಿಸಿದ ಈ ಯುವಕನ ಹೆಸರು ಆಕಾಶ್. ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಬಿಳಿಗೇರಿ ನಿವಾಸಿಯಾದ ಆಕಾಶ್ ಐಟಿಐಯಲ್ಲಿ ಎಂಎಂವಿ ಮಾಡಿ ಹಲವು ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾನೆ. ನಂತರ ತಾನೇ ಏಕೆ ವಾಹನಗಳನ್ನು ತಯಾರಿಸಬಾರದೆಂದು ಯೋಚಿಸಿ ಕೆಲಸಕ್ಕೆ ಗುಡ್ ಬೈ ಹೇಳಿ ಮನೆ ಕಡೆ ಮುಖ ಮಾಡಿದ್ದನು. ಇದೀಗ ಕಳೆದ ಕೆಲವು ವರ್ಷಗಳಿಂದ ಬೈಕ್, ಕೃಷಿ ಯಂತ್ರೋಪಕರಣಗಳು ಸೇರಿದಂತೆ ಹಲವು ವಾಹನಗಳನ್ನು ತಯಾರಿಸಿ ಸೈ ಎನಿಸಿಕೊಂಡಿದ್ದಾನೆ.
ಎಲ್ಲಾ ಬಿಡಿಭಾಗಗಳನ್ನು ತಂದು ಮನೆಯಲ್ಲಿ ಕೆಲಸ ಮಾಡುತ್ತಿರುವ ಆಕಾಶ್ ಇದುವರೆಗೆ 6 ಬೈಕ್, 2 ಸ್ಕೂಟರ್, ಸಾಮಾಗ್ರಿ ಸಾಗಿಸುವ 4 ಟ್ರ್ಯಾಲಿ, 11 ಬ್ಯಾಟರಿ ಚಾಲಿತ ವಾಹನಗಳನ್ನು ತಯಾರಿಸಿ ಮಾರಾಟ ಮಾಡಿದ್ದಾರೆ. ಇನ್ನೂ ವಿಶೇಷವಾದ ಬೈಕ್ ಕೂಡ ಸಿದ್ಧವಾಗಿದ್ದು, ನೋಡಲು ಆಕರ್ಷಕವಾಗಿದೆ. ಇಷ್ಟಕ್ಕೆ ಯುವಕನ ಉತ್ಸಾಹ ಕಡಿಮೆಯಾಗಿಲ್ಲ. ಕೊಡಗಿನ ಹೋಂಸ್ಟೇ, ರೆಸಾರ್ಟ್ ಒಳಗೆ ಒಡಾಡಲು ಕೂಡ ವಾಹನ ತಯಾರಿಸಿದ್ದಾನೆ.
ಆಕಾಶ್ ತಯಾರಿಸಿದ ಬೈಕ್ ಹಾಗೂ ಸಣ್ಣ ಕಾರುಗಳು ರೆಸಾರ್ಟ್, ಹೋಂಸ್ಟೇಗಳಲ್ಲಿ ಉಪಯೋಗಿಸಲು ಹೇಳಿ ಮಾಡಿಸಿದಂತಿದೆ. ಆದ್ದರಿಂದ ರೆಸಾರ್ಟ್ಗಳಿಗೆ ತಮ್ಮ ವಾಹನಗಳನ್ನು ಮಾರಾಟ ಮಾಡಿದ್ದಾನೆ. ಇದರ ಜೊತೆಗೆ ಏಲಕ್ಕಿ ಹಾಗೂ ಕಾಳು ಮೆಣಸು ಒಣಗಿಸುವ ಯಂತ್ರಗಳು, ಮೆಣಸು ಬಿಡಿಸುವ ಯಂತ್ರಗಳನ್ನು ತಾನೇ ತಯಾರು ಮಾಡುತ್ತಿರುವುದು ವಿಶೇಷ. ಮಗನ ಈ ಸಾಧನೆಗೆ ಪೋಷಕರು ಸಂತಸಗೊಂಡಿದ್ದಾರೆ. ಮಗನ ಪ್ರತಿಭೆ ಹೊರಜಗತ್ತಿಗೆ ಗೊತ್ತಾದರೆ ಸಾಕು. ಅವಕಾಶಗಳು ತಾನಾಗಿಯೇ ಬರಬಹುದು ಎಂದು ಆಕಾಶ್ ತಾಯಿ ಗಾಯತ್ರಿ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಎಲೆಮರೆಯ ಕಾಯಿಯಂತಿರುವ ಇಂತಹ ಪ್ರತಿಭೆಗಳಿಗೆ ಉತ್ತಮ ಅವಕಾಶ ಒದಗಿಬರಲಿ. ಆ ಮೂಲಕ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂಬುವುದು ನಮ್ಮ ಆಶಯ.
ವರದಿ: ಗೋಪಾಲ್ ಸೋಮಯ್ಯ
ಇದನ್ನೂ ಓದಿ:
ದೇಶದಲ್ಲಿ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಮೊದಲ ಎಲೆಕ್ಟ್ರಿಕ್ ಹೆದ್ದಾರಿ; ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ವಿಶಿಷ್ಟ ರೀತಿಯಲ್ಲಿ ತಯಾರಾಗಿದೆ ಸೋಲಾರ್ ಬ್ಯಾಟರಿ ಚಾಲಿತ ಬೈಕ್; ಸದ್ದು ಮಾಡದೇ ಸುದ್ದಿಯಾದ ಟು ವೀಲರ್ ಹೇಗಿದೆ ಗೊತ್ತಾ?